Advertisement

Covid Positive ಬಂದರೆ 7 ದಿನ ಹೋಂ ಐಸೊಲೇಷನ್ ಕಡ್ಡಾಯ: ಸಚಿವ ದಿನೇಶ್ ಗುಂಡೂರಾವ್

05:57 PM Dec 26, 2023 | Team Udayavani |

ಬೆಂಗಳೂರು: ಕೋವಿಡ್ ಪಾಸಿಟಿವ್ ಬಂದರೆ ರೋಗಿಗಳು 7 ದಿನ ಕಡ್ಡಾಯವಾಗಿ ಹೋಂ ಐಸೊಲೇಷನ್ ನಲ್ಲಿರಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ನಿಟ್ಟಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನ ಸೌಧದಲ್ಲಿ ಇಂದು ಸಂಪುಟ ಉಪಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಕೋವಿಡ್ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು. ಕೋವಿಡ್ ಸಂಪುಟ ಉಪಸಮಿತಿ ಸಭೆಯಲ್ಲಿ ತಜ್ಞರೊಂದಿಗೆ ಚರ್ಚೆ ನಡೆಸಿದ ನಂತರ ತಂದಿರುವ ಮಾರ್ಗಸೂಚಿಗಳೇನು ಎಂದು ವಿವರಿಸಿದರು.

ಕೋವಿಡ್ ಸೋಂಕಿತರ ಮನೆಗಳಗೆ ಸರ್ಕಾರಿ ವೈದ್ಯರು ಭೇಟಿ ನೀಡಿ ಹೆಚ್ಚಿನ ನಿಗಾ ವಹಿಸುವಂತೆ  ಸೂಚನೆ ನೀಡಿದ್ದಾರೆ.ರಾಜ್ಯದಲ್ಲಿ ಜೆ.ಎನ್.1 ಉಪತಳಿ, ಹಾಗೂ ಕೋವಿಡ್ ಸೋಂಕಿನ ಕುರಿತು ವಿಸ್ತೃತವಾಗಿ ಸಭೆಯಲ್ಲಿ ಚರ್ಚೆ ನಡೆಸಿದ ಸಂಪುಟ ಉಪಸಮಿತಿ, ಕೋವಿಡ್ ನಿಯಂತ್ರಣ ವಿಚಾರದಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡಿತು.

ಹೊಸ ವರ್ಷಾಚರಣೆಗೆ ಸದ್ಯಕ್ಕೆ ನಿರ್ಬಂಧ ಹೇರುವುದು ಬೇಡ ಎಂಬ ನಿರ್ಧಾರವನ್ನ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಆದರೆ, ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಜನರು ಮಾಸ್ಕ್ ಹಾಕಿಕೊಳ್ಳುವಂತೆ ಸಲಹೆ ನೀಡಲು ನಿರ್ಧರಿಸಲಾಯಿತು.‌

ಕಾಯಿಲೆ ಹೊಂದಿದವರು ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಕ್ಸಿನ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸದ್ಯಕ್ಕೆ 30 ಸಾವಿರ ವ್ಯಾಕ್ಸಿನ್ ಗಳನ್ನ ಕೇಂದ್ರ ಸರ್ಕಾರದಿಂದ ಪಡೆದು ರಾಜ್ಯದ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ವಿತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ, ಆರೋಗ್ಯ ಇಲಾಖೆ ಆಯುಕ್ತ ರಂದೀಪ್,  ಸಮಿತಿ ಅಧ್ಯಕ್ಷ ಡಾ. ರವಿ ಹಾಗೂ ಹಿರಿಯ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.


ಸಂಪುಟ ಉಪಸಮಿತಿ ಸಭೆಯ ಹೈಲೆಟ್ಸ್

-ಮಕ್ಕಳಲ್ಲಿ ವೇಗವಾಗಿ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಜ್ವರ, ನೆಗಡಿ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬಾರದು. ಮನೆಯಲ್ಲೇ ಸೂಕ್ತ ಆರೈಕೆಗೆ ಮಾರ್ಗಸೂಚಿ ಹೊರಡಿಸಲು ನಿರ್ಧಾರ.

