Advertisement

ಸೀಲಿಂಗ್‌ ಇದ್ದರೆ ಜಾಗವೂ ಸಿಗುತ್ತೆ, ಸೇಫ್ಟಿಯೂ ಇರುತ್ತೆ !

01:03 PM Oct 01, 2018 | |

ಕೆಲವೊಮ್ಮೆ  ಒಂದು ಸೂರು ಸಾಲದೇ ಇದ್ದರೆ, ಸೂರಿನ ಕೆಳಗೊಂದು ಸೂರನ್ನು ಹಾಕಬೇಕಾಗುತ್ತದೆ. ಈ  ಹೆಚ್ಚುವರಿ ಸೂರು ಬಹುತೇಕ ಅಲಂಕಾರಿಕ ಆಗಿದ್ದರೂ ಕೆಲಸಲ ಅನಿವಾರ್ಯ. ಸೂರು ಇಳಿಜಾರಾಗಿದ್ದು ತೀರಾ ಎತ್ತರ ಎಂದೆನಿಸಿದರೆ ಕೆಳಗೊಂದು ತೆಳ್ಳನೆಯ ಸೂರು ಅಥವಾ ಸೀಲಿಂಗ್‌ ಹಾಕಬಹುದು. ಮಂಗಳೂರು ಹೆಂಚಿನ ಸೂರಿದ್ದರೆ, ಅದರಲ್ಲಿ ಸಣ್ಣಸಣ್ಣ ಸಂದಿಗಳಿದ್ದು ಅವುಗಳ ಮೂಲಕ ಕ್ರಿಮಿ ಕೀಟಗಳು ಒಳನುಸುಳುವ ಸಾಧ್ಯತೆ ಇರುತ್ತದೆ. ಆಗ, ಕೆಳಗೆ ಇಂಥದೊಂದು ಫಾಲ್ಸ್‌ ಸೀಲಿಂಗ್‌ ಹಾಕಿಕೊಳ್ಳಬಹುದು. ಇನ್ನು ಏರ್‌ ಕಂಡಿಷನ್‌ ಮಾಡುವಾಗ ಅತಿ ಹೆಚ್ಚು ಎತ್ತರ ಇದ್ದರೆ ಲೋಡ್‌ ಹೆಚ್ಚಿ ದುಬಾರಿ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಎಂಟು ಅಡಿಗೆ ಒಂದು ಸೂರು ಹಾಕಿಕೊಂಡರೆ ವಿದ್ಯುತ್‌ ಉಳಿತಾಯ ಆಗುತ್ತದೆ.  ಶೀಟ್‌ ಸೂರಿದ್ದರೆ, ಬಿಸಿಲು ಹಾಗೂ ಚಳಿಗಾಲದಲ್ಲಿ ಶೀತ ಹಾಗೂ ಸೆಖೆಯಿಂದ ರಕ್ಷಣೆ ಪಡೆಯಲೂ ಕೂಡ ಫಾಲ್ಸ್‌ ಸೀಲಿಂಗ್‌ ಮಾಡಿಕೊಳ್ಳಬಹುದು. ಇನ್ನು ಮಳೆ- ಜಿಟಿಪಿಟಿ ತೆಳು ಶೀಟಿನ ಸೂರಿನಿಂದ ಬಂದು ತೊಂದರೆ ಕೊಡುತ್ತಿದ್ದರೂ ಕೂಡ ಕೆಳಗೊಂದು ಸೂರನ್ನು ಹಾಕಿಕೊಳ್ಳಬಹುದು.

