Advertisement

ಮೃತಳ ಕುಟುಂಬಕ್ಕೆ ಮನೆ ಸೌಲಭ್ಯ: ಸಚಿವ ಸಾ.ರಾ. ಮಹೇಶ್‌

01:00 AM Feb 25, 2019 | Team Udayavani |

ಮಡಿಕೇರಿ: ಹೊರ ರಾಜ್ಯದ ಕಾರ್ಮಿಕರಿಂದ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ವಿದ್ಯಾರ್ಥಿನಿ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.      

Advertisement

ಮಾತನಾಡಿದ ಸಚಿವರು ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಮಳೆಹಾನಿ ಸಂತ್ರಸ್ತರ ಪಟ್ಟಿಯಲ್ಲಿ ಬಾಲಕಿ ಕುಟುಂಬವನ್ನು ಸೇರ್ಪಡೆಗೊಳಿಸಿ ನಿವೇಶನ ಮತ್ತು ಮನೆ ನೀಡಲಾಗುವುದು ಹಾಗೂ ಶೀಘ್ರ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದರು.  

ತೋಟಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಜೊತೆಗೆ ಮನೆ ನಿರ್ಮಿಸಿಕೊಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಗ್ರಾಮಸಭೆಗಳಲ್ಲಿ ಪಟ್ಟಿ ಮಾಡಿ ಜಿಲ್ಲಾ ಪಂಚಾಯತ್‌ ಮತ್ತು ಜಿಲ್ಲಾಡಳಿತಕ್ಕೆ ಸಲ್ಲಿಸುವಂತಾಗಬೇಕು ಎಂದು ಸಚಿವರು ಸಲಹೆ ನೀಡಿದರು.  

ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಘಟ್ಟದಹಳ್ಳದ ಬಳಿ ನಾಲ್ಕುವರೆ ಎಕರೆ ಸರ್ಕಾರಿ ಭೂಮಿ ಇದ್ದು, ನಿವೇಶನ ರಹಿತರಿಗೆ ಭೂಮಿ ಒದಗಿಸಬೇಕು. ಜೊತೆಗೆ ಮನೆ ನಿರ್ಮಿಸಿಕೊಡಲು ಅವಕಾಶವಾಗುತ್ತದೆ ಎಂದು ಅವರು ಸಲಹೆ ಮಾಡಿದರು. 

ಈಶಾನ್ಯ ರಾಜ್ಯದಿಂದ ಬರುವ ಕೂಲಿ ಕಾರ್ಮಿಕರ ಮಾಹಿತಿಯನ್ನು ನೀಡಬೇಕು ಎಂದು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಇದು ವ್ಯವಸ್ಥಿತವಾಗಿ ಅನುಷ್ಠಾನಗೊಳ್ಳಬೇಕು ಎಂದು ಕೆ.ಜಿ.ಬೋಪಯ್ಯ ಅವರು ತಿಳಿಸಿದರು. 

Advertisement

ಸಂಕಷ್ಟದಲ್ಲಿರುವ ನಮಗೆ ಸ್ವಂತ ಮನೆಯನ್ನು ನಿರ್ಮಿಸಿಕೊಡಿ ಎಂದು ವಿದ್ಯಾರ್ಥಿನಿ ತಾಯಿ ಸಚಿವರಲ್ಲಿ ಮನವಿ ಮಾಡಿದರು. 

 ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಉಪವಿಭಾಗಾಧಿಕಾರಿ ಟಿ.ಜವರೇಗೌಡ, ಡಿವೈಎಸ್‌ಪಿ ಸುಂದರರಾಜ್‌, ನಾಗಪ್ಪ, ಅನೂಪ್‌ ಮಾದಪ್ಪ, ತಹಶೀಲ್ದಾರ್‌ ಗೋವಿಂದ ರಾಜು ಇತರರು ಹಾಜರಿದ್ದರು. 

ಮಾಲಕರೇ ಹೊಣೆ 
ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ರಾಜ್ಯಗಳಿಂದ ಬರುವ ಕೂಲಿ ಕಾರ್ಮಿಕರ ಆಧಾರ್‌ ಸಹಿತ ಮಾಹಿತಿಯನ್ನು ಹತ್ತಿರದ ಪೊಲೀಸ್‌ ಠಾಣೆಗೆ ನೀಡಬೇಕು. ಹಾಗೆಯೇ ಮಾಲೀಕರು ಸಹ ಇವರ ಆಧಾರ್‌ ಕಾರ್ಡ್‌ ಸಹಿತ ನಿಖರ ಮಾಹಿತಿಯನ್ನು ಪಡೆದು ಪೊಲೀಸ್‌ ಠಾಣೆಗೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಅಪರಾಧ ಮಾಡುವವರು ಮತ್ತು ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು. ಅತ್ಯಾಚಾರ ಕೊಲೆ ನಡೆರೂ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿಲ್ಲ ಎಂಬುದನ್ನು ಪರಿಶೀಲಿಸುವುದಾಗಿ ಅವರು ತಿಳಿಸದರು.

Advertisement

Udayavani is now on Telegram. Click here to join our channel and stay updated with the latest news.

Next