-ಕೋವಿಡ್ ಪಾಸಿಟಿವ್ ಆದವರು ಕಡ್ಡಾಯವಾಗಿ 7 ದಿನ ಹೋಮ್ ಐಸೊಲೇಷನ್ʼನಲ್ಲಿ ಇರಬೇಕು. ʻಹೋಮ್ ಐಸೊಲೇಷನ್ʼನಲ್ಲಿ ಇರುವ, ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ 7 ದಿನಗಳ ರಜೆ ಕೊಡಬೇಕು. ಐಸಿಯು ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಬಾಧಿತರಿಗೆ ಸಂಪೂರ್ಣ ಗುಣಮುಖರಾಗುವರೆಗೆ ರಜೆ ಕೊಡಿಸುವ ಕುರಿತು ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲು ಸಭೆಯಲ್ಲಿ ನಿರ್ಧಾರ.

-ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ರಚನೆಗೆ ನಿರ್ಧಾರ. ಬೆಂಗಳೂರಿನ ವಿಕ್ಟೋರಿಯಾ, ಮತ್ತು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್.‌ ಐಸಿಯು ಬೆಡ್, ಹಾಗೂ ಐಸೊಲೇಷನ್ ಬೆಡ್ ವ್ಯವಸ್ಥೆ..

-ರಾಜ್ಯದಲ್ಲಿ ಕೋವಿಡ್ 436 ಸಕ್ರಿಯ ಪ್ರಕರಣಗಳಿವೆ. ಹೋಮ್ ಐಸೊಲೇಷನ್ ನಲ್ಲಿರುವ 400 ಕೋವಿಡ್ ಸೋಂಕಿತರ ಮನೆಗಳಿಗೆ ವೈದ್ಯರು ಭೇಟಿ ನೀಡಿ ನಿಗಾ ವಹಿಸಲು ಸೂಚನೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರಲ್ಲಿ ಕೋವಿಡ್ ರೋಗಲಕ್ಷಣಗಳಿದ್ದರೆ ಕಡ್ಡಾಯವಾಗಿ ಟೆಸ್ಟಿಂಗ್ ನಡೆಸಬೇಕು. ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು.‌

-ಇತರೆ ಕಾಯಿಲೆ ಹೊಂದಿದವರಿಗೆ ಆದ್ಯತೆಯ ಮೇರೆಗೆ ವ್ಯಾಕ್ಸಿನ್ ನೀಡಲು ನಿರ್ಧಾರ. ಕೇಂದ್ರ ಸರ್ಕಾರದಿಂದ 30 ಸಾವಿರ ಲಸಿಕೆ ಪಡೆಯಲು ಸಂಪುಟ ಉಪ ಸಮಿತಿ ನಿರ್ಧಾರ. ಆರೋಗ್ಯ ಸಿಬ್ಬಂದಿಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಫ್ಲೂ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ.

-ಹೊಸ ವರ್ಷಾಚರಣೆಗೆ ಸೇರಿದಂತೆ ಯಾವುದೇ ಕಾರ್ಯಕ್ರಮ ಅಥವಾ ಜನರ ಓಡಾಟಕ್ಕೆ ಸದ್ಯ ಯಾವುದೇ ನಿರ್ಬಂಧ ಹೇರುವುದಿಲ್ಲ. ಆದರೆ ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಧರಿಸಿ ಕೋವಿಡ್ ನಿಯಮಾವಳಿ ಪಾಲನೆ ಮಾಡಲು ಸಾರ್ವಜನಿಕರಲ್ಲಿ ಮನವಿ.

-ಕೋವಿಡ್ ಶಂಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡುವ ಎಲ್ಲರನ್ನು ಸಿ.ಟಿ ಸ್ಕ್ಯಾನಿಂಗ್ ಗೆ ಒಳಪಡಿಸುವುದು ನಿಷೇಧ. ಕೋವಿಡ್ ಪಾಸಿಟಿವ್ ಬಂದವರನ್ನ ಮಾತ್ರ ಸಿ.ಟಿ ಸ್ಕ್ಯಾನಿಂಗ್ ಗೆ ಒಳಪಡಿಸಬಹುದಯ.

-ಇಂದಿನಿಂದ ಪ್ರತಿ ನಿತ್ಯ 5 ಸಾವಿರ ಕೋವಿಡ್ ಟೆಸ್ಟಿಂಗ್. ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ. ನಾಲ್ಕು ಮೊಬೈಲ್ ಆಕ್ಸಿಜನ್ ಕಂಟೆಂಡರ್ ಗಳ ಖರೀದಿಗೆ ಸಭೆಯಲ್ಲಿ ತೀರ್ಮಾನ.

Advertisement

Udayavani is now on Telegram. Click here to join our channel and stay updated with the latest news.

Next