ದೇವ ಗುರು ಬೃಹಸ್ಪತಿ ಆಚಾರ್ಯರು ಮಗನಾದ ಕಚನನ್ನು ವಿದ್ಯೆ ಕಲಿಯಲೋಸುಗ ದೇವಲೋಕದಿಂದ ಭೂಲೋಕಕ್ಕೆ ದಾನವ ಗುರುಗಳಾದ ಶುಕ್ರಾಚಾರ್ಯರ ಬಳಿ ಕಳಿಸುತ್ತಾರೆ. ಕಚನು ಸೇವೆಮಾಡುತ್ತಾ ಸರ್ವವಿದ್ಯಾ ಪಾರಂಗತನಾಗುತ್ತಾನೆ.
ಶುಕ್ರಾಚಾರ್ಯರು ಯಾರಿಗೂ ಹೇಳದ ಮೃತ ಸಂಜೀವಿನಿ ವಿದ್ಯೆಯನ್ನು ಕಚನಿಗೆ ಉಪದೇಶಿಸುತ್ತಾರೆ. ಈ ವಿದ್ಯೆಯಿಂದ ಒಮ್ಮೆ ಕಚನನ್ನು ಶುಕ್ರಾಚಾರ್ಯರು ಬದುಕಿಸುತ್ತಾರೆ, ಮತ್ತೂಮ್ಮೆ ಕಚನೇ ಮೃತ ಸಂಜೀವಿನಿ ವಿದ್ಯೆಯಿಂದ ಶುಕ್ರಾಚಾರ್ಯರನ್ನು ಬದುಕಿಸುತ್ತಾನೆ.
ಇತ್ತ ಗುರುಪುತ್ರಿ ದೇವಯಾನಿ ಸರ್ವಗುಣ ಸಂಪನ್ನನಾದ , ಸರ್ವವಿದ್ಯಾ ಪ್ರವೀಣ, ಸರ್ವಾಂಗ ಸುಂದರನಾದ ಕಚನನ್ನು ಪ್ರೀತಿಸುತ್ತಾಳೆ. ತನ್ನನ್ನೇ ಮದುವೆಯಾಗಬೇಕೆಂದು ಹಠ ಹಿಡಿಯುತ್ತಾಳೆ. ಆದರೆ ಪ್ರಾಜ್ಞನಾಗಿ ಬೆಳೆದ ಕಚ ಗುರು ಪತ್ನಿ ತಾಯಿಯಂತೆಯೂ , ಗುರುಪುತ್ರಿ ಎಂದರೆ ತಂಗಿಗೆ ಸಮ ಎಂದು ಆಕೆಗೆ ತಿಳಿಹೇಳುತ್ತಾನೆ.
ಆದರೆ ಇದ್ಯಾವುದನ್ನೂ ಪರಿಗಣಿಸದ ದೇವಯಾನಿ ನನ್ನನ್ನು ನೀನು ಮದುವೆಯಾಗದೇ ಹೋದರೆ ನೀನು ಕಲಿತ ವಿದ್ಯೆ ನಿನಗೆ ಸಮಯಕ್ಕಾಗುವಾಗ ಮರೆತೇ ಹೋಗಲಿ ಎಂದು ಶಪಿಸುತ್ತಾಳೆ.ಇದಿಷ್ಟು ಕಥಾಹಂದರ.
ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಚಿಕ್ಕಮೇಳದವರಿಂದ ಮೂಡುಬಿದಿರೆಯಲ್ಲಿ ಪ್ರದರ್ಶನಗೊಂಡಿತು.ಈ ಮೇಳದ ವಿಶೇಷತೆ ಎಂದರೆ ಒಂದೊಂದು ಮನೆಗಳಲ್ಲಿ ಕನಿಷ್ಠ ಮೂವತ್ತು ನಿಮಿಷಗಳಿಂದ ನಲ್ವತ್ತು ನಿಮಿಷಗಳ ವರೆಗೆ ಪ್ರದರ್ಶನ ನೀಡುವುದು.ಸಂಜೆ 6ರಿಂದ ರಾತ್ರಿ 12ರ ವರೆಗೆ ಮೊದಲೇ ಆಹ್ವಾನವಿತ್ತ ಮನೆಗಳಿಗೆ ತಿರುಗಾಟ.
ಚಂದ್ರಶೇಖರ ಧರ್ಮಸ್ಥಳ ಇವರ ಸಂಚಾಲಕತ್ವದಲಿ ಭಾಗವತರಿಗೂ ಮದ್ದಳೆಯವರಿಗೂ ಮೈಕ್ ಮತ್ತು ಸ್ಪೀಕರ್ ಅಳವಡಿಸಿ ನೈಜ ಯಕ್ಷಗಾನದ ವಾತಾವರಣ ಮನೆಯೊಳಗೆ ನಿರ್ಮಿಸುತ್ತಾರೆ. ಹೆಚ್ಚಾಗಿ ಒಂದು ಸ್ತ್ರೀ ಪಾತ್ರ ಒಂದು ಪುರುಷ ಪಾತ್ರ ಇರುವ ಕಲ್ಯಾಣ ಪ್ರಸಂಗಗಳನ್ನು ಆಯ್ದುಕೊಳ್ಳುತ್ತಾರೆ.
ಕಚನಾಗಿ ಶಿವಾನಂದ ಪೆರ್ಲ ಅತ್ಯುತ್ತಮ ಅಭಿನಯ ಮತ್ತು ಮಾತು, ಅದೇ ರೀತಿ ದೇವಯಾನಿಯಾಗಿ ಸತೀಶ ನೀರ್ಕೆರೆ , ಉತ್ತಮ ಅಭಿನಯ ದೊಂದಿಗೆ ಚುರುಕಾದ ಸಂಭಾಷಣೆಯಲ್ಲೂ ಸೈ ಎನಿಸಿಕೊಂಡರು. ಭಾಗವತರಾಗಿ ಮೋಹನ ಶಿಶಿಲ , ಮದ್ದಳೆಯಲ್ಲಿ ಚಂದ್ರಶೇಖರ ಸಹಕರಿಸುತ್ತಾರೆ.
ಸದಾಶಿವ ನೆಲ್ಲಿಮಾರ್