Advertisement
ಮನೆ ಕಟ್ಟುವಾಗ ಗಾರೆ ಮೇಸ್ತ್ರಿಗೆ ಇಲ್ಲವೆ ಬಾರ್ ಬೆಂಡರ್ – ಸರಳು ಬಾಗಿಸುವವರಿಗೆ ಐಟಂ ಎಷ್ಟು ಬೇಕು ಎಂದು ಕೇಳಿದರೆ ಅವರು ಅವಸರದಲ್ಲಿ ಅಂದಾಜಾಗಿ ಒಂದು ಲೆಕ್ಕ ಹೇಳಿಬಿಡುತ್ತಾರೆ. ಅದೇ ಲೆಕ್ಕದಲ್ಲಿ ಮಾರುಕಟ್ಟೆಗೆ ಹೋಗಿ ತಂದರೆ, ಕೆಲಸ ಆದಮೇಲೆ ತೀರಾ ಹೆಚ್ಚಾಗಿರುತ್ತದೆ ಇಲ್ಲವೇ ಕಡಿಮೆ ಬಿದ್ದು, ಮತ್ತೆ ಅಂಗಡಿಗೆ ಹೋಗಬೇಕಾಗುತ್ತದೆ. ಕೆಲವೊಮ್ಮೆ ಒಂದು ಕೆಲಸಕ್ಕೆ ನಾಲ್ಕಾರು ಬಾರಿ ಅಲೆದಾಗ “ಮನೆ ಕಟ್ಟುವುದು ರೇಜಿಗೆಯ ಕೆಲಸ’ ಎಂದೆನಿಸಿಬಿಡುತ್ತದೆ.
ಎಣಿಸ ಬಹುದಾದಂಥದ್ದು, ಇಟ್ಟಿಗೆ, ಕಾಂಕ್ರಿಟ್ ಬ್ಲಾಕ್ ಥರಹದ್ದನ್ನು ಲೆಕ್ಕ ಹಾಕುವುದು ಅಷೇrನೂ ಕಷ್ಟವಲ್ಲ. ಎಂಟು ಇಂಚು ಎತ್ತರ, ಹದಿನಾರು ಇಂಚು ಉದ್ದ ಇರುವ ಕಾಂಕ್ರಿಟ್ ಬ್ಲಾಕ್, ಅದರ ಜಾಯಿಂಟ್ ಸೇರಿ ಪ್ರತಿ ಚದರ ಅಡಿಗೆ ಒಂದು ಬ್ಲಾಕ್ ಬೇಕಾಗುತ್ತದೆ. ನಿಮ್ಮ ಮನೆಯ ಕಾಂಪೌಂಡ್ ಇಪ್ಪತ್ತು ಅಡಿ ಉದ್ದ, ಸುಮಾರು ನಾಲ್ಕು ಅಡಿ ಎತ್ತರ ಇರಬೇಕು ಎಂದಿದ್ದರೆ, ಆರು ವರಸೆ ಕಟ್ಟಬೇಕಾಗುತ್ತದೆ. ಒಂದು ವರಸೆಯ ಎತ್ತರ ಎಂಟು ಇಂಚು ಹಾಗೂ ಅದಕ್ಕೆ ಕೆಳಗೆ ಹಾಕುವ ಗಾರೆ ದಪ್ಪ ಸೇರಿಸಿಕೊಂಡರೆ ಸುಮಾರು ನಾಲ್ಕೂಕಾಲು ಅಡಿ ಎತ್ತರ ಬರುತ್ತದೆ. ಒಟ್ಟಾರೆ, ಚದರ ಅಡಿ ಸುಮಾರು ಎಂಭತ್ತು ಅಡಿ ಆಗಿದ್ದು, ಸುಮಾರು ಎಂಭತ್ನಾಲ್ಕು ಬ್ಲಾಕ್ಸ್ ಬೇಕಾಗುತ್ತದೆ. ಹೆಚ್ಚುವರಿಯಾಗಿ ಒಂದೆರಡು ಬ್ಲಾಕ್ ಉಳಿದರೂ ಪರವಾಗಿಲ್ಲ. ಆದರೆ, ಒಂದೆರಡು ಬ್ಲಾಕ್ಸ್ ಕಡಿಮೆ ಆದರೂ ತೊಂದರೆ ಆಗುವುದರಿಂದ, ಪ್ರತಿಶತ ಐದರಷ್ಟು ಹೆಚ್ಚುವರಿ ತರಬೇಕಾಗುವುದು- ಬ್ಲಾಕ್ಸ್ ಒಡೆದರೆ ಇರಲೆಂದು. ಈ ರೀತಿಯಾಗಿ ಲೆಕ್ಕಾಚಾರ ಮಾಡಿ ವಸ್ತುಗಳನ್ನು ತಂದರೆ, ಹೆಚ್ಚಾಕಡಿಮೆ ಆಗಿ ಮತ್ತೆಮತ್ತೆ ಮಾರುಕಟ್ಟೆಗೆ ಹೋಗುವುದು ತಪ್ಪುತ್ತದೆ.