Advertisement

ತರಹೇವಾರಿ ಫಾಲ್ಸ್‌ ಸೀಲಿಂಗ್‌ 
ಸಾಮಾನ್ಯವಾಗಿ ಇರುವ ಸೂರಿನಿಂದ ಆಧಾರ ಪಡೆದುಕೊಂಡು ಕೆಳಗೊಂದು ಫಾಲ್ಸ್‌ ಸೀಲಿಂಗ್‌ ಮಾಡುವುದು ಈಗ ಹೆಚ್ಚು ಜನಪ್ರಿಯವಾಗಿದೆ. ಕೆಲವೊಮ್ಮೆ ಮೇಲಿನಿಂದ ಆಧಾರ ಪಡೆಯಲು ಆಗದಿದ್ದರೆ, ಅಕ್ಕಪಕ್ಕದ ಗೋಡೆಗಳಿಂದಲೂ ಸಪೋರ್ಟ್‌ ಪಡೆಯಬಹುದು. ಹೆಚ್ಚುವರಿ ಸೂರು ಅಷ್ಟೇನೂ ಭಾರದ ವಸ್ತುಗಳಿಂದ ಮಾಡದ ಕಾರಣ, ತೆಳು ಆಧಾರಗಳಿದ್ದರೂ ಸಾಲುತ್ತದೆ. ಜಿ ಐ ಶೀಟಿನಿಂದ ಮಾಡಿದ ಆಂಗಲ್  ಹಾಗೂ ಪಟ್ಟಿಗಳಿಂದ ಆಧಾರಗಳನ್ನು ಮಾಡಿಕೊಂಡು ಫಾಲ್ಸ್‌ ಸೀಲಿಂಗ್‌ ಅನ್ನು ಸಿದ್ಧಪಡಿಸಲಾಗುತ್ತದೆ. ಮರ ಅಗ್ಗವಾಗಿ ಸಿಗುವ ಕಡೆ ಮರದ ಆಧಾರಗಳನ್ನೂ ಮಾಡಿಕೊಳ್ಳಬಹುದು. ನಿಮಗೆ ಹೆಚ್ಚುವರಿ ಸ್ಟೋರ್‌ – ವಸ್ತುಗಳನ್ನು ಶೇಖರಿಸಲು ಸ್ಥಳಾವಕಾಶದ ಅಗತ್ಯ ಇದ್ದಾಗ, ಗಟ್ಟಿಮುಟ್ಟಾದ ಫಾಲ್ಸ್‌ ಸೀಲಿಂಗ್‌ ಮಾಡಿಕೊಂಡರೆ, ನಿರಾಯಾಸವಾಗಿ ಒಂದಷ್ಟು ಸ್ಪೇಸ್‌ ದೊರೆಯುತ್ತದೆ.

ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಫಾಲ್ಸ್‌ ಸೀಲಿಂಗ್‌
ಅತಿ ಹೆಚ್ಚು ಬಳಕೆಯಲ್ಲಿ ಇರುವುದು ಈ ಮಾದರಿಯ ಹೆಚ್ಚುವರಿ ಸೂರು. ಇದು ಥರಹೇವಾರಿ ವಿನ್ಯಾಸ ನಮೂನೆಗಳಲ್ಲಿ ಲಭ್ಯವಿದ್ದರೂ ಅವೆಲ್ಲವೂ ಬಹುತೇಕ ಅಲಂಕಾರಿಕವೇ ಆಗಿರುತ್ತವೆ. ಮೂಲತಃ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಅಷ್ಟೊಂದು ಗಟ್ಟಿಮುಟ್ಟಾದ ವಸ್ತು ಆಗಿರದ ಕಾರಣ ಇದರಿಂದ ಮಾಡಿದ ಸೂರು ಹೆಚ್ಚು ಭಾರ ಹೊರುವುದಿಲ್ಲ. ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಬಳಸಬೇಕಾದರೆ ವಹಿಸಬೇಕಾದ ಮುಖ್ಯ ಕಾಳಜಿ – ಕಬ್ಬಿಣದ ವಸ್ತುಗಳನ್ನು ಕಡ್ಡಾಯವಾಗಿ ಜಿಐ ಮಾಡಿರಬೇಕು. ಇಲ್ಲದಿದ್ದರೆ ಬೇಗ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಮರ ಅಥವಾ ಇತರೆ ವಸ್ತುಗಳನ್ನು ಬಳಸುವಾಗ ಜಿಐ ಮಾಡಿರಲೇಬೇಕು ಎಂದೇನೂ ಇಲ್ಲ. ಅದೇ ರೀತಿಯಲ್ಲಿ ಆದಷ್ಟೂ ತೇವ ಆಗದಂತೆ ಹಾಗೂ ವಸ್ತುಗಳು ತಗುಲದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಬಣ್ಣ ಗೆಡುವ ಹಾಗೂ ಮುಕ್ಕಾಗುವ ಸಾಧ್ಯತೆ ಇರುತ್ತದೆ. ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಲ್ಲಿ ವಿನ್ಯಾಸಗಳನ್ನು ಮಾಡುವುದು ಸುಲಭ ಆದರೂ ಅವನ್ನು ಕೈಗೆ ಎಟುಕದಂತೆ ಇರಿಸುವುದು ಉತ್ತಮ. 

