ಬೆಂಗಳೂರು: ಹಾಡಹಗಲೇ ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದ ಆಂಧ್ರ ಪ್ರದೇಶ ಮೂಲದ ಎಂಬಿಎ ಪದವೀಧರ ಸೇರಿ ಮೂವರನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಹೈದರಾಬಾದ್ ಮೂಲದ ಮೊಹಮ್ಮದ್ ಆವೇಜ್(42), ಶೇಕ್ ಅಬುತಾಲಿಬ್ (22) ಮತ್ತು ಅಬ್ದುಲ್ ರಿಯಾಜ್(22) ಬಂಧಿತರು. ಆರೋಪಿಗಳಿಂದ 50 ಗ್ರಾಂ ಚಿನ್ನ, 157 ಗ್ರಾಂ ಬೆಳ್ಳಿ ವಸ್ತುಗಳು ಮತ್ತು ಒಂದು ಕಾರು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀಚೆಗೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರ ಡೋರ್‌ಲಾಕ್ ಒಡೆದು ಕಳ್ಳತನ ಮಾಡಿದ್ದರು ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ಪೈಕಿ ಮೊಹಮ್ಮದ್ ಆವೇಜ್ ಎಂಬಿಎ ಪದವೀಧರನಾಗಿದ್ದು, ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಕೆಲಸ ಬಿಟ್ಟು, ಇತರೆ ಇಬ್ಬರು ಆರೋಪಿಗಳ ಜತೆ ಸೇರಿ ಮನೆ ಕಳವು ಕೃತ್ಯ ಎಸಗುತ್ತಿದ್ದಾನೆ. ಈತನ ವಿರುದ್ಧ ಹೈದರಾಬಾದ್‌ನಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಕಳವು ಮಾಡಿದ ಕಾರಿನಲ್ಲಿ ಹೈದರಾಬಾದ್‌ನಿಂದ ಬಂದಿದ್ದ ಆರೋಪಿಗಳು, ಮಡಿವಾಳದ ಮಾರುತಿ ನಗರದಲ್ಲಿ ಬೀಗ ಹಾಕಿರುವ ಮನೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ಮಧ್ಯೆ 7ನೇ ಕ್ರಾಸ್‌ನಲ್ಲಿರುವ ಮನೆ ಬೀಗ ಹಾಕಿದ್ದನ್ನು ಗಮನಿಸಿದ ಆರೋಪಿಗಳು, ಆ ಮನೆಯ ಡೋರ್ ಲಾಕ್ ಒಡೆದು 3 ಲಕ್ಷ ರೂ. ಮೌಲ್ಯದ ಚಿನ್ನಾ ಭರಣಗಳನ್ನು ಕಳ್ಳತನ ಮಾಡಿಕೊಂಡು ಹೈದರಾ ಬಾದ್‌ಗೆ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಘಟನಾ ಸ್ಥಳ ಸಮೀಪದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಆಗ ಆರೋಪಿಗಳ ಮುಖ ಚಹರೆ ಪತ್ತೆಯಾಗಿತ್ತು. ಬಳಿಕ ಹೆಚ್ಚಿನ ತನಿಖೆ ನಡೆಸಿದಾಗ ಆರೋಪಿಗಳು ಮನೆ ಗುರುತಿಸಿ, ಸುಮಾರು ಎರಡೂವರೆ ಕಿ.ಮೀ ಟರ್ ದೂರದಲ್ಲಿ ಕಾರು ನಿಲುಗಡೆ ಮಾಡಿ, ಆ ನಂತರ ಬಂದು ಮನೆ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಈ ಆಧಾರದ ಮೇಲೆ ನೂರಾರು ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ವಿಚಾರಣೆಯಲ್ಲಿ ಕಳವು ಮಾಡಿದ ಹಣದಲ್ಲಿ ಗೋವಾದ ಕ್ಯಾಸಿನೋದಲ್ಲಿ ಮೋಜುಮಸ್ತಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.