Related Articles
Advertisement
ಲೋಡ್, ಅನ್ ಲೋಡು ಲೆಕ್ಕಾಚಾರವಿವಿಧ ಸಾಕಣಿಕೆ ವಾಹನಗಳು ವಿವಿಧ ಭಾರ ಹೊರುವ ಸಾಮರ್ಥ್ಯ ಹೊಂದಿರುತ್ತವೆ. ಗಾರೆ ಮೇಸಿŒಗಳು ಸಾಮಾನ್ಯವಾಗಿ ಸಣ್ಣ ಲೋಡು, ದೊಡ್ಡ ಲೋಡು ಎಂದು ಹೇಳಿಬಿಡುತ್ತಾರೆ. ಆದರೆ, ಅದನ್ನು ನಿರ್ಧಿಷ್ಟ ಸಂಖ್ಯೆಯಲ್ಲಾಗಲೀ, ಘನ ಅಡಿ ಲೆಕ್ಕದಲ್ಲಾಗಲೀ ಹೇಳುವುದಿಲ್ಲ. ಹಾಗಾಗಿ, ನಾವು ಘನ ಅಡಿ ಲೆಕ್ಕ ಹಿಡಿಯುವುದು ಉತ್ತಮ. ಘನಅಡಿಯ ಇಲ್ಲವೇ ಘನ ಮೀಟರ್ ಲೆಕ್ಕಾಚಾರವೆಲ್ಲ ನಾವು ಪ್ರಾಥಮಿಕ ಶಾಲೆಯಲ್ಲೇ ಕಲಿತಿರುತ್ತೇವೆ. ಚದುರ ಅಡಿ ಕಾಂಕ್ರಿಟ್ ಸೂರಿಗೆ ಅದರ ದಪ್ಪವನ್ನೂ ಗುಣಿಸಿದರೆ, ನಮಗೆ ಘನ ಅಡಿ ಸಿಕ್ಕಿ ಬಿಡುತ್ತದೆ. ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಒಂದು ಮನೆಯ ಸೂರಿಗೆ ಆರು ಇಂಚು ಅಂದರೆ ಅರ್ಧ ಅಡಿ ದಪ್ಪದ ಕಾಂಕ್ರಿಟ್ ಹಾಕಬೇಕೆಂದರೆ, ಸಾವಿರದಲ್ಲಿ ಅರ್ಧ ಅಂದರೆ ಐನೂರು ಘನ ಅಡಿ ಕಾಂಕ್ರಿಟ್ ಬೇಕಾಗುತ್ತದೆ! ಈ ಕಾಂಕ್ರೀಟಿಗೆ, ವೈಜಾnನಿಕವಾಗಿ ಹೇಳಬೇಕೆಂದರೆ, ಮರಳು ಹಾಗೂ ಸಿಮೆಂಟ್ ಜೆಲ್ಲಿಕಲ್ಲುಗಳ ಸಂದಿಗಳಲ್ಲಿ ಸೇರಿಕೊಳ್ಳುವುದರಿಂದ, ಐನೂರು ಘನ ಅಡಿ ಜೆಲ್ಲಿಕಲ್ಲು ಬೇಕಾಗುತ್ತದೆ. ಆದರೆ, ನಮ್ಮಲ್ಲಿ ಜೆಲ್ಲಿಕಲ್ಲುಗಳು ಹೆಚ್ಚಾಗಿ ಕಂಡರೆ – ಸರಿಯಾಗಿ ಪ್ಯಾಕ್ ಆಗಿಲ್ಲ ಎಂದು ದಿಗಿಲು ಬೀಳುವುದರಿಂದ, ಜೆಲ್ಲಿಯನ್ನು ಕಡಿಮೆ ಹಾಕಲಾಗುತ್ತದೆ. ರೆಡಿ ಮಿಕ್ಸ್ ಕಾಂಕ್ರಿಟ್‌ನಲ್ಲೂ ಜೆಲ್ಲಿಕಲ್ಲುಗಳ ಬಳಕೆ ಕಡಿಮೆ ಇರುವುದರಿಂದ ಇತ್ತೀಚೆಗೆ ಜೆಲ್ಲಿಕಲ್ಲಿನ ಬಳಕೆ ಕಡಿಮೆ ಆಗಿದೆ. ಹಾಗಾಗಿ, ಹತ್ತು ಚದರ ಕಾಂಕ್ರಿಟ್ ಹಾಕಲು ಸುಮಾರು ನಾಲ್ಕು ನೂರು ಘನ ಅಡಿ ಜೆಲ್ಲಿಕಲ್ಲು ಸಾಕಾಗುತ್ತದೆ. ಮರಳು ಸುಮಾರು ಇನ್ನೂರ ಐವತ್ತರಿಂದ ಮುನ್ನೂರು ಘನ ಅಡಿ ಬೇಕಾಗುತ್ತದೆ. ಲೆಕ್ಕ ಹಾಕೋದು ಸುಲಭ
ಮರಳು ಜೆಲ್ಲಿ ಇತ್ಯಾದಿಯನ್ನು ಲಾರಿ ಮೇಲೆಯೇ ಲೆಕ್ಕ ಹಾಕುವುದು ಉತ್ತಮ. ಒಮ್ಮೆ ನೆಲದ ಮೇಲೆ ಗೋಪುರಾಕಾರವಾಗಿ ಬಿದ್ದಮೇಲೆ ಲೆಕ್ಕ ಹಿಡಿಯುವುದು ಕಷ್ಟ. ಲಾರಿಯಲ್ಲಿ ಶೇಖರಣೆ ಮಾಡಿಡುವ ಸ್ಥಳದ ಅಗಲ ಉದ್ದ ಹಾಗೂ ಎತ್ತರವನ್ನು ಗುಣಿಸಿದರೆ ನಮಗೆ ಘನ ಅಡಿ ಸುಲಭದಲ್ಲಿ ಸಿಗುತ್ತದೆ. ಇನ್ನು ಕಾಂಕ್ರಿಟ್ ಬ್ಲಾಕ್ ಹಾಗೂ ಇಟ್ಟಿಗೆಯನ್ನು ಲಾರಿ ಮೇಲೆ ಲೆಕ್ಕ ಹಾಕುವುದಕ್ಕಿಂತ ಕೆಳಗೆ ಅನ್ ಲೋಡ್ ಆದನಂತರ ಎಣಿಸುವುದು ಸುಲಭ. ಬ್ಲಾಕ್‌ಗಳು ಬಿಡಿಯಾಗಿರುವುದರಿಂದ, ಒಂದು, ಎರಡು ಎಂತಲೂ ಕೆಳಗಿಳಿಸುವಾಗ ಎಣಿಸಿಕೊಳ್ಳಬಹುದು ಇಲ್ಲವೇ ಜೋಡಿಸಿಟ್ಟಮೇಲೆ ಉದ್ದ, ಅಗಲ ಹಾಗೂ ಎತ್ತರದಲ್ಲಿ ಎಷ್ಟೆಷ್ಟು ಇದೆ ಎಂದು ಲೆಕ್ಕಮಾಡಿ, ನಂತರ ಗುಣಿಸಿಕೊಳ್ಳಬಹುದು. ಕೆಳಗಿನ ವರಸೆಯಲ್ಲಿ ಹತ್ತು ಬ್ಲಾಕ್ಸ್ ಇದ್ದು, ಅದರ ಪಕ್ಕದಲ್ಲಿ ಮತ್ತೂಂದು ಇದ್ದರೆ, ಅಲ್ಲಿಗೆ ಇಪ್ಪತ್ತು ಬ್ಲಾಕ್ಸ್ ಇವೆ ಎಂದು ಸುಲಭದಲ್ಲಿ ಲೆಕ್ಕ ಮಾಡಬಹುದು. ಇಂತಹದ್ದು ಆರು ವರಸೆ ಇದ್ದರೆ, ಒಟ್ಟಾರೆಯಾಗಿ ನೂರ ಇಪ್ಪತ್ತು ಎಂಬ ಲೆಕ್ಕ ಮಾಡಲು ಕಷ್ಟವೇನಲ್ಲ! ಇದೇ ರೀತಿಯಲ್ಲಿ, ಇಟ್ಟಿಗೆಗಳನ್ನೂ ಲೆಕ್ಕಾಚಾರ ಮಾಡಿಬಿಡಬಹುದು. ಆದರೆ, ಇಟ್ಟಿಗೆಗಳು ಸಣ್ಣದಿರುವುದರಿಂದ ಲಾರಿಯವರು ಲೆಕ್ಕಾಚಾರ ತಪ್ಪಿಸಲು ಕೆಲ ಉಪಾಯಗಳನ್ನು ಮಾಡುತ್ತಾರೆ. ಕೆಳಗಿನ ವರಸೆಯಲ್ಲಿ ಒಂದಕ್ಕೊಂದು ಅಂಟಿಕೊಂಡಂತೆ ಇಟ್ಟರೆ, ಮೇಲೆ ಬರುತ್ತಿದ್ದಂತೆ ಸಂದಿಬಿಡಲು ಶುರುಮಾಡಿ, ಪ್ರತಿ ವರಸೆಗೆ ಒಂದೆರಡು ಇಟ್ಟಿಗೆ ಕಡಿಮೆ ಬರುವಂತೆ ನಾಜೂಕಾಗಿ ಜೋಡಿಸಿಬಿಡುತ್ತಾರೆ. ಅವರ ಲೆಕ್ಕದಲ್ಲಿ ಈ ಸಂದಿಗಳೂ ಇಟ್ಟಿಗೆ ಲೆಕ್ಕಕ್ಕೆ ಸೇರಿಕೊಂಡು, ಒಂದು ಲೋಡಿಗೆ ನೂರಾರು ಇಟ್ಟಿಗೆಗಳಷ್ಟಾಗಿ ಬಿಡುತ್ತದೆ ಹಾಗೂ ಇದಕ್ಕೂ ಹೆಚ್ಚುವರಿ ಹಣ ಕೇಳುತ್ತಾರೆ. ಹಾಗಾಗಿ, ಇಟ್ಟಿಗೆ ವರಸೆಯ ಲೆಕ್ಕಾಚಾರ ಮಾಡುವಾಗ ಕೆಳಗೆ ಎಷ್ಟಿದೆ ಎಂಬುದರ ಲೆಕ್ಕಕ್ಕಿಂತ ಮೇಲು ವರಸೆಯಲ್ಲಿ ಎಷ್ಟಿದೆ? ಎಂದು ಎಣಿಸಿ ಹಣ ಪಾವತಿಸಿ. ನಾನಾ ಕಾರಣಗಳಿಂದಾಗಿ ಗಾರೆ ಕೆಲಸಕ್ಕೆ ಚೆನ್ನಾಗಿ ಓದು, ಬರಹ ಗೊತ್ತಿರುವವರು ಬರುವುದಿಲ್ಲ. ಆದರೆ, ಅವರು ಕುಶಲ ಕರ್ಮಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವರಾದರೂ ವಸ್ತುಗಳ ಲೆಕ್ಕಾಚಾರ ಅವರಿಂದ ಸಾಧ್ಯವಾಗದೆ, ಅಂದಾಜಿಗೆ ಇಳಿದುಬಿಡುತ್ತಾರೆ. ಹಾಗಾಗಿ, ಈ ಒಂದು ಕೆಲಸದಲ್ಲಿ ನಮ್ಮದೊಂದಷ್ಟು ಪರಿಣತಿಯನ್ನು ಪ್ರಯೋಗಿಸಿದರೆ, ಸಾಕಷ್ಟು ಹಣ ಉಳಿತಾಯ ಆಗುವುದರ ಜೊತೆಗೆ ದುಬಾರಿ ವಸ್ತುಗಳು ಪೋಲಾಗುವುದೂ ತಪ್ಪುತ್ತದೆ! ಹೆಚ್ಚಿನ ಮಾತಿಗೆ-98441 32826
ಆರ್ಕಿಟೆಕ್ಟ್ ಕೆ ಜಯರಾಮ್