ಥರ್ಮೊಕೋಲ್‌ ಸೀಲಿಂಗ್‌
ಮನೆಯಲ್ಲಿ ಪ್ರತಿಧ್ವನಿ ತೊಂದರೆ ಕೊಡುತ್ತಿದ್ದರೆ ಇದು ಎತ್ತರದಿಂದ ಉಂಟಾಗಿರುವ ಸಮಸ್ಯೆ.  ಹಾಗಾಗಿ, ಥರ್ಮೋಕೋಲ್‌ ಎರಡೂ ವಸ್ತುಗಳಿಂದ ಮಾಡಿದ ಸೂರುಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಬಲ್ಲವು. ಅಕಾಸ್ಟಿಕ್‌ ವಸ್ತುಗಳಿಂದ ಅಂದರೆ ಸಾಕಷ್ಟು ಟೊಳ್ಳಿರುವ ಲೈಟ್‌ ವೆಟ್‌ ಮಟೆರಿಯಲ್‌ಗ‌ಳಿಂದ ಮಾಡಿದ ತೆಳು ಹಲಗೆಗಳನ್ನು ಫಾಲ್ಸ್‌ ಸೀಲಿಂಗ್‌ಗೆಂದೇ ಮಾಡಲಾಗುತ್ತದೆ.  ಯಥಪ್ರಕಾರ ಸೂರಿನಿಂದ ಆಧಾರಗಳನ್ನು ಇಳಿಬಿಟ್ಟು ಚೌಕಟ್ಟುಗಳನ್ನು ಮಾಡಿಕೊಂಡು ಫಾಲ್ಸ್‌ ಸೀಲಿಂಗ್‌ ಸಿಗಿಸಿಕೊಳ್ಳಬಹುದು. ಹೇಳಿ ಕೇಳಿ ಥರ್ಮೊಕೋಲ್‌ ಅತಿ ಲಘು ವಸ್ತು ಆಗಿದ್ದು, ಜೋರಾಗಿ ಗಾಳಿ ಬೀಸಿದರೂ ಮೇಲೇಳುವ ಸಾಧ್ಯತೆ ಇರುತ್ತದೆ. ಆದುದರಿಂದ ಆ್ಯಂಗಲ್‌ ಹಾಗೂ ಇತರೆ ಆಧಾರಗಳಿಗೆ ಒಂದಷ್ಟು ಗಮ್‌ ಮಾದರಿಯವನ್ನು ಬಳಸಿ ಅಂಟಿಸಿದರೆ ಉತ್ತಮ.

