“ಇದು ರೆಡಿಮೇಡ್ ಫುಡ್ ಅಲ್ಲ, ಎಲ್ಲವನ್ನು ತಂದು ತಯಾರಿಸಿದ ಮನೆಯಡುಗೆ …’
– ಹೀಗೆಂದರು ನಿರೂಪ್ ಭಂಡಾರಿ. “ರಂಗಿತರಂಗ’ ಚಿತ್ರ ಬಂದು ಎರಡು ವರ್ಷ ಕಳೆದಿದೆ. ಆದರೂ ನಿರೂಪ್ ಭಂಡಾರಿಯವರ ಯಾವ ಚಿತ್ರವೂ ಬಂದಿಲ್ಲ. ಆ ಚಿತ್ರದ ನಂತರ ಅನೌನ್ಸ್ ಮಾಡಿದ “ರಾಜರಥ’ ಚಿತ್ರ ಯಾವಾಗ ಬರುತ್ತದೆ ಎಂಬ ಪ್ರಶ್ನೆ ಆರಂಭವಾಗಿದೆ. ಹಾಗಾಗಿಯೆ ನಿರೂಪ್ ಭಂಡಾರಿ, ಸಿನಿಮಾ ತಡವಾಗಿದ್ದನ್ನು ಮನೆಯಡುಗೆಗೆ ಹೋಲಿಸಿ ಮಾತನಾಡಿದರು. ಹೌದು, “ರಂಗಿತರಂಗ’ ನಂತರ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಾಯಕ ನಿರೂಪ್ ಭಂಡಾರಿಯವರು ಮಾಡುತ್ತಿರುವ “ರಾಜರಥ’ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪುನೀತ್‌ರಾಜಕುಮಾರ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಈ ಚಿತ್ರದ ಟ್ರೇಲರ್‌ಗೆ ಪುನೀತ್ ಧ್ವನಿ ನೀಡಿದ್ದು, ಇವರ ಧ್ವನಿಯೊಂದಿಗೆ ಪಾತ್ರ ಪರಿಚಯವಾಗುತ್ತದೆ.
ನಾಯಕ ನಿರೂಪ್ ಭಂಡಾರಿಗೆ “ರಂಗಿತರಂಗ’ ನಂತರ ಸಾಕಷ್ಟು ಅವಕಾಶಗಳು ಬಂತಂತೆ. ಆದರೆ, “ರಾಜರಥ’ ಮಾಡಬೇಕೆಂಬ ಕಾರಣಕ್ಕೆ ಬೇರೆ ಯಾವ ಸಿನಿಮಾಗಳನ್ನು ಒಪ್ಪಿರಲಿಲ್ಲವಂತೆ. ಈಗ ಚಿತ್ರ ಸಿದ್ಧವಾಗಿದ್ದು, ಬಿಡುಗಡೆಯ ಹೊಸ್ತಿಲಿನಲ್ಲಿರುವ ಖುಷಿ ಅವರಿಗಿದೆ. ಇನ್ನು, ಚಿತ್ರದಲ್ಲಿ ಪುನೀತ್ ಕೂಡಾ ಒಂದು ಭಾಗವಾಗಿರುವ ಬಗ್ಗೆ ಖುಷಿ ಹಂಚಿಕೊಂಡರು.
ನಿರ್ದೇಶಕ ಅನೂಪ್ ಭಂಡಾರಿ ಈ ಬಾರಿ ಎರಡು ಭಾಷೆಯಲ್ಲಿ ಸಿನಿಮಾ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಆರ್ಯ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಕನ್ನಡದಲ್ಲಿ ಪುನೀತ್ ದ್ವನಿ ನೀಡಿದರೆ, ರಾಣಾ ದಗ್ಗುಬಾಟಿ ತೆಲುಗಿಗೆ ಧ್ವನಿ ನೀಡಿದ್ದಾರೆ. “ಪುನೀತ್ ಅವರು ನಮ್ಮ ಚಿತ್ರಕ್ಕೆ ಧ್ವನಿ ನೀಡಿರೋದು ಖುಷಿಯ ವಿಚಾರ. ಕಥೆಯ ತಿರುಳು ಹೇಳಿದಾಗ ಪುನೀತ್ ಖುಷಿಯಿಂದ ಒಪ್ಪಿಕೊಂಡು, ಎರಡು ದಿನ ಬಂದು ಧ್ವನಿ ನೀಡಿದ್ದಾರೆ. “ರಾಜರಥ’ ಚಿತ್ರಕೆ ಕನ್ನಡದ ರಾಜರತ್ನ ಧ್ವನಿ ನೀಡಿದ್ದು ಪ್ಲಸ್ ಪಾಯಿಂಟ್. ರೊಮ್ಯಾಂಟಿಕ್ ಕಾಮಿಡಿಯಲ್ಲಿ ಸಾಗುವ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎಂದರು ನಿರ್ದೇಶಕ ಅನೂಪ್ ಭಂಡಾರಿ. ಚಿತ್ರದಲ್ಲಿ ಅನೂಪ್ ಭಂಡಾರಿ ಹಾಗೂ ಅವರ ತಂದೆ ಸುಧಾಕರ್ ಕೂಡಾ ಕಾಣಿಸಿಕೊಂಡಿದ್ದಾರೆ. ಚಿತ್ರದ ಒಂದು ಸನ್ನಿವೇಶದಲ್ಲಿ ತಂದೆಯಿಂದ ಕೆನ್ನೆಗೆ ಬಾರಿಸಿಕೊಂಡಿದ್ದಾರೆ. “ನಿಜ ಜೀವನದಲ್ಲಿ ಅಪ್ಪ ನಮಗೆ ಒಂದು ಬಾರಿಯೂ ಹೊಡೆದಿಲ್ಲ. ಆದರೆ, ಚಿತ್ರದ ಸನ್ನಿವೇಶದಲ್ಲಿ ಕೆನ್ನೆಗೆ ಬಾರಿಸಿದ್ದಾರೆ’ ಎಂದರು ಅನೂಪ್. ಚಿತ್ರದಲ್ಲಿ ಅವಂತಿಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದು, ಅವರು ಕೂಡಾ ಖುಷಿ ಹಂಚಿಕೊಂಡರು. ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಸತೀಶ್ ಶಾಸ್ತ್ರಿ ಕೂಡಾ ಮಾತನಾಡಿದರು.
ರವಿಪ್ರಕಾಶ್ ರೈ