Advertisement

ನಗರ ಯೋಜನೆ ಪ್ರಾಧಿಕಾರ ಇಲ್ಲದೆಡೆ ಟೌನ್‌ ಪ್ಲಾನಿಂಗ್‌ನಿಂದ ವಿನಾಯಿತಿ: ಮನೆ ನಿರ್ಮಾಣ ಸುಗಮ

11:53 PM May 12, 2022 | Team Udayavani |

ಬೆಂಗಳೂರು: ಪಟ್ಟಣ ಪಂಚಾಯತ್‌, ಪುರ ಸಭೆ ವ್ಯಾಪ್ತಿ ಸಹಿತ ಪ್ರತ್ಯೇಕ ನಗರ ಯೋಜನೆ ಪ್ರಾಧಿಕಾರ ಗಳಿಲ್ಲದ ಕಡೆ ಮನೆ, ಕಟ್ಟಡ ನಿರ್ಮಾಣಕ್ಕೆ ಟೌನ್‌ ಪ್ಲಾನಿಂಗ್‌ನಿಂದ ವಿನಾಯಿತಿ ನೀಡಲು ಸರಕಾರ ನಿರ್ಧರಿಸಿದೆ.

Advertisement

ಗುರುವಾರ ಸಚಿವ ಸಂಪುಟ ಸಭೆಯಲ್ಲಿ  ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ನಗರ ಯೋಜನೆ (ಟೌನ್‌ ಪ್ಲಾನಿಂಗ್‌) ವಿಭಾಗದಿಂದ ಅನುಮತಿ ಕಡ್ಡಾಯ ಎಂಬುದನ್ನು ಸಡಿಲಿಸಿ ಗ್ರಾ.ಪಂ., ಪ.ಪಂ., ಪುರಸಭೆಗಳ ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಟೌನ್‌ ಪ್ಲಾನಿಂಗ್‌ ಅನುಮತಿ ಬೇಕೆನ್ನುವ ನಿಯಮದಿಂದ ಲಕ್ಷಾಂತರ ಜನರು ಸಮಸ್ಯೆ ಎದುರಿಸುತ್ತಿದ್ದು, ಪರಿಹಾರವಾಗಿ ಕರ್ನಾಟಕ ಪೌರಾಡಳಿತ ಹಾಗೂ ನಗರ ಯೋಜನೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಸರಕಾರವು ಕೆಲವು ಗ್ರಾ.ಪಂ.ಗಳನ್ನು ಪಟ್ಟಣ ಪಂಚಾಯತ್‌ಗಳಾಗಿ, ಪ. ಪಂಚಾಯತ್‌ಗಳನ್ನು ಪುರಸಭೆಗಳಾಗಿ ಮೇಲ್ದರ್ಜೆಗೇರಿಸಿದೆ. ಹೊರವಲಯದ ಬಹು ತೇಕ ಪ್ರದೇಶಗಳು ಆ ವ್ಯಾಪ್ತಿಗೆ ಸೇರಿವೆ. ಆದರೆ ಅಲ್ಲಿ ಪ್ರತ್ಯೇಕ ನಗರ ಯೋಜನೆ ಪ್ರಾಧಿಕಾರಗಳು ಇಲ್ಲ. ಅಂಥಲ್ಲಿ ಸಮೀಪದ ನಗರ ಯೋಜನೆ ಪ್ರಾಧಿಕಾರದ ಅನುಮತಿ ಪಡೆಯಬೇಕು ಎಂಬ ನಿಯಮ ಇದೆ. ಇದನ್ನು ಬದಲಿಸಿ ಕಟ್ಟಡ ನಿರ್ಮಾಣ, 11 ಇ ನಕ್ಷೆ, ಆಸ್ತಿ ಮಾರಾಟಕ್ಕೆ ಅನುಕೂಲವಾಗಲು ಗ್ರಾ.ಪಂ., ಪ.ಪಂ., ಪುರಸಭೆಗಳಿಂದ ಅನುಮತಿ ಪಡೆಯಬಹುದು ಎಂದು ಕರ್ನಾಟಕ ಪೌರಾಡಳಿತ ಕಾಯ್ದೆ 1964ಗೆ ತಿದ್ದುಪಡಿ ತಂದು ಸೆಕ್ಷನ್‌ 387 ವಾಪಸ್‌ ಪಡೆಯಲು ತೀರ್ಮಾನಿಸಲಾಗಿದೆ ಎಂದರು.

ಈ ವ್ಯಾಪ್ತಿಯ ಹೊರವಲಯದಲ್ಲಿ ಒಂದು ಎಕರೆ ಯೊಳಗಿನ ಪ್ರದೇಶದಲ್ಲಿ ಮನೆ ನಿರ್ಮಿಸಲು ಗ್ರಾ.ಪಂ. ಅನುಮತಿ ಪಡೆದರೆ ಸಾಕು. ಒಂದು ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ, ನಿವೇಶನ ರಚನೆ ಮಾಡಿದರೆ ಆಗ ಅದು ನಗರ ಯೋಜನೆ (ಟೌನ್‌ ಪ್ಲಾನಿಂಗ್‌) ವ್ಯಾಪ್ತಿಗೆ ಬರಲಿದೆ ಎಂದರು.

Advertisement

ದ. ಕನ್ನಡ, ಉ. ಕನ್ನಡ ಜಿಲ್ಲೆಗಳ ಅರಣ್ಯ ಭಾಗದಲ್ಲಿ ಮನೆ ನಿರ್ಮಿಸಿಕೊಳ್ಳುವ ಪಟ್ಟಾ ಜಮೀನುಗಳಿಗೂ ಟೌನ್‌ ಪ್ಲಾನಿಂಗ್‌ ಅನ್ವಯವಾಗದು. ಅವರು ಪ.ಪಂ., ಪುರಸಭೆ ಅನುಮತಿ ಪಡೆದರೆ ಸಾಕು ಎಂದರು.

