Advertisement

ಜನರ ಬಳಕೆಯಿಂದ ದೂರವಾಗುತ್ತಿರುವ ಗೃಹ ಮಂಡಳಿ ಸಾರ್ವಜನಿಕ ಉದ್ಯಾನವನ

11:34 PM Mar 18, 2020 | Sriram |

ಉಡುಪಿ: ದೊಡ್ಡಣಗುಡ್ಡೆಯ ಕರ್ನಾಟಕ ಗೃಹ ಮಂಡಳಿ ನಿವಾಸಿಗರ ಸಾರ್ವಜನಿಕ ಉದ್ಯಾನವನ ಸರಿಯಾದ ನಿರ್ವಹಣೆ ಇಲ್ಲದೆ ನನೆಗುದಿಗೆ ಬಿದ್ದು ಜನರ ಬಳಕೆಯಿಂದ ದೂರ ಸರಿದಿದೆ.

Advertisement

ಅಶುಚಿತ್ವ
2007ರಲ್ಲಿ ಉದ್ಘಾಟನೆಗೊಂಡ ಈ ಪಾರ್ಕ್‌ನ ಸುತ್ತಲೂ ಈಗ ಗಿಡಬಳ್ಳಿಗಳು ಹರಡಿ,ತರಗೆಲೆಗಳ ರಾಶಿಯೇ ಬಿದ್ದು ಪಾರ್ಕ್‌ನ ಅಂದವನ್ನು ಕುಂದುವಂತೆ ಮಾಡಿದೆ. ಸ್ವತ್ಛತೆಯಲ್ಲೂ ಸಂಪೂರ್ಣವಾಗಿ ವಿಫ‌ಲವಾಗಿರುವ ಈ ಪಾರ್ಕ್‌ನಲ್ಲಿ ವಾಕಿಂಗ್‌ ಟ್ರ್ಯಾಕ್‌ ಇದೆಯೇ ಎಂಬುವುದು ಅನುಮಾನವಾಗುತ್ತದೆ. ಟ್ರ್ಯಾಕ್‌ ಮಣ್ಣಿನಲ್ಲಿ ಹುದುಗಿ ಪ್ರಯೋಜನಕ್ಕಿಲ್ಲದಾಗಿದೆ.

ಆವರಣಗೋಡೆಗೆ ಹಾನಿ
ಪಾರ್ಕ್‌ನ ಹಲವು ಭಾಗಗಳಲ್ಲಿ ಆವರಣ ಗೋಡೆಗಳು ಕುಸಿದಿವೆ. ಮುಂಭಾಗದ ಒಂದು ಭಾಗ ಸಂಪೂರ್ಣ ನೆಲ ಸಮವಾಗಿದ್ದು ಪಕ್ಕದಲ್ಲಿರುವ ಪ್ರವೇಶ ದ್ವಾರದ ಗೇಟು ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದ ದನ ಮೊದಲಾದ ಪ್ರಾಣಿಗಳ ಪ್ರವೇಶಕ್ಕೆ ಅನುಕೂಲವಾದಂತಿದೆ.

ಉಪಯೋಗಕ್ಕೆ ಬಾರದ ಬೆಂಚ್‌
ವಿರಮಿಸಲು ಇರುವ ಕೆಲ ಬೆಂಚುಗಳ ಸುತ್ತ ಗಿಡಗಳು ಬೆಳೆದು, ಹಕ್ಕಿಗಳ ಹಿಕ್ಕೆಗಳು ಬೆಂಚ್‌ಗಳಲ್ಲಿ ಹರಡಿ ಕೂರಲು ಅಸಾಧ್ಯವಾಗಿದೆ. ಪಾರ್ಕ್‌ನ ಒಂದು ಭಾಗದಲ್ಲಿ ಗೆದ್ದಲುಗಳಿಂದ ಹುತ್ತ ಸೃಷ್ಟಿಯಾಗಿದ್ದು ಮುಂದಿನ ದಿನಗಳಲ್ಲಿ ಉರಗಗಳ ಆಶ್ರಯ ತಾಣಕ್ಕೆ ಅನುಕೂಲ ಮಾಡಿದಂತಾಗಿದೆ.

ಪುಂಡು ಪೋಕರಿಗಳ ತಾಣ
ಪಾರ್ಕ್‌ ಸದ್ಯ ಪುಂಡು ಪೋಕರಿಗಳ ಅಡ್ಡೆವಾಗಿ ಬದಲಾಗುತ್ತಿರುವುದು ಸಾರ್ವಜನಿಕರನ್ನು ಮತ್ತಷ್ಟು ಗಾಬರಿಗೊಳಿಸಿದೆ. ಮಾದಕ ವಸ್ತು¤ಗಳ ಸೇವನೆಯಂತಹ ಅನೇಕ ಘಟನೆಗಳು ಇಲ್ಲಿ ನಡೆಯುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರುವುದರಿಂದ ಸಹಜವಾಗಿಯೇ ಪಾರ್ಕ್‌ಗೆ ಭೇಟಿ ನೀಡಲು ಜನರು ಮುಜುಗರ ಪಡುತ್ತಿದ್ದಾರೆ.

Advertisement

ಮೇಲ್ದರ್ಜೆಗೇರಿಸುವ ಯೋಚನೆ
ಸದ್ಯ ಪಾಳು ಬಿದ್ದ ಸ್ಥಿತಿಯಲ್ಲಿ ಈ ಪಾರ್ಕ್‌ ಇದೆ. ಬಫೆಲೋ ಗ್ರಾಸ್‌ ಅಳವಡಿಕೆ ಮೂಲಕ ಪಾರ್ಕ್‌ ಅನ್ನು ಮೇಲ್ದರ್ಜೆಗೆ ಏರಿಸುವ ಚಿಂತನೆ ನಡೆಯುತ್ತಿದೆ. ಪಾರ್ಕ್‌ ಸುತ್ತ ಹಣ್ಣಿನ ಮರಗಳಿದ್ದು ಅವುಗಳ ನಿರ್ವಹಣೆಯ ಬಗ್ಗೆಯೂ ಯೋಚನೆ ಇದೆ.
-ಪ್ರಭಾಕರ್‌ ಪೂಜಾರಿ, ದೊಡ್ಡಣಗುಡ್ಡೆ ನಗರಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next