Advertisement
ಬೇಸಿಗೆ ರಜಾಕ್ಕಾಗಿ ಕಾದು ಕುಳಿತಿರುತ್ತಿದ್ದ ನಮಗೆ ರಜಾ ಸಿಕ್ಕೊಡನೆ ಮಜವೋ ಮಜ ! ಬೆಳಿಗ್ಗೆ ಹನ್ನೊಂದು ಗಂಟೆಯ ಒಳಗೆ ಊಟಮುಗಿಸಿ, ಹೊಳೆಗೆ ಬಟ್ಟೆ ಒಗೆಯಲು ಹೋಗುತ್ತಿದ್ದ ಗೆಳತಿಯ ಜೊತೆ ಹೋಗಿ, ಅವಳು ಬಟ್ಟೆ ಒಗೆಯುವವರೆಗೂ ಹರಟುತ್ತಾ ಕೂರುವುದು, ಮಧ್ಯಾಹ್ನ ಮರಕ್ಕೆ ಉಯ್ನಾಲೆ ಕಟ್ಟಿಸಿಕೊಂಡು ಆಡುವುದೂ, ಕಥೆ-ಕಾದಂಬರಿ ಓದುವುದೂ (ನಾನು, ನನ್ನ ಅಕ್ಕ ಆರನೆಯ ತರಗತಿದಲೇ ಕಾದಂಬರಿ ಓದುತ್ತಿದ್ದೆವು), ಅಮ್ಮ ಅಕ್ಕ , ಗೆಳತಿಯರ ಜೊತೆ ಕಲ್ಲಾಟ, ಚೌಕಾಭಾರ, ಅಟುಗುಳಿ ಮನೆ ಆಡುವುದೂ- ಇತ್ಯಾದಿ. ಸಾಯಂಕಾಲ ಆಟ-ಆಟ-ಆಟ. ಕಣ್ಣುಮುಚ್ಚಾಲೆ, ಕುಂಟಾಟ, ಡಬ್ಟಾವನ್-ಟು-ತ್ರಿ, ಗೋಲ್ಡರ್ನ್ ಪ್ಲೇ, ಗುಲ್ಟೋರೊ- ಒಂದೇ ಎರಡೇ ನಾವು ಆಡುತ್ತಿದ್ದ ಆಟಗಳು? ಈ ಮಧ್ಯೆ ಟೂರಿಂಗ್ ಟಾಕೀಸ್ನಲ್ಲಿ ಒಳ್ಳೆಯ ಸಿನೆಮಾ ಬಂದರೆ ಅದನ್ನೂ ನೋಡುತ್ತಿದ್ದೆವು. ಆಗೆಲ್ಲಾ ನಮಗೆ ಒಂದೂ ಮುಕ್ಕಾಲು ತಿಂಗಳು ರಜಾ ಸಿಗುತ್ತಿತ್ತು. ರಜದ ಅವಧಿಯಲ್ಲಿ ನಾವೂ ಮೈಸೂರಿನಲ್ಲಿದ್ದ ಸೋದರತ್ತೆ ಮನೆಗೋ, ಬೆಂಗಳೂರಿನಲ್ಲಿದ್ದ ಅಜ್ಜಿಮನೆಗೋ ಹೋಗುತ್ತಿದ್ದೆವು. ಒಮ್ಮೊಮ್ಮೆ ನಂಜನಗೂಡಿನಲ್ಲಿದ್ದ ದೊಡ್ಡಮ್ಮನ ಮನೆಗೂ ಹೋಗುತ್ತಿದ್ದೆವು. ಬೆಂಗಳೂರಿನಲ್ಲಿ ಚಿಕ್ಕಮ್ಮಂದಿರ ಒಡನಾಟ, ಅವರು ಹೇಳುತ್ತಿದ್ದ ಕಥೆಗಳು, ಮಾವಿನಮರದ ಕೆಳಗೆ ಅವರು ಹಾಕುತ್ತಿದ್ದ ಕೈತುತ್ತು ಮನಸ್ಸಿಗೆ ಮುದ ತರುತ್ತಿತ್ತು. ಮೈಸೂರಿನ ನಮ್ಮ ಸೋದರತ್ತೆ ನಮ್ಮನ್ನು ತುಂಬ ಸುತ್ತಾಡಿಸುತ್ತಿದ್ದರು.
