ಹೊನ್ನಾಳಿ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಜೂನ್ 19ರಂದು ಹೊನ್ನಾಳಿ ಬಂದ್ ಮಾಡಲು ಹೊರಟಿರುವುದು ಬಾಲ ಚೇಷ್ಟೆ ಇದ್ದಂತೆ ಎಂದು ಶಾಸಕ ಡಿ.ಜಿ.ಶಾಂತನಗೌಡ ವ್ಯಂಗ್ಯವಾಡಿದರು. ಭಾನುವಾರ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿವೆ. ನ್ಯಾಮತಿ ರಸ್ತೆ ಹಾಗೂ ಪಟ್ಟಣದ ತುಮ್ಮಿನಕಟ್ಟೆ ರಸ್ತೆ ಕಾಮಗಾರಿ ತಟಸ್ಥವಾಗಿದೆ ಎಂದು ಮಾಜಿ ಸಚಿವರು ಹೇಳಿರುವುದು ಸತ್ಯಕ್ಕೆ ದೂರವಾದದು ಎಂದು ಹೇಳಿದರು. ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಕ್ಕೆ ನಾನು ನಿರ್ಲಕ್ಷ ಮಾಡಿಲ್ಲ ಮತ್ತು ಮುಂದೆಯೂ ಮಾಡುವುದಿಲ್ಲ.
ಬಿಪಿಎಲ್ ಕಾರ್ಡ್ ವಿತರಣೆಗಾಗಿ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಜುಲೈ 15ರಿಂದ ಎಲ್ಲ ಕಾಡ್ ìಗಳನ್ನು ವಿತರಿಸಿಲಾಗುವುದು ಎಂದು ಹೇಳಿದರು. ತುಂಗಭದ್ರಾ ನದಿಗೆ ನಿರ್ಮಾಣವಾಗುತ್ತಿರುವ ನೂತನ ಸೇತುವೆ ಕಾಮಗಾರಿ 5 ವರ್ಷವಾದರೂ ಪೂರ್ಣಗೊಂಡಿಲ್ಲ ಎಂದು ಹೇಳಿಕೆ ನೀಡಿರುವ ರೇಣುಕಾಚಾರ್ಯ ಅವರ ವಾದ ಸರಿಯಲ್ಲ.
ಅನೇಕ ಬಾರಿ ಗುತ್ತಿಗೆದಾರರ ಸಮಸ್ಯೆಯಾಗಿದ್ದು, ಅದೆಲ್ಲವನ್ನು ಬಗೆ ಹರಿಸಿದ್ದೇನೆ. ಜುಲೈ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದರು. ಪಟ್ಟಣದ ತುಮ್ಮಿನಕಟ್ಟೆ ರಸ್ತೆ ಅಗಲೀಕರಣದಲ್ಲಿ ಸಮಸ್ಯೆಯಾಗಿದ್ದು, ಕೇವಲ ಮೂವರಿಂದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಟ್ಟಡ ಮಾಲೀಕರ ಮನವೊಲಿಸಿ ಜರೂರು ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.
ತುಂಗಾ ನಾಲಾ ಆಧುನೀಕರಣದ ಬಗ್ಗೆ ಮಾಜಿ ಸಚಿವರು ಟೀಕೆ ಮಾಡಿದ್ದಾರೆ. ಈ ಹಿಂದೆ 10 ವರ್ಷ ಅವರೇ ಆಡಳಿತ ನಡೆಸಿದ್ದಾರೆ. ಆಗ ತುಂಗಾ ನಾಲಾ ಬಗ್ಗೆ ಮಾತನಾಡದೇ ಈಗ ಮಾತನಾಡುತ್ತಿದ್ದಾರೆ ಇದು ಸಲ್ಲ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡದೇ ಈಗ ನಮ್ಮ ಸರ್ಕಾರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ರೇಣುಕಾಚಾರ್ಯ ಕರೆದಿರುವ ಹೊನ್ನಾಳಿ ಬಂದ್‌ಗೆ ಯಾರೂ ಸಹಕಾರ ನೀಡಬಾರದು. ಎಂದಿನಂತೆ ಎಲ್ಲ ಅಂಗಡಿ ಮುಂಗಟ್ಟುಗಳು, ಕಚೇರಿಗಳು ಮತ್ತು ಶಾಲಾ ಕಾಲೇಜುಗಳು ಕೆಲಸ ನಿರ್ವಹಿಸಬೇಕು ಎಂದು ಅವರು ಮನವಿ ಮಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಬಿಜೆಪಿಯವರು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿದರೆ ಸುಮ್ಮನಿರುವುದಿಲ್ಲ.
ಅವರ ವಿರುದ್ಧ ನಾವು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಧುಗೌಡ, ಉಪಾಧ್ಯಕ್ಷ ರಂಜಿತ್, ತಾಪಂ ಸದಸ್ಯ ಪೀರ್ಯಾನಾಯ್ಕ, ಎಪಿಎಂಸಿ ಸದಸ್ಯ ಪ್ರಕಾಶ್ ಇತರರು ಇದ್ದರು.