“ಸವರ್ಣ ದೀರ್ಘ ಸಂಧಿ’ ಚಿತ್ರದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ನವ ಪ್ರತಿಭೆ ಕೃಷ್ಣಾ, ಇದೀಗ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಮೊದಲೇ ಹಾಲಿವುಡ್‌ಗೆ ಹಾರುತ್ತಿದ್ದಾರೆ. ಹೌದು, ಚಂದನವನದಲ್ಲಿ ಈಗಷ್ಟೇ ಭರವಸೆ ಮೂಡಿಸುತ್ತಿದ್ದ ಕರಾವಳಿ ಹುಡುಗಿ ಕೃಷ್ಣಾ, ತಮ್ಮ ಎರಡನೇ ಚಿತ್ರದಲ್ಲೇ ಹಾಲಿವುಡ್‌ಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಸದ್ಯ ಸದ್ದಿಲ್ಲದೆ ತಮ್ಮ ಮೊದಲ ಇಂಗ್ಲಿಷ್ ಚಿತ್ರ “ಕಿಡ್ ಹ್ಯಾಪಿ’ಯ ಚಿತ್ರೀಕರಣ ಮುಗಿಸಿರುವ ಕೃಷ್ಣಾ, ಆದಷ್ಟು ಬೇಗ ಇಂಗ್ಲಿಷ್ ಚಿತ್ರದ ಮೂಲಕ ತೆರೆಮೇಲೆ ಬರುವ ಖುಷಿಯಲ್ಲಿದ್ದಾರೆ.
ಇಂಡೋ-ಅಮೆರಿಕನ್ ಪ್ರತಿಭೆ ಕ್ರಿಸ್-ಮೆಗನ್ ನಿರ್ದೇಶನದ “ಕಿಡ್ ಹ್ಯಾಪಿ’ ಭಾರತದಲ್ಲಿ ನಡೆಯುವ ನೈಜ ಘಟನೆ ಆಧಾರಿಸಿದ ಚಿತ್ರವಾಗಿದ್ದು, ಇದರಲ್ಲಿ ಕೃಷ್ಣಾ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭಾರತದ ಮಧ್ಯಮ ವರ್ಗದ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ. ತಮ್ಮ ಚೊಚ್ಚಲ ಹಾಲಿವುಡ್ ಚಿತ್ರ ಮತ್ತು ಅದರ ಪಾತ್ರದ ಬಗ್ಗೆ ಮಾತನಾಡುವ ಕೃಷ್ಣಾ, “ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಮಲ್ಲಿಕಾ. ಭಾರತದ ಒಂದು ವಿಭಿನ್ನ ಯುವತಿಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ. ಇದೊಂದು ನೈಜ ಘಟನಾವಳಿ ಆಧಾರಿತ ಸಿನಿಮಾ. ನಿರ್ದೇಶಕರ ಜೀವನದಲ್ಲಿ ನಡೆದ ನೈಜ ಕಥೆಯೇ ಸಿನಿಮಾವಾಗಿದೆ.
ಹೀರೋ ಅಮ್ಮ ಅಮೆರಿಕನ್, ಅಪ್ಪ ಇಂಡಿಯನ್. ವಿದೇಶದಲ್ಲೇ ಬೆಳೆದು ದೊಡ್ಡವನಾಗುವ ಹೀರೋ ಕೊನೆಗೆ ತನ್ನ ತಂದೆಯನ್ನು ಹುಡುಕಿಕೊಂಡು ಭಾರತಕ್ಕೆ ಬರುತ್ತಾನೆ. ಇಲ್ಲಿ ಮಲ್ಲಿಕಾಳ ಪರಿಚಯವಾಗುತ್ತದೆ. ಆ ನಂತರ ಹೀರೋ ಮತ್ತು ಮಲ್ಲಿಕಾಳ ಜೀವನದಲ್ಲಿ ಏನೇನಾಗುತ್ತದೆ ಎಂಬುದೇ ಈ ಸಿನಿಮಾದ ಕಥಾಹಂದರ’ ಎಂದು ವಿವರಣೆ ಕೊಡುತ್ತಾರೆ. ಇನ್ನು ಚಿತ್ರದ ಪಾತ್ರಕ್ಕಾಗಿ ಕೃಷ್ಣಾ ಸಾಕಷ್ಟು ತಯಾರಿ ಕೂಡ ಮಾಡಿಕೊಳ್ಳ ಬೇಕಾಯಿತಂತೆ, “ಇಲ್ಲಿ ನಾನು ಬೆರಗಾಗುವಂತೆ ಇಂಗ್ಲಿಷ್ ಮಾತನಾಡುತ್ತೇನೆ. ಚಿತ್ರದ ಪಾತ್ರಕ್ಕಾಗಿ ಫೈಟಿಂಗ್ ಕಲಿತಿದ್ದೇನೆ.
