ಮಂಗಳೂರು : ಶಿವಮೊಗ್ಗ ಜಿಲ್ಲೆಯ ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ನೂತನ ಶಿಲಾಮಯ ಬಸದಿ ಹಾಗೂ ಮಾನಸ್ತಂಭದ ಮೇಲಿನ ಜಿನಬಿಂಬಗಳ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವ ಜ. 22ರಿಂದ 27ರ ವರೆಗೆ ಜರಗಲಿದ್ದು, ಅವಿಭಜಿತ ದ.ಕ. ಜಿಲ್ಲೆಯ ಸಮಸ್ತ ಜೈನ ಬಾಂಧವರ ವತಿಯಿಂದ ಹೊರೆ ಕಾಣಿಕೆ ಸಲ್ಲಿಸಲಾಗುವುದು ಎಂದು ಶ್ರೀ ಜೈನ ಧರ್ಮ ಜೀರ್ಣೋದ್ಧಾರಕ ಸಂಘದ ಕಾರ್ಯಾಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಕಾರ್ಕಳದ ಹಿರಿ ಅಂಗಡಿ ಭುಜಬಲಿ ಬ್ರಹ್ಮಚರ್ಯ ಆಶ್ರಮದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆ ಯಲ್ಲಿ ಮಾತನಾಡಿದ ಅವರು, ಜ. 17ರಂದು ಬೆಳಗ್ಗೆ 9ಕ್ಕೆ ಕಾರ್ಕಳ ದಾನಶಾಲೆ ಬಾಹುಬಲಿ ಪ್ರವಚನ ಮಂದಿರದಿಂದ ಹೊರೆ ಕಾಣಿಕೆ ಹೊರಡಲಿದೆ ಎಂದರು.
ಹೊರೆ ಕಾಣಿಕೆ ಸಲ್ಲಿಸುವವರು ಕಾರ್ಕಳ ದಾನಶಾಲೆ ಶ್ರೀ ಬಾಹುಬಲಿ ಪ್ರವಚನ ಮಂದಿರದ ವ್ಯವಸ್ಥಾಪಕರನ್ನು ಅಥವಾ ಸುನಿಲ್ ಕುಮಾರ್ ಬಜಗೋಳಿ, ಯೋಗರಾಜ್ ಶಾಸ್ತ್ರಿ ಕಾರ್ಕಳ, ಹೇಮಚಂದ್ರ ಜೈನ್ ಕಾರ್ಕಳ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಜೈನ ಧರ್ಮ ಜೀರ್ಣೋದ್ಧಾರಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ. ವಿಜಯ ಕುಮಾರ್, ಕೋಶಾಧಿ ಕಾರಿ ಡಾ| ಜೀವಂಧರ ಬಲ್ಲಾಳ್, ಜತೆ ಕಾರ್ಯದರ್ಶಿ ಮಹಾವೀರ್ ಹೆಗ್ಡೆ, ಅನಂತರಾಜ್ ಪೂವಣಿ, ಸಂಪತ್ ಸಾಮ್ರಾಜ್ಯ, ಸುನಿಲ್ ಕುಮಾರ್ ಬಜಗೋಳಿ, ಮಾಲತಿ ವಸಂತರಾಜ್, ಹಾಗೂ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳ ಜೈನ ಬಸದಿಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.
ಮಹಾವೀರ್ ಹೆಗ್ಡೆ ಸ್ವಾಗತಿಸಿದರು. ಯೋಗರಾಜ್ ಶಾಸ್ತ್ರಿ ನಿರೂಪಿಸಿದರು.