ಮರದ ಫಾಲ್ಸ್‌ ಸೀಲಿಂಗ್‌
ಮನೆಯಲ್ಲಿ ಹೆಚ್ಚುವರಿ ವಸ್ತುಗಳನ್ನು ಇಡಲು ಬೇಕಾದ ಸ್ಥಳ ಮಾಡಬೇಕೆಂದಿದ್ದರೆ, ಆಗ ಅನಿವಾರ್ಯವಾಗಿ ಮರದ ಸೀಲಿಂಗ್‌ಗೆ ಮೊರೆ ಹೋಗಬೇಕಾಗುತ್ತದೆ. ಮರದ ಆಧಾರಗಳನ್ನು ಅಡ್ಡಡ್ಡ ಇಲ್ಲವೇ, ಉದ್ದುದ್ದಕ್ಕೆ – ಯಾವುದು ಕಡಿಮೆ ಇರುತ್ತದೋ ಅದಕ್ಕೆ ಹೊಂದುವಂತೆ ಮರದ ರಿಪೀಸ್‌ಗಳನ್ನು ಗೋಡೆಗೆ ಬಿಗಿಯಬೇಕು. ವಸ್ತುಗಳನ್ನು ಶೇಖರಿಸಬೇಕು ಎಂದರೆ ಮೇಲಿನ ಸೂರಿನಿಂದ ಆಧಾರ ಪಡೆಯಲು ಆಗುವುದಿಲ್ಲ. ಈ ರಿಪೀಸುಗಳು ಸಾಮಾನ್ಯವಾಗಿ ಅವು ಹೊರುವ ಭಾರ ಹಾಗೂ ಉದ್ದ ಆಧರಿಸಿ ಎರಡರಿಂದ  ಇಂಚಿನಿಂದ ನಾಲ್ಕು ಇಂಚಿನವರೆಗೂ ಇರುತ್ತವೆ. ಇದಕ್ಕೂ ಹೆಚ್ಚಿನ ದಪ್ಪದ ಮರ ಹಾಕುವುದು ದುಬಾರಿ ಆಗುವುದರಿಂದ ಉಕ್ಕಿನ ಐ ಸೆಕ್ಷನ್‌ ಬಳಸುವುದು ಉತ್ತಮ. ಒಮ್ಮೆ ಆಧಾರಗಳು ತಯಾರಾದ ಮೇಲೆ, ಪ್ಲೆ„ವುಡ್‌ ಇಲ್ಲವೆ ಮರದ ಹಲಗೆಗಳನ್ನು ಅಳತೆಗೆ ತಕ್ಕಂತೆ ಅಳವಡಿಸಿ ನಮಗಿಷ್ಟಬಂದ ವಿನ್ಯಾಸದಲ್ಲಿ ಸೂರನ್ನು ನಿರ್ಮಿಸಿಕೊಳ್ಳಬಹುದು. ಮರದ ಫಾಲ್ಸ್‌ ಸೀಲಿಂಗ್‌ ಇತರೆ ಸೂರುಗಳಿಗೆ ಹೋಲಿಸಿದರೆ ದುಬಾರಿ ಆದರೂ, ಇವು ಹೆಚ್ಚು ಗಟ್ಟಿಮುಟ್ಟಾಗಿರುವುದರಿಂದ ಬಹುದಿನ ಬಾಳಿಕೆ ಬರುವುದೇ ಅಲ್ಲದೆ, ನೀರು ಬಿದ್ದರೂ ಏನೂ ಆಗುವುದಿಲ್ಲ. ಜೊತೆಗೆ, ಸಣ್ಣಪುಟ್ಟ ಏಟು ತಗುಲಿದರೂ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಸೂರಿನಂತೆ ಹಾನಿಗೆ ಒಳಗಾಗುವುದಿಲ್ಲ.