ಭಾರತದ ಹುಡುಗಿಯೊಬ್ಬಳು ಹೀಗೂ ಇರಬಹುದಾ ಅನ್ನೋ ಥರ ನಾನಿರುತ್ತೇನೆ. ಇಡೀ ಸಿನಿಮಾದಲ್ಲಿ ಭಾರತವನ್ನು ಹೊಸ ರೀತಿ ತೋರಿಸಲಾಗಿದೆ. ಇದು ಮುಖ್ಯ ವಾಗಿ ಅಮೆರಿಕನ್ ಆಡಿಯನ್ಸ್‌ಗಾಗಿಯೇ ಮಾಡಿರುವ ಸಿನಿಮಾ. ಭಾರತವೆಂದರೆ ವಿದೇಶಿಯರಲ್ಲಿ ಬೇರೆಯದೇ ಆದ ಒಂದು ಕಲ್ಪನೆಯಿದೆ. ಅದನ್ನು ನಿವಾರಿಸಿ ಭಾರತದ ಬಗ್ಗೆ ಒಂದೊಳ್ಳೆಯ ಭಾವನೆ ಮೂಡುವಂತೆ ಮಾಡುವ ಪ್ರಯತ್ನವೇ ಈ ಸಿನಿಮಾ. ಇದರಲ್ಲಿ ನಿಜವಾದ ಭಾರತದ ಚಿತ್ರಣವಿದೆ’ ಎನ್ನುತ್ತಾರೆ ಕೃಷ್ಣಾ. “ಕಿಡ್ ಹ್ಯಾಪಿ’ ಚಿತ್ರದ ಶೇ.90ರಷ್ಟು ಚಿತ್ರೀಕರಣವನ್ನು ಭಾರತ ದಲ್ಲಿಯೇ ಮಾಡಲಾಗಿದೆ.
ಆಗುಂಬೆ ಹತ್ತಿರದ ಬಿದರಗೋಡು, ಬೆಂಗಳೂರು ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸ ಲಾಗಿದೆ. ಉಳಿದ ಭಾಗವನ್ನು ನ್ಯೂಯಾರ್ಕ್ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ತೆರೆಮುಂದೆ ಮತ್ತು ತೆರೆಹಿಂದೆ ಬಹುತೇಕ ಇಂಡೋ – ಅಮೆರಿಕನ್ ಕಲಾವಿದರು ಮತ್ತು ತಂತ್ರಜ್ಞರು ಸೇರಿ ಈ ಚಿತ್ರ ಮಾಡಿರುವುದು ವಿಶೇಷ. ಸದ್ಯ “ಕಿಡ್ ಹ್ಯಾಪಿ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ವರ್ಷದ ಮಧ್ಯ ಭಾಗದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಒಟ್ಟಾರೆ ಕನ್ನಡದ ಹುಡುಗಿಯೊಬ್ಬಳು ತನ್ನ ಎರಡನೇ ಚಿತ್ರದಲ್ಲಿ ಹಾಲಿವುಡ್‌ಗೆ ಪರಿಚಯವಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ.