Advertisement

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

12:39 AM Apr 30, 2024 | Team Udayavani |

ಲಕ್ನೋ: ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕ ಕೆ.ಎಲ್‌. ರಾಹುಲ್‌ ಮಂಗಳವಾರ ರಾತ್ರಿ ಮುಂಬೈ ಇಂಡಿಯನ್ಸ್‌ ವಿರುದ್ಧ ತವರಿನ ಅಂಗಳದಲ್ಲಿ ಮಹತ್ವದ ಪಂದ್ಯವಾಡಲಿದ್ದಾರೆ. ಟಿ20 ವಿಶ್ವಕಪ್‌ಗಾಗಿ ಭಾರತ ತಂಡದ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದ್ದು, ದ್ವಿತೀಯ ವಿಕೆಟ್‌ ಕೀಪರ್‌ ಸ್ಥಾನಕ್ಕಾಗಿ ರಾಹುಲ್‌ ಮುಂದಿರುವ “ಅಂತಿಮ ಅವಕಾಶ’ ಇದಾಗಿದೆ.

Advertisement

ರಿಷಭ್‌ ಪಂತ್‌ ಫಿಟ್‌ ಆಗಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿರುವುದರಿಂದ ಇವರು ಮೊದಲ ಆಯ್ಕೆಯ ಕೀಪರ್‌ ಎಂಬುದರಲ್ಲಿ ಅನುಮಾನವಿಲ್ಲ. ಹಾಗೆಯೇ ಸಂಜು ಸ್ಯಾಮ್ಸನ್‌ ಕೂಡ ರೇಸ್‌ನಲ್ಲಿದ್ದಾರೆ. ಇವರಿಬ್ಬರು ಕ್ರಮವಾಗಿ 160.60 ಮತ್ತು 161.08ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಅಂದರೆ ಇದು ರಾಹುಲ್‌ಗಿಂತ ಹೆಚ್ಚು. ರಾಹುಲ್‌ 144.27ರ ಸ್ಟ್ರೈಕ್‌ರೇಟ್‌ ಹೊಂದಿದ್ದು, 378 ರನ್‌ ಬಾರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಸ್ಟ್ರೈಕ್‌ರೇಟ್‌ಗೆ ಯಾವತ್ತೂ ಹೆಚ್ಚಿನ ಮಹತ್ವ ಇರುವುದರಿಂದ ರಾಹುಲ್‌ ಟಿ20 ವಿಶ್ವಕಪ್‌ ರೇಸ್‌ನಲ್ಲಿ ತುಸು ಹಿಂದುಳಿಯುವ ಸಾಧ್ಯತೆ ಇದೆ.

ಇಬ್ಬರಿಗೂ ನಿರ್ಣಾಯಕ
ತವರಿನಲ್ಲಿ ಆಡಲಾದ ಕಳೆದ ಪಂದ್ಯದಲ್ಲಿ ಲಕ್ನೋ ಟೇಬಲ್‌ ಟಾಪರ್‌ ರಾಜಸ್ಥಾನ್‌ಗೆ 7 ವಿಕೆಟ್‌ಗಳಿಂದ ಶರಣಾಗಿತ್ತು. ಡಿ ಕಾಕ್‌, ಸ್ಟೋಯಿನಿಸ್‌, ಪೂರಣ್‌ ಅವರಂಥ ಬಿಗ್‌ ಹಿಟ್ಟರ್‌ಗಳನ್ನು ಹೊಂದಿರುವ ಕಾರಣ ಲಕ್ನೋ ಮೊದಲು ಬ್ಯಾಟಿಂಗ್‌ ನಡೆಸಿದರೆ ಇನ್ನೂರರ ಗಡಿ ದಾಟಬೇಕಾದ ಅಗತ್ಯವಿದೆ.

9ನೇ ಸ್ಥಾನದಲ್ಲಿರುವ ಮುಂಬೈಗೂ ಈ ಪಂದ್ಯ ನಿರ್ಣಾಯಕ. ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಉಳಿದೆಲ್ಲ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡ ಪಾಂಡ್ಯ ಪಡೆಯದ್ದು.

ಟಿ20 ವಿಶ್ವಕಪ್‌ಗೆ ದ್ವಿತೀಯ ವಿಕೆಟ್‌ ಕೀಪರ್‌ ರೇಸ್‌
ಪಂತ್‌, ಸ್ಯಾಮ್ಸನ್‌ ಮತ್ತು ರಾಹುಲ್‌ ಐಪಿಎಲ್‌ ತಂಡಗಳ ನಾಯಕರೂ ಆಗಿರು ವುದು ವಿಶೇಷ. ಈ ಮಾನದಂಡ ದಂತೆ ಸ್ಯಾಮ್ಸನ್‌ಗೆ ಅಗ್ರಸ್ಥಾನ. ಅವರ ರಾಜಸ್ಥಾನ್‌ ರಾಯಲ್ಸ್‌ ಈಗಾಗಲೇ ಪ್ಲೇ ಆಫ್ ಸುತ್ತಿಗೆ ಒಂದು ಕಾಲು ಇರಿಸಿದೆ. ರಾಹುಲ್‌ ಅವರ ಲಕ್ನೋ ತಂಡ 9ರಲ್ಲಿ 5 ಗೆಲುವು ಸಾಧಿಸಿದರೆ, ಪಂತ್‌ ಅವರ ಡೆಲ್ಲಿ ಹತ್ತರಲ್ಲಿ ಐದನ್ನು ಗೆದ್ದು ಹೋರಾಟ ಮುಂದುವರಿಸುವ ಸೂಚನೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next