Advertisement

Home burglary: ಸಾಲ ತೀರಿಸಲು ಗುಜರಿ ವ್ಯಾಪಾರಿ ಮನೆ ಕಳವು

09:29 AM Oct 04, 2023 | Team Udayavani |

ಬೆಂಗಳೂರು: ನಕಲಿ ಕೀ ಬಳಸಿ ಗುಜರಿ ವ್ಯಾಪಾರಿ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ಲಕ್ಷಾಂತರ ರೂ. ನಗದು ದೋಚಿ, ಲೋನ್‌ ಆ್ಯಪ್‌ಗಳ ಸಾಲ ತೀರಿಸಿದ್ದ “ಸಂಬಂಧಿ’ ತಿಲಕನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಜಯನಗರ ನಿವಾಸಿ ಮೊಹಮ್ಮದ್‌ ರಫೀಕ್‌ (35) ಬಂಧಿತ.

ಆರೋಪಿಯಿಂದ 1,10 ಕೋಟಿ ರೂ. ಮೌಲ್ಯದ 1.8 ಕೆ.ಜಿ. ಚಿನ್ನಾಭರಣ, 74,000 ರೂ. ನಗದು, ಕೃತ್ಯಕ್ಕೆ ಬಳಸಿದ ಬೈಕ್‌, ಮೊಬೈಲ್‌ ವಶಕ್ಕೆ ಪಡೆಯಲಾಗಿದೆ. ಎಸ್‌ಆರ್‌ಕೆ ಗಾರ್ಡನ್‌ ನಲ್ಲಿ ವಾಸವಿರುವ, ಗುಜರಿ ವ್ಯಾಪಾರಿ ಷಹನವಾಜ್‌ ಮನೆಯಲ್ಲಿ ಕಳ್ಳತನ ನಡೆ ದಿದ್ದು, ಇವರು ತಮ್ಮ ಮೊಮ್ಮಗಳ ಮದುವೆ ಗಾಗಿ ಚಿನ್ನಾಭರಣ, 8 ರಿಂದ 10 ಲಕ್ಷ ರೂ. ನಗದು ಇಟ್ಟಿದ್ದರು. ಈ ವಿಚಾರ ತಿಳಿದ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿ ಮಕ್ಕಳಿಗೆ ಬಳಸುವ ಪ್ಯಾಂಪರ್ಸ್‌, ಇತರೆ ವಸ್ತುಗಳ ಮಾರಾಟ ಮಳಿಗೆ ನಡೆಸುತ್ತಿದ್ದ. ಲೋನ್‌ ಆ್ಯಪ್‌ ಗಳಿಂದ, ಪರಿಚಯಸ್ಥರಿಂದ ಪಡೆದಿದ್ದ ಲಕ್ಷಾಂತರ ರೂ. ಸಾಲ ತೀರಿಸಲು ಕಳ್ಳತನ ಮಾಡಿದ್ದ.

ನಕಲಿ ಕೀ ಬಳಸಿ ಕೃತ್ಯ: ದೂರುದಾರ ಷಹನಾವಾಜ್‌ಗೆ ಸಂಬಂಧಿ ಆಗಿದ್ದ ಆರೋಪಿ, ಆಗಾಗ ಮನೆಗೆ ಬರುತ್ತಿದ್ದು, ಅವರ ಹಣಕಾಸಿನ ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದ. ಈ ಮಧ್ಯೆ ಷಹನಾ ವಾಜ್‌ 3 ತಿಂಗಳ ಹಿಂದೆ ತಮ್ಮ ಬೈಕ್‌ ಆರೋಪಿಗೆ ಕೊಟ್ಟಿದ್ದು, ಬೈಕ್‌ ಕೀ ಜತೆಗೆ ಇದ್ದ ಮನೆಯ ಕೀಗಳನ್ನು ಜಯನಗರದಲ್ಲಿ 700 ರೂ. ಕೊಟ್ಟು ನಕಲಿ ಮಾಡಿಸಿ ಕೊಂಡಿದ್ದ. ಸೆ.23ರಂದು ಷಹನಾವಾಜ್‌ ಕುಟುಂಬ ಸಂಬಂಧಿಕರ ಮದುವೆಗಾಗಿ ರಾಮನಗರಕ್ಕೆ ತೆರಳಿತ್ತು. ಆಗ ಆರೋಪಿ ಕಳ್ಳತನ ಕೃತ್ಯ ವೆಸಗಿದ್ದಾನೆ.

Advertisement

ಕಳ್ಳತನಕ್ಕೂ ಮುನ್ನ ಆನ್‌ಲೈನ್‌ ಶೋಧ: ಮೂರು ತಿಂಗಳ ಹಿಂದೆಯೇ ಆರೋಪಿ ನಕಲಿ ಕೀ ಮಾಡಿಸಿಕೊಂಡು ಕೃತ್ಯಕ್ಕೆ ಸಂಚು ರೂಪಿಸಿದ್ದ. ಅದಕ್ಕಾಗಿ ಯುಟ್ಯೂಬ್‌ಗಳಲ್ಲಿ ಸಿಸಿ ಕ್ಯಾಮೆರಾಕ್ಕೆ ಮರೆ ಮಾಚುವುದು ಹೇಗೆ? ಬೈಕ್‌ ನಂಬರ್‌ ಪ್ಲೇಟ್‌ ಬದಲಾ ವಣೆ ಸೇರಿ ಪ್ರಕರಣದಿಂದ ಪಾರಾಗುವುದು ಹೇಗೆಂದು ಶೋಧಿಸಿ ದ್ದಾನೆ. ಅದರಂತೆ ಓಎಲ್‌ಎಕ್ಸ್‌ನಲ್ಲಿ ತಮಿಳುನಾಡು ನೋಂದ ಣಿಯ ಬೈಕ್‌ ಖರೀದಿಸಿದ್ದ. ಆದರೆ, ಆ ನಂಬರ್‌ ಪ್ಲೇಟ್‌ಅನ್ನು ಬದಲಿಸಿದ್ದ. ಕೃತ್ಯದ ದಿನ ಈ ಬೈಕ್‌ ಬಳಸಿ, ಸಿಸಿ ಕ್ಯಾಮೆರಾದಿಂದ ಮರೆ ಮಾಚಲು ಆರೇಳು ಕಿ.ಮೀ. ದೂರು ಪ್ರಯಾಣಿಸಿದ್ದಾನೆ. ಆದರೆ, ಸೆ.29ಕ್ಕೆ ಜಯನಗರದಲ್ಲಿ ಚಿನ್ನಾಭರಣ ಅಂಗಡಿ ಯಲ್ಲಿ ಅಡಮಾನ ಇಡಲು ಹೋದಾಗ ಆರೋಪಿ ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next