ಬಾಗಲಕೋಟೆ: ಘಟಪ್ರಭಾ ನದಿ ಪ್ರವಾಹದಿಂದ ಸಂಪೂರ್ಣ ಮುಳುಗಡೆ ಆಗಿರುವ ಮುಧೋಳ ತಾಲೂಕಿನ ನಂದಗಾಂವದ ನಿರಾಶ್ರಿತರಿಗೆ ಸರ್ಕಾರದಿಂದ ಸ್ವಂತ ಮನೆ ನಿರ್ಮಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ನಂದಗಾಂವ ಗ್ರಾಮದ ನಿರಾಶ್ರಿತರಿಗೆ ಸರ್ಕಾರದಿಂದಲೇ ಸ್ವಂತ ಮನೆ ಕಟ್ಟಿಕೊಡಲಾಗುವುದು. ಅಲ್ಲದೇ ಈಗಾಗಲೇ ಸಾಲ ಮನ್ನಾ ಯೋಜನೆಯಡಿ ಅರ್ಧಮರ್ಧ ಸಾಲ ಮನ್ನಾ ಆಗಿದ್ದಲ್ಲಿ, ಅವರ ಸಾಲವನ್ನು ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. ಆದರೆ, ಖಾಸಗಿ ಸಾಲ ಮನ್ನಾ ಮಾಡಲು ನಿಯಮಾವಳಿ ಪ್ರಕಾರ ಅವಕಾಶವಿಲ್ಲ ಎಂದು ತಿಳಿಸಿದರು.
ಸ್ಥಳಾಂತರಗೊಂಡರೆ ಮಾತ್ರ: ಗ್ರಾಮಸ್ಥರು ಸಂಪೂರ್ಣವಾಗಿ ಸ್ಥಳಾಂತರಗೊಳ್ಳಬೇಕು. ಈಗ ಪ್ರವಾಹದಿಂದ ಹಾನಿಗೊಳಗಾದ ಮನೆ, ಬೆಳೆಗೆ ಸೂಕ್ತ ಪರಿಹಾರ ನೀಡಲಾಗುವುದು. ಸ್ಥಳಾಂತರಗೊಳ್ಳಲು ಸಿದ್ಧರಿಲ್ಲದಿದ್ದರೆ ಸರ್ಕಾರದಿಂದ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಬೇರೆಡೆ ಸ್ಥಳಾಂತರಕ್ಕೆ ಸಿದ್ಧರಾಗಬೇಕು ಎಂದು ತಿಳಿಸಿದರು.
ಸಮೀಕ್ಷೆಗೆ ಸೂಚನೆ: ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ನದಿಗಳ ಪ್ರವಾಹದಿಂದ ಎಷ್ಟು ಮನೆ, ಬೆಳೆ ಹಾಗೂ ಆಸ್ತಿ-ಪಾಸ್ತಿ ಹಾನಿಯಾಗಿದೆ ಎಂಬುದರ ಸಮೀಕ್ಷೆ ಮಾಡಿ, ತಕ್ಷಣ ವರದಿ ಕಲ್ಪಿಸಬೇಕು. ಆಸ್ತಿ ಹಾಗೂ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಹೇಳಿದರು.
Advertisement
ಗುರುವಾರ ಸಂಜೆ ಮುಧೋಳ ತಾಲೂಕು ನಂದಗಾವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಅವರು, ನಿರಾಶ್ರೀತರ ಮನವಿ ಆಲಿಸಿದರು. ಬಳಿಕ ಮಾತನಾಡಿದ ಅವರು, ನಂದಗಾಂವ ಪ್ರತಿ ಬಾರಿ ಘಟಪ್ರಭಾ ನದಿ ತುಂಬಿ ಹರಿದರೆ ಸಮಸ್ಯೆ ಅನುಭವಿಸುತ್ತಿದೆ ಎಂದು ಇಲ್ಲಿನ ಶಾಸಕರು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಗ್ರಾಮವನ್ನು ಶಾಶ್ವತವಾಗಿ ಸ್ಥಳಾಂತರಿಸಲಾಗುವುದು ಎಂದರು.
Related Articles
Advertisement
ವಿವಿಧ ಪರಿಹಾರ ಕೇಂದ್ರಕ್ಕೆ ಭೇಟಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಜಲವಾವೃತಗೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ನಂದಗಾಂವ, ಮಳಲಿ, ಮುಧೋಳ ನಗರದ ಪರಿಹಾರ ಕೇಂದ್ರಗಳಲ್ಲಿ ಭೇಟಿ ನೀಡಿ, ಸಮಸ್ಯೆ ಆಲಿಸಿದರು. ನಿರಾಶ್ರಿತರಿಗೆ ನೀಡುತ್ತಿರುವ ಊಟ, ಉಪಹಾರ ಹಾಗೂ ಸೌಲಭ್ಯಗಳ ಕುರಿತು ನೇರವಾಗಿ ನಿರಾಶ್ರಿತರಿಗೆ ಮಾತನಾಡಿಸಿ, ಮಾಹಿತಿ ಪಡೆದರು.
ಶಾಸಕರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ವಿಧಾನಪರಿಷತ್ ಸದಸ್ಯರಾದ ರವಿಕುಮಾರ, ಹನಮಂತ ನಿರಾಣಿ ಮುಂತಾದವರು ಉಪಸ್ಥಿತರಿದ್ದರು.
ಯುಕೆಪಿ ಮಾದರಿ ಪರಿಹಾರ ಕೊಡಿ:
ನಾವು ಪ್ರವಾಹದಿಂದ ಮನೆ ಮುಳುಗಡೆ ಆಗಿದೆ. ಇದು ನದಿಗೆ ನೀರು ಬಂದಾಗೊಮ್ಮೆ ಸಮಸ್ಯೆ ಆಗುತ್ತಿದೆ. ನಮ್ಮ ಮನೆಗಳನ್ನು ಮುಳುಗಡೆ ಎಂದು ಘೋಷಿಸಿ, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆ ಮನೆಗೆ ನೀಡಿದ ಪರಿಹಾರದ ಮಾದರಿಯಲ್ಲಿ ನಮಗೂ ಪರಿಹಾರ ನೀಡಬೇಕು. ಸರ್ಕಾರದಿಂದ ಸೂಕ್ತ ಪರಿಹಾರ ನೀಡುವ ಜತೆಗೆ ಈಗ ಬೆಳೆ ಹಾನಿಗೂ ಪರಿಹಾರ ಕೊಡಬೇಕು ಎಂದು ನಿರಾಶ್ರಿತರು ಸಿಎಂಗೆ ಮನವಿ ಮಾಡಿದರು. ಯುಕೆಪಿ ಮಾದರಿ ಪರಿಹಾರ ಕೊಡುವ ಕುರಿತು ಸಿಎಂ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.