Advertisement

 ಫೈಬರ್‌ ಸಿಮೆಂಟ್‌ ಸೀಲಿಂಗ್‌ಗಳು
ನೀರು ಬೀಳುವ ಸಾಧ್ಯತೆ ಇದ್ದರೆ, ತೆರೆದ ಸ್ಥಳಗಳಲ್ಲಿ ಹೊಸ ವಸ್ತುಗಳಾದ ಅಲ್ಯೂಮಿನಿಯಂ ಹಾಳೆ ಹಾಗೂ ಸಿಮೆಂಟ್‌ಗೆ ನಾರಿನಂಶ ಸೇರಿಸಿದ ಹಲಗೆಗಳನ್ನೂ ಬಳಸಲಾಗುತ್ತದೆ. ಇವು ಸಾಕಷ್ಟು ನೀರು ನಿರೋಧಕ ಗುಣ ಹೊಂದಿದ್ದು,ಮಳೆ ಗಾಳಿಗೆ ಒಳಗಾಗುವ ಸ್ಥಳಗಳಲ್ಲಿ ಇವನ್ನು ಬಳಸಲಾಗುತ್ತದೆ. ಪ್ರತಿ ವಸ್ತುವಿಗೆ ಅದರದೇ ಆದ ಮಿತಿಗಳಿದ್ದು, ನಮ್ಮ ಅನುಕೂಲ, ಹಣ ಹಾಗೂ ಅಗತ್ಯ ನೋಡಿಕೊಂಡು ವಿನ್ಯಾಸ, ಆಯ್ಕೆಯನ್ನು ಮಾಡಿಕೊಳ್ಳಬಹುದು. ಪ್ರತಿ ವಸ್ತುವಿಗೂ ಅದರದೇ ಆದ ಸೌಂದರ್ಯವೂ ಇರುತ್ತದೆ. ನಿಮಗೆ ನೈಸರ್ಗಿಕ ವಸ್ತುಗಳಲ್ಲಿ ಹೆಚ್ಚು ಒಲವಿದ್ದರೆ ಮರವನ್ನು ಆಯ್ಕೆ ಮಾಡಿಕೊಳ್ಳಿ. ಕಾರ್ಖಾನೆಗಳಲ್ಲಿ ತಯಾರಾದ ವಸ್ತುಗಳು ನವನವೀನ ಎಂದೆನಿಸಿದರೆ ಕಾಂಪೊಸಿಟ್‌ ಹಾಗೂ ಫೈಬರ್‌ ಸಿಮೆಂಟ್‌ ಹಲಗೆಗಳನ್ನು ಬಳಸಬಹುದು.

ಫಾಲ್ಸ್‌ ಸೀಲಿಂಗ್‌ ಎಷ್ಟು ಎತ್ತರದಲ್ಲಿರಬೇಕು?
ಅತಿ ಕಡಿಮೆ ಎಂದರೆ ಸುಮಾರು ಏಳು ಅಡಿಗಳು ಎತ್ತರದಲ್ಲಿರಬೇಕು.  ಆದರೆ ಈ ಮಟ್ಟದ ಸೂರು ತೀರ ದೊಡ್ಡದಾದ ಹಾಲ್‌ಗೆ ಸರಿ ಹೊಂದುವುದಿಲ್ಲ. ಮೆಝನೈನ್‌, ಅಂದರೆ ಹಾಲ್‌ ಎತ್ತರ ಡಬಲ್‌ ಹೈಟ್‌ – ಹದಿನೈದು ಅಡಿಗಿಂತ ಹೆಚ್ಚಿದ್ದು, ಮಧ್ಯೆ ಒಂದು ಹೆಚ್ಚು ಅಗಲವಿಲ್ಲದ ಸ್ಥಳ ಬೇಕೆಂದರೆ, ಆಗ ಕಡಿಮೆ ಎತ್ತರದ ಸೂರನ್ನು ಮಧ್ಯಂತರದಲ್ಲಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಫೋನ್‌ 98441 32826

ಆರ್ಕಿಟೆಕ್ಟ್ ಕೆ ಜಯರಾಮ್‌  

Advertisement

Udayavani is now on Telegram. Click here to join our channel and stay updated with the latest news.

Next