ತಿ.ನರಸೀಪುರ: ತ್ರಿವೇಣಿ ಸಂಗಮದಲ್ಲಿ ಫೆ. 17 ರಿಂದ ಮೂರು ದಿನ ನಡೆಯಲಿರುವ ದಕ್ಷಿಣ ಭಾರತದ ಮಹಾ ಕುಂಭಮೇಳ ಉತ್ಸವದ ಪೂರ್ವ ಸಿದ್ಧತೆಯನ್ನು ಆದಿಚುಂಚನಗಿರಿ ಶಾಖಾ ಮಠದ ಸೋಮನಾಥನಂದ ಸ್ವಾಮೀಜಿ, ವಾಟಾಳು ಸಿದ್ಧಲಿಂಗಶಿವಾಚಾರ್ಯ ಶ್ರೀ ಹಾಗೂ ಕೈಲಾಸಶ್ರಮದ ಕಿರಿಯ ಸ್ವಾಮೀಜಿಗಳು ಪರಿಶೀಲನೆ ನಡೆಸಿದರು.
ಕುಂಭಮೇಳದ ಮೂರನೇ ದಿನದ ಮಹೋದಯ ಪುಣ್ಯ ಸ್ನಾನದ ದಿನದಂದು ಯತಿಗಳು ಸ್ನಾನ ಮಾಡುವ ಸ್ಥಳವನ್ನು ನಿಗದಿಪಡಿಸುವುದು ಹಾಗೂ ಮೊದಲನೇ ದಿನ ನಡೆಯುವ ಕುಂಭಮೇಳದ ಗಣ ಹೋಮ ಸೇರಿದಂತೆ ವಿವಿಧ ಹೋಮಗಳನ್ನು ನಡೆಸುವ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಸೋಮನಾಥನಂದನಾಥ ಸ್ವಾಮೀಜಿ, ಫೆ.17 ರಂದು ಸಪ್ತ ಕಳಸದಿಂದ ನೀರು ತಂದು ಪೂಜೆ ನೆರವೇರಿಸಲಾಗುವುದು. ಧ್ವಜಾರೋಹಣೆ ನಡೆಸುವ ಮೂಲಕ ಕುಂಭಮೇಳಕ್ಕೆ ಚಾಲನೆ ನೀಡಲಾಗುವುದು. ನದಿಯ ಮಧ್ಯದಲ್ಲಿಯೇ ಹೋಮ ಯಾಗ ಯಜ್ಞಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಬಾರಿ 5 ಲಕ್ಷ ಕ್ಕೂ ಹೆಚ್ಚ ಜನ ಸೇರುವ ನಿರೀಕ್ಷೆ ಇದೆ. ಯಾವುದೇ ಕೊರತೆಯಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ವಾಟಾಳು ಸಿದ್ಧಲಿಂಗಶಿವಾಚಾರ್ಯ ಶ್ರೀ ಮಾತನಾಡಿ, ಉತ್ತರ ಭಾರತದ ಅಲಹಬಾದಿನಲ್ಲಿ ನಡೆಯುವ ಕುಂಭಮೇಳಕ್ಕೆ ಹೆಚ್ಚು ಅವಧಿಯ ಕಾಲ ಪ್ರಚಾರ ಸಿಗುತ್ತಿದೆ.
ನಮ್ಮ ಕುಂಭಮೇಳಕ್ಕೆ ಇನ್ನೂ ಕೆಲವು ದಿನ ಮಾತ್ರ ಬಾಕಿ ಇದೆ. ಪ್ರಚಾರವೇ ಸರಿಯಾಗಿ ಆಗಿಲ್ಲ. ಸಮಿತಿಯನ್ನೂ ರಚಿಸಿಲ್ಲ. ಪ್ರಚಾರ ದೊರಕಿದ್ದರೆ ಲಕ್ಷಾಂತರ ಮಂದಿ ಸೇರುವ ಸಾಧ್ಯತೆ ಇತ್ತು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೈಲಾಸಾಶ್ರಮದ ಕಿರಿಯ ಸ್ವಾಮೀಜಿ, ವೆಂಕಟೇಶ್ ಚೈತನ್ಯ, ಮುಖಂಡರಾದ ಪಿ.ಸ್ವಾಮಿನಾಥ್ ಗೌಡ, ಪಾರುಪತ್ತೇಗಾರ್ ಪವನ್, ನೀರಾವರಿ, ಲೋಕೋಪಯೋಗಿ ಅಧಿಕಾರಿಗಳು ಉಪಸ್ಥಿತರಿದ್ದರು.