ಬೆಂಗಳೂರು: ಹತ್ತು ತಿಂಗಳಿಂದ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಕುಖ್ಯಾತ ಮನೆ ಕಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್‌ನನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಗೋವಾದಲ್ಲಿ ಬಂಧಿಸಿ, ನಗರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ಹೇಳಿದರು. ಎರಡು ತಿಂಗಳ ಹಿಂದೆ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳವು ಪ್ರಕರಣದ ತನಿಖೆ ವೇಳೆ ಕಾರ್ತಿಕ್ ಕೈ ಚಳಕ ಕಂಡು ಬಂದಿತ್ತು. ಹೀಗಾಗಿ ಪೊಲೀಸರು ಈತನಿಗಾಗಿ ಶೋಧಿಸುತ್ತಿ ದ್ದರು. ಇದೀಗ ಗೋವಾದಲ್ಲಿ ಆರೋಪಿಯನ್ನು ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 8 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
16ನೇ ವಯಸ್ಸಿನಲ್ಲೇ ಮನೆಗಳ್ಳನ ಆರಂಭಿಸಿದ್ದ ಕಾರ್ತಿಕ್, ಆ ಬಳಿಕ ಅದನ್ನೇ ವೃತ್ತಿಯಾಗಿಸಿ ಕೊಂಡಿದ್ದ. ಈತನ ವಿರುದ್ಧ ಇದುವರೆಗೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳು ಸೇರಿ ರಾಜ್ಯದ ವಿವಿಧ ಠಾಣೆಗಳಲ್ಲಿ ನೂರಕ್ಕೂ ಅಧಿಕ ಮನೆಗಳವು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಪೊಲೀಸರು ಕಾರ್ತಿಕ್‌ನನ್ನು 20ಕ್ಕೂ ಅಧಿಕ ಬಾರಿ ಬಂಧಿಸಿದ್ದರು. ಪ್ರತಿ ಬಾರಿ ಜಾಮೀನು ಪಡೆದು ಹೊರಬಂದ ಬಳಿಕ ಆರೋಪಿ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಎರಡು ಬಾರಿ ಎಸ್ಕೇಪ್ !: 2008ರಲ್ಲಿ ಆರೋಪಿ ಕಾರ್ತಿಕ್ ಪರಪ್ಪನ ಅಗ್ರಹಾರ ಕಾರಾಗೃಹದಿಂದ ತರಕಾರಿ ವಾಹನದಲ್ಲಿ ಎಸ್ಕೇಪ್ ಆಗಿದ್ದ. 2010ರಲ್ಲಿ ಮನೆಗಳವು ಪ್ರಕರಣವೊಂದರ ಸ್ಥಳ ಮಹಜರ್ ವೇಳೆ ತಪ್ಪಿಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಪೊಲೀಸರ ಕಸ್ಟಡಿಯಿಂದ ತಪ್ಪಿಕೊಂಡಿದ್ದರಿಂದ ಅಪರಾಧ ಜಗತ್ತಿನಲ್ಲಿ ಈತನನ್ನು ಎಸ್ಕೇಪ್ ಕಾರ್ತಿಕ್ ಎಂದೇ ಕರೆಯಲಾಗುತ್ತದೆ. ಕಳೆದ ನವೆಂಬರ್‌ನಲ್ಲಿ ಮನೆಗಳವು ಪ್ರಕರಣದಲ್ಲಿ ಹೆಣ್ಣೂರು ಠಾಣೆ ಪೊಲೀಸರು ಕಾರ್ತಿಕ್‌ನನ್ನು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿ ಹಲವು ಕಡೆ ಮನೆಗಳವು ಮಾಡಿದ್ದ. ಈತನ ಬಂಧನಕ್ಕಾಗಿ ಕಳೆದ 10 ತಿಂಗಳಿಂದ ಬೆಂಗಳೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ಗೋವಿಂದರಾಜನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಗೋವಾದಲ್ಲಿ ಬಂಧನ: ಆರೋಪಿ ಕಾರ್ತಿಕ್ ವಿಲಾಸಿ ಜೀವನ ಹಾಗೂ ಜೂಜಾಟದ ಚಟಕ್ಕೆ ಬಿದ್ದಿದ್ದಾನೆ. ಮನೆಗಳವು ಮಾಡಿದಾಗ ಸಿಗುವ ಚಿನ್ನಾಭರಣಗಳನ್ನು ವಿಲೇವಾರಿ ಮಾಡಿ ಹಣ ಪಡೆದು ಗೋವಾ, ಕುನು, ಮನಾಲಿ ಸೇರಿ ದೇಶದ ವಿವಿಧ ರಾಜ್ಯಗಳ ಪ್ರೇಕ್ಷಣೀಯ ಸ್ಥಳಗಳು ಹಾಗೂ ಜೂಜು ಅಡ್ಡೆಗಳಿಗೆ ತೆರಳಿ ಮೋಜು-ಮಸ್ತಿ ಮಾಡುವುದನ್ನು ರೂಡಿಸಿಕೊಂಡಿದ್ದಾನೆ. ಕೆಲ ದಿನಗಳಿಂದ ಕಾರ್ತಿಕ್ ಗೋವಾದ ಕ್ಯಾಸಿನೋಗಳಲ್ಲಿ ಜೂಜಾಡಿಕೊಂಡು ಕಾಲ ಕಳೆಯುತ್ತಿದ್ದ. ಈ ನಡುವೆ ಗೋವಿಂದರಾಜ ನಗರ ಪೊಲೀಸರು ಬೇರೆ ಪ್ರಕರಣವೊಂದರ ಆರೋಪಿಗಳ ಜಾಡು ಹಿಡಿದು ಗೋವಾಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಎಸ್ಕೇಪ್ ಕಾರ್ತಿಕ್ ಗೋವಾದ ಕ್ಯಾಸಿನೋದಲ್ಲಿರುವುದು ಗೊತ್ತಾಗಿ, ಕ್ಷಿಪ್ರ ಕಾರ್ಯಾ ಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ನಗರಕ್ಕೆ ಕರೆತಂದಿದ್ದಾರೆ.