ಈಗಾಗಲೇ ಮನೆ ನಿರ್ಮಿಸಿದ್ದರೆ ಮೇಲ್ಕಂಡ ಎಲ್ಲ ಪ್ರದೇಶಗಳಲ್ಲೂ 2021ರ ವರೆಗಿನ ನಿರ್ಮಾಣಕ್ಕೆ ಟೌನ್‌ ಪ್ಲಾನಿಂಗ್‌ನಿಂದ ವಿನಾಯಿತಿ ದೊರೆಯಲಿದೆ ಎಂದರು.

ರೈತ ಶಕ್ತಿ ಜಾರಿ :

ರೈತರು ಕೃಷಿ ಯಂತ್ರೋಪಕರಣ ಬಳಸುವುದನ್ನು ಪ್ರೋತ್ಸಾಹಿಸಲು ಪ್ರತೀ ಎಕರೆಗೆ 250 ರೂ.ನಂತೆ ಗರಿಷ್ಠ 5 ಎಕರೆಗಳ ವರೆಗೆ ಡೀಸೆಲ್‌ ಸಹಾಯಧನ ನೀಡುವ ರೈತ ಶಕ್ತಿ ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ರಾಜ್ಯ ಉಗ್ರಾಣ ನಿಗಮ ಕೈಗೆತ್ತಿಕೊಂಡು, ಅಪೂರ್ಣಗೊಂಡಿರುವ ಉಗ್ರಾಣ ಕಾಮಗಾರಿ ಪೂರ್ಣಗೊಳಿಸಲು 862.37 ಕೋಟಿ ರೂ. ಮೊತ್ತದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಪ. ಜಾತಿ ಅಥವಾ ಪ. ವರ್ಗಗಳ ಮೇಲಿನ ದೌರ್ಜನ್ಯದಿಂದ ವ್ಯಕ್ತಿ ಮೃತಪಟ್ಟಿದ್ದಲ್ಲಿ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ವಿಚಾರದಲ್ಲಿ ಕರ್ನಾಟಕ ಸಿವಿಲ್‌ ಸೇವಾ ನಿಯಮ ಅನ್ವಯವಾಗುವಂತೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಹಿಮೋಫೀಲಿಯಾ ಪೀಡಿತರ ಚಿಕಿತ್ಸೆಗೆ ಉಚಿತ ಔಷಧಕ್ಕಾಗಿ 29 ಕೋಟಿ ರೂ.; ತಲಸೇಮಿಯಾ, ಸಿಕಲ್‌ಸೆಲ್‌ ಅನೀಮಿಯಾ ಕಾಯಿಲೆ ಪೀಡಿತರ ಔಷಧಕ್ಕಾಗಿ 15 ಕೋಟಿ ರೂ. ಅನುದಾನ ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಬಗರ್‌ಹುಕುಂ ಅರ್ಜಿಗೆ ಕಾಲಾವಕಾಶ :

ಕೊರೊನಾ ಹಿನ್ನೆಲೆಯಲ್ಲಿ ಬಗರ್‌ಹುಕುಂ ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಮನವಿ ಮೇರೆಗೆ ಆರು ತಿಂಗಳು ಕಾಲಾವಕಾಶ ವಿಸ್ತರಿಸಲು ಸರಕಾರ ನಿರ್ಧರಿಸಿದ್ದು, ಅದಕ್ಕಾಗಿ ಕರ್ನಾಟಕ

ಭೂ ಕಂದಾಯ ತಿದ್ದುಪಡಿ ಮಸೂದೆ-2022ಕ್ಕೆ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಸ್ವಂತ ಜಿಲ್ಲೆಗಳಿಗೆ ಉಸ್ತುವಾರಿ ಜವಾಬ್ದಾರಿ? :

ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ವಿವಿಧ ಸಚಿವರನ್ನು ಅವರ ತವರು ಜಿಲ್ಲೆಗೇ ಉಸ್ತುವಾರಿಯನ್ನಾಗಿ ನೇಮಿಸಲು ಸರಕಾರ ಮುಂದಾಗಿದೆ.

ಹೊರ ಜಿಲ್ಲೆಯವರು ಉಸ್ತುವಾರಿಯಾಗಿರುವುದರಿಂದ ಪಕ್ಷದ ಮುಖಂಡರು ಮತ್ತು ಕೆಳ ಹಂತದ ಕಾರ್ಯಕರ್ತರ ಜತೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಪಕ್ಷ ಸಂಘಟನೆಗೆ ತೊಂದರೆಯಾಗು¤ದೆ.

ಜತೆಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಸರಿಯಾಗಿ ಸಹಕಾರ ದೊರೆಯುತ್ತಿಲ್ಲ ಎಂಬ ಆರೋಪವೂ ಇದೆ. ಸಚಿವ ಸಂಪುಟ ಸಭೆಯಲ್ಲಿ ಹಲವು ಸಚಿವರು ಈ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಅವರ  ಬಳಿ ಪ್ರಸ್ತಾವಿಸಿದ್ದರು. ಹೀಗಾಗಿ ಸರಕಾರ ಉಸ್ತುವಾರಿ ಸಚಿವರ ಬದಲಾವಣೆಗೆ ಮುಂದಾಗಿದೆ ಎನ್ನಲಾಗುತ್ತಿದೆ. ಈ ನಿರ್ಧಾರದ ಹಿಂದೆ ರಾಜಕೀಯ ಕಾರಣವೂ ಇದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next