ಕಲಬುರಗಿ: ಪೊಲೀಸ್ ಸಿಬ್ಬಂದಿ ರೀತಿಯಲ್ಲಿ ಗೃಹ ರಕ್ಷಕದಳ ಸಿಬ್ಬಂದಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಬೇಕೆಂದು ಮಹಾನಗರ ಪೊಲೀಸ್ ಆಯುಕ್ತ ಡಾ| ವೈ.ಎಸ್. ರವಿಕುಮಾರ ಹೇಳಿದರು.
ಮಂಗಳವಾರ ನಗರದ ಜಿಲ್ಲಾ ಗೃಹ ರಕ್ಷಕ ದಳದ ಕಚೇರಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಅಖೀಲ ಭಾರತ ಗೃಹರಕ್ಷಕ ದಳ ದಿನಾಚರಣೆ-2021 ಕಾರ್ಯಕ್ರಮಕ್ಕೆ ಪರಿವಾಳ ಹಾರಿಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಗೃಹರಕ್ಷಕರು ತಮ್ಮ ಕರ್ತವ್ಯ ಪಾಲನೆಯನ್ನು ಶಿಸ್ತುಬದ್ಧವಾಗಿ ನಿರ್ವಹಿಸುತ್ತಿದ್ದಾರೆ. ಸಮಾಜದ ರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಇವರಿಗೆ ತರಬೇತಿ ನೀಡುವ ಅವಶ್ಯಕತೆಯಿದೆ ಎಂದರು.
ಗೃಹ ರಕ್ಷಕರ ಸೇವೆಯಿಂದ ಪೊಲೀಸ್ ಇಲಾಖೆ ಮೇಲಿನ ಒತ್ತಡ ಸ್ವಲ್ಪ ಕಡಿಮೆಯಾಗಿದೆ. ಪೊಲೀಸ್ ಇಲಾಖೆ ಜತೆಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಚಾರವಾಗಿದೆ. ಬಂದೋಬಸ್ತ್, ಚುನಾವಣೆ ಸೇರಿದಂತೆ ಪೊಲೀಸ್ ಇಲಾಖೆ ವಹಿಸುವ ಜವಾಬ್ದಾರಿಗಳಲ್ಲಿ ಗೃಹ ರಕ್ಷಕರು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಸಂತೋಷ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪ ಸಮಾದೇಷ್ಟ ಮಲ್ಲಪ್ಪ ವಾರ್ಷಿಕ ವರದಿ ವಾಚನ ಮಾಡಿದರು. ನಿವೃತ್ತಿ ಹೊಂದಿದ ಮೂವರು ಗೃಹ ರಕ್ಷಕರನ್ನು ಸನ್ಮಾನಿಸಲಾಯಿತು. ಘಟಕಾಧಿಕಾರಿ ಲಿಂಗಣ್ಣ ಪೂಜಾರಿ ನೇತೃತ್ವದ ಗೃಹರಕ್ಷಕರ ತಂಡ ಮುಖ್ಯ ಅತಿಥಿಗಳಿಗೆ ಪರೇಡ್ ಮೂಲಕ ಗೌರವ ವಂದನೆ ಸಲ್ಲಿಸಿತು. ಸ್ವಾಗತ, ನಿರೂಪಣೆ, ವಂದನಾರ್ಪಣೆಯನ್ನು ಚಂದ್ರಕಾಂತ ಕೆ. ಹಾವನೂರು ನಿರ್ವಹಿಸಿದರು.