Advertisement

ಅಶಕ್ತ ಕುಟುಂಬಕ್ಕೆ ಒಂದೇ ದಿನದಲ್ಲಿ ಮನೆ ನಿರ್ಮಾಣ

11:53 PM Jun 24, 2019 | mahesh |

ಮಂಡೆಕೋಲು: ಮಂಡೆಕೋಲು ಗ್ರಾಮದ ಮಡಿವಾಳ ಮೂಲೆ ಕಾಲನಿಯಲ್ಲಿ ಹಲವು ವರ್ಷಗಳಿಂದ ಡೇರೆಯಲ್ಲಿ ವಾಸವಾಗಿದ್ದ ಕುಟುಂಬಕ್ಕೆ ಸುಳ್ಯದ ಯುವ ಬ್ರಿಗೇಡ್‌ ತಂಡ ಮನೆ ನಿರ್ಮಿಸಿ ಕೊಟ್ಟು, ದಿಕ್ಕಿಲ್ಲದ ಕುಟುಂಬಕ್ಕೆ ಆಶಾಕಿರಣವಾಗಿದೆ.

Advertisement

ಡೇರೆ (ಟರ್ಪಾಲು) ಹಾಕಿಕೊಂಡು ಫ‌ಕೀರರ ಕುಟುಂಬ ವಾಸವಾಗಿತ್ತು. ಬಿಸಿಲು, ಮಳೆ, ಗಾಳಿಗೆ ಈ ಪುಟ್ಟ ಜಾಗವೇ ಅವರಿಗೆ ಆಸರೆಯಾಗಿತ್ತು. ಮಕ್ಕಳೂ ಶಾಲೆಗೆ ಹೋಗಲು ಸಾಧ್ಯವಿಲ್ಲದೆ ಈ ಗುಡಿಸಲಿನಲ್ಲೇ ಉಳಿಯುವ ಸ್ಥಿತಿ ಇತ್ತು. ಈ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಸೌಲಭ್ಯ ಒದಗಿರಲಿಲ್ಲ.

ಬಸವ ವಸತಿ, ಅಂಬೇಡ್ಕರ್‌, ಇಂದಿರಾ ಆವಾಸ್‌ ಸಹಿತ ಯಾವುದೇ ವಸತಿ ಯೋಜನೆಗಳಲ್ಲಿ ಈ ಕುಟುಂಬಕ್ಕೆ ಮನೆ ಅಥವಾ ನಿವೇಶನ ಒದಗಲಿಲ್ಲ. ವಾಸವಿರುವ ಜಾಗದ ದಾಖಲೆಗಳಿಲ್ಲದೆ ಮನೆ ಮಂಜೂರಾತಿ ನೀಡಲು ಗ್ರಾ.ಪಂ.ಗೂ ಅಡ್ಡಿಯಾಗಿತ್ತು. ಯುವ ಬ್ರಿಗೇಡ್‌ ಇತ್ತೀಚೆಗೆ ಮಡಿವಾಳ ಮೂಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಡೇರೆಯಲ್ಲಿ ವಾಸವಿರುವ ಕುಟುಂಬದ ಕುರಿತು ಮಾಹಿತಿ ಪಡೆದಿತ್ತು. ತಂಡದ ಸದಸ್ಯರು ಚರ್ಚಿಸಿ, ಇವರ ವಾಸಕ್ಕೊಂದು ಸೂಕ್ತ ವ್ಯವಸ್ಥೆ ಮಾಡಲು ನಿರ್ಧರಿಸಿದ್ದರು.

ಒಂದು ದಿನದ ಶ್ರಮದಾನ
ಮನೆ ಕಟ್ಟಲು ಬೇಕಾದ ಸಾಧನ ಸಲಕರಣೆಗಳಿಗಾಗಿ ದಾನಿಗಳನ್ನು ಸಂಪರ್ಕಿಸಿದ ಯುವ ಬ್ರಿಗೇಡ್‌ ತಂಡ, ಕೆಂಪು ಕಲ್ಲು, ಮರಳು, ಸಿಮೆಂಟ್‌ ಶೀಟು, ಸಿಮೆಂಟ್‌ ಕಂಬಗಳನ್ನು ಸಂಗ್ರಹಿಸಿತು. 50ಕ್ಕೂ ಹೆಚ್ಚು ಕಾರ್ಯಕರ್ತರು ಜೂ. 23ರಂದು ಸ್ಥಳಕ್ಕೆ ತೆರಳಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಬೆಳಗಿನ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಹರಿಪ್ರಸಾದ್‌ ಕೆಟರರ್ಸ್‌ ನಿರ್ವಹಿಸಿದರು.

ಇನ್ನೂ ವ್ಯವಸ್ಥೆ ಆಗಬೇಕು
ಫ‌ಕೀರರ ಕುಟುಂಬಕ್ಕೆ ಮನೆ ಇಲ್ಲದಿರುವ ಕುರಿತು ತಂಡದ ಸದಸ್ಯರು ಚರ್ಚಿಸಿ, ದಾನಿಗಳನ್ನು ಸಂಪರ್ಕಿಸಿದೆವು. ಒಂದು ದಿನದ ಶ್ರಮದಾನದಲ್ಲಿ ಮನೆ ನಿರ್ಮಾಣವಾಗಿದೆ. ಮುಂದೆ ಪಡಿತರ ಚೀಟಿ, ಆಧಾರ್‌ ಕಾರ್ಡ್‌ ಸಹಿತ ಹಲವು ದಾಖಲೆಗಳು ಮತ್ತು ಸೌಲಭ್ಯಗಳು ಈ ಕುಟುಂಬಕ್ಕೆ ಸಿಗಬೇಕಿವೆ. ವಿದ್ಯುತ್‌ ವ್ಯವಸ್ಥೆ ಆದರೆ ಸೂಕ್ತ.
– ಲೋಕೇಶ್‌ ಕೆರೆಮೂಲೆ, ಯುವ ಬ್ರಿಗೇಡ್‌ ಕಾರ್ಯಕರ್ತ

Advertisement
Advertisement

Udayavani is now on Telegram. Click here to join our channel and stay updated with the latest news.

Next