ತಿ.ನರಸೀಪುರ: ನೆರೆ ಹಾವಳಿಯಿಂದ ಮನೆ, ಆಸ್ತಿ, ಬೆಳೆಗಳನ್ನು ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರನ್ನು ಭಾನುವಾರ ರಾತ್ರಿ ಭೇಟಿ ಮಾಡಿದ ವರುಣಾ ಶಾಸಕ ಡಾ.ಎಸ್.ಯತೀಂದ್ರ ಸಿದ್ದರಾಮಯ್ಯ ಅಹವಾಲು ಆಲಿಸಿ, ಸಾಂತ್ವನ ಹೇಳಿದರು.
ಪಟ್ಟಣದ ಹಳೇ ತಿರುಮಕೂಡಲಿಗೆ ತೆರಳಿ ನೆರೆ ಹಾವಳಿಯನ್ನು ವೀಕ್ಷಿಸಿದ ಶಾಸಕರು, ನಂತರ ಪುರಸಭೆ ಸಿಡಿಎಸ್ ಭವನದ ಪಕ್ಕದಲ್ಲಿನ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಕಲ್ಪಿಸಿರುವ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು. ನಂತರ ವಾಸ್ತವ್ಯವಿರುವ ಕೊಠಡಿಗಳಿಗೆ ತೆರಳಿ ಮಹಿಳೆಯರು ಮತ್ತು ಮಕ್ಕಳ ಯೋಗಕ್ಷೇಮ ವಿಚಾರಿಸಿದರು.
ವೇಳೆ ಶಾಸಕ ಡಾ.ಎಸ್.ಯತೀಂದ್ರ ಮಾತನಾಡಿ, ಪ್ರವಾಹದಿಂದ ಮನೆ, ಆಸ್ತಿ ಕಳೆದುಕೊಂಡಿರುವ ಸಂತ್ರಸ್ತರು ಯಾವುದೇ ಆತಂಕಪಡಬಾರದು. ನೆರೆ ನಿಂತ ಮೇಲೆ ಹಾಳಾದ ಮನೆಯ ಮರು ನಿರ್ಮಾಣಕ್ಕೆ ಸರ್ಕಾರದಿಂದ ನೆರವು ಕೊಡಿಸುತ್ತೇವೆ. ವಾಸದ ನಿವೇಶನ ಕಳೆದುಕೊಂಡರೆ ನಿವೇಶನವನ್ನೂ ಒದಗಿಸುತ್ತೇವೆ. ನಿರಾಶ್ರಿತರ ಕೇಂದ್ರವೆಂಬ ಭಾವನೆ ಬಿಟ್ಟು ನಿಶ್ಚಿತೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಶಾಸಕ ಎಂ.ಅಶ್ವಿನ್ ಭೇಟಿ: ಶಾಸಕ ಡಾ.ಎಸ್.ಯತೀಂದ್ರ ಭೇಟಿ ನೀಡಿದ ನಂತರ ತಿ.ನರಸೀಪುರ ಶಾಸಕ ಎಂ.ಅಶ್ವಿನ್ ಕುಮಾರ್ ಕೂಡ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೆರೆ ಸಂತ್ರಸ್ತರಿಗೆ ಸಮರ್ಪಕವಾಗಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಇಂದಿರಾ ಕ್ಯಾಂಟೀನ್ ನಿಂದಲೇ ಆಹಾರ ಪೂರೈಸಬೇಕು. ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಪುರಸಭೆ ಸದಸ್ಯರಾದ ಟಿ.ಎಂ. ನಂಜುಂಡಸ್ವಾಮಿ, ಎನ್.ಸೋಮು, ಎಸ್.ಮದನ್ ರಾಜ್, ನಾಗರಾಜು, ಬಾದಾಮಿ ಮಂಜು, ಎಸ್.ಕೆ.ಕಿರಣ, ಮಾಜಿ ಸದಸ್ಯ ಮಲ್ಲೇಶ್ ನಾಯಕ, ಮುಖ್ಯಾಧಿಕಾರಿ ಅಶೋಕ, ನೋಡಲ್ ಅಧಿಕಾರಿ ಸೋಮಶೇಖರ್, ತಹಶೀಲ್ದಾರ್ ಪಿ.ಎನ್.ನಾಗಪ್ರಶಾಂತ್, ಕೃಷಿ ಸಹಾಯಕ ನಿರ್ದೇಶಕ ನಿಂಗಯ್ಯ, ಪುರಸಭೆ ಯೋಜನಾಧಿಕಾರಿ ಕೆಂಪರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸ್ವಾಮಿ, ಮುಖಂಡರಾದ ಶಂಭುದೇವನಪುರ ರಮೇಶ್, ಅಮಾಸೆ ಎಂ.ಲಿಂಗರಾಜು, ಕೆ.ಅಶ್ವಿನ್, ಬೇವಿನಹಳ್ಳಿ ಸತೀಶ್ ಇತರರಿದ್ದರು.