Related Articles
Advertisement
ಬೇಸಿಗೆ ಶಿಬಿರಗಳೂ ನಾನಾ ರೀತಿ ಇರುತ್ತವೆ. ಕೆಲವರು ಹಣಮಾಡಲೆಂದೇ ಶಿಬಿರಗಳನ್ನು ನಡೆಸುತ್ತಾರೆ. ಬೆರಳೆಣಿಕೆಯಷ್ಟು ಶಿಬಿರಗಳು ಮಕ್ಕಳಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತವೆ. ಬೇಸಿಗೆ ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ, ಅವರ ಸುಪ್ತ ಪ್ರತಿಭೆಗಳು ಹೊರಹೊಮ್ಮುತ್ತವೆ, ನಾಯಕತ್ವದ ಗುಣ ಬೆಳೆಯುತ್ತದೆ, ಸಹಬಾಳ್ವೆ-ಸಹಭೋಜನದ ಮಹತ್ವ ತಿಳಿಯುತ್ತಾರೆ, ಸ್ವತಂತ್ರ ಮನೋಭಾವ ಬೆಳೆಸಿಕೊಳ್ಳುತ್ತಾರೆ, ಎಲ್ಲವೂ ನಿಜ. ಆದರೆ ಮತ್ತೂಂದು ರೀತಿಯಲ್ಲಿ ಯೋಚಿಸಿದರೆ ಬೇಸಿಗೆ ಶಿಬಿರ ಶಾಲೆಯ ಮುಂದುವರೆದ ಭಾಗ ಎನ್ನಿಸುತ್ತದೆ. ಪಾಠ, ಓದು, ಹೋಂವರ್ಕ್ ಕಾಟ ಇಲ್ಲದಿರಬಹುದು, ಆದರೆ, ಬೇಸಿಗೆಶಿಬಿರದ ಕಾರ್ಯಕ್ರಮಗಳು ಸೀಮಿತ ಚೌಕಟ್ಟಿನಲ್ಲಿ ನಡೆಯುತ್ತವೆ.
ಕೆಲವು ಬೇಸಿಗೆ ಶಿಬಿರಗಳು ಜಾನಪದ ಆಟಗಳನ್ನು ಪರಿಚಯಿಸುವ, ಮಕ್ಕಳಿಗೆ ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುವ, ಗ್ರಾಮೀಣ ಬದುಕನ್ನು ಪರಿಚಯಿಸುವ ಮಕ್ಕಳ ಸಂತೆ, ಎತ್ತಿನಗಾಡಿಯಲ್ಲಿ ಪ್ರಯಾಣ, ಬೆಟ್ಟ-ಗುಡ್ಡಗಳಿರುವ ಕಡೆಗೆ ಪ್ರವಾಸ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸ್ತುತ್ಯರ್ಹ. ಆದರೆ, ಈಗಿನ ಮಕ್ಕಳಿಗೆ ಬಂಧುಗಳನ್ನು ಭೇಟಿಮಾಡುವ, ಅವರೊಡನೆ ಒಡನಾಡುವ, ಅಜ್ಜ ಹೇಳುವ ಕಥೆಕೇಳುತ್ತ ಅಜಿ j ಹಾಕುವ ಕೈತುತ್ತು ತಿನ್ನುವ ಅವಕಾಶಗಳು ತಪ್ಪಿ ಹೋಗಿವೆ. ಎಲ್ಲರನ್ನೂ ಆಂಟಿ-ಅಂಕಲ್ ಎಂದು ಕರೆಯುವುದರಿಂದ ಚಿಕ್ಕಮ್ಮ-ಚಿಕ್ಕಪ್ಪ, ದೊಡ್ಡಮ್ಮ-ದೊಡ್ಡಪ್ಪ, ಮಾವ-ಅತ್ತೆ ಇಂತಹ ಸಂಬಂಧಗಳು ಅರ್ಥವಾಗುತ್ತಿಲ್ಲ. ಅವರಿಗೆ ಮನೆಯಲ್ಲಿ ನಡೆಯುವ ಸಮಾರಂಭಗಳು ಬೋರ್! ಅಪ್ಪ-ಅಮ್ಮನ ಜೊತೆ ನೆಂಟರಿಷ್ಟರ ಮನೆಗಳಿಗೆ ಹೋಗುವುದಿಲ್ಲ. ಒಟ್ಟಿಗೆ ಸೇರಿ ಹಬ್ಬ-ಹರಿದಿನಗಳನ್ನು ಆಚರಿಸುವುದು ಗೊತ್ತೇ ಇುಲ್ಲ. ಹೀಗಿರುವಾಗ ಇಂದಿನ ಮಕ್ಕಳಿಗೆ ನಮ್ಮ ನಾಡು-ನುಡಿಯ ಪರಿಚಯವಾಗುವುದು ಹೇಗೆ ಸಾಧ್ಯ? ನಮ್ಮ ಸಂಸ್ಕೃತಿ, ಪರಂಪರೆ, ಪ್ರತಿ ಹಬ್ಬಗಳ ಪ್ರಾಮುಖ್ಯ ಅರಿವಾಗುವುದು ಹೇಗೆ?
ಸಿ. ಎನ್. ಮುಕ್ತಾ