ಮುದ್ದೇಬಿಹಾಳ: ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗಿದೆ ಎಂದು ಹೇಳಿ ಮಹಾರಾಷ್ಟ್ರ ಗಡಿಭಾಗದಲ್ಲಿ ಬರುವ ವಿಜಯಪುರ ಜಿಲ್ಲಾದ್ಯಂತ ಹೋಳಿ ಹಬ್ಬ ಸಾರ್ವತ್ರಿಕವಾಗಿ ಆಚರಣೆಗೆ ಹೇರಿರುವ ನಿಷೇಧ ಸೀಮಿತಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಗುರುವಾರ ಪ್ರಭಾರ ತಹಶೀಲ್ದಾರ್ ಅನೀಲಕುಮಾರ ಢವಳಗಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾದ್ಯಂತ ಹೇರಿರುವ ನಿಷೇಧ ಕೈಬಿಟ್ಟು ಮಹಾರಾಷ್ಟ್ರ ಗಡಿ ಹಂಚಿಕೊಂಡಿರುವ ಪ್ರದೇಶಗಳಿಗೆ ಮಾತ್ರ ಅದನ್ನು ಸೀಮಿತಗೊಳಿಸಬೇಕು. ಗಡಿ ಭಾಗದಿಂದ ದೂರದಲ್ಲಿರುವ ಮುದ್ದೇಬಿಹಾಳದಂತಹ ತಾಲೂಕುಗಳನ್ನು ನಿಷೇಧಾಜ್ಞೆಯಿಂದ ಮುಕ್ತಗೊಳಿಸಬೇಕು. ಮುದ್ದೇಬಿಹಾಳದಲ್ಲಿ ಕೋವಿಡ್ ನಿಯಮಾನುಸಾರವೇ ಹೋಳಿ ಆಚರಿಸಲಾಗುತ್ತಿದ್ದು ಅನುಮತಿ ಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಜಿಲ್ಲಾಡಳಿತ ಎಷ್ಟೇ ನಿಯಮ ವಿಧಿ ಸಿದರೂ ಅದನ್ನು ಪಾಲಿಸಲಾಗುತ್ತದೆ. ಆದರೆ ಹೋಳಿ ಆಚರಣೆಗೆ ಸಂಪೂರ್ಣ ನಿಷೇಧ ಹೇರುವುದು ಸಮಂಜಸವಲ್ಲ. ಜಿಲ್ಲಾಧಿಕಾರಿಗಳು ತಮ್ಮ ತೀರ್ಮಾನ ಮರು ಪರಾಮರ್ಶಿಸಬೇಕು ಎಂದು ಕೋರಲಾಗಿದೆ.
ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ ಮಾತನಾಡಿ, ವಿವಿಧೆಡೆ ನಡೆಯುತ್ತಿರುವ ಉಪ ಚುನಾವಣೆ ರಾಜಕೀಯ ಪ್ರಚಾರಕ್ಕಿಲ್ಲದ ಕೋವಿಡ್ ನಿಯಮ ಹೋಳಿ ಹಬ್ಬಕ್ಕೇಕೆ?. ಹಿಂದು ಹಬ್ಬಗಳೇ ಸರ್ಕಾರಕ್ಕೆ ಟಾರ್ಗೆಟ್ ಆಗುತ್ತಿರುವುದು ಎಷ್ಟರಮಟ್ಟಿಗೆ ಸರಿ?. ಸಾವಿರಾರು, ಲಕ್ಷಾಂತರ ಜನ ಸೇರುವ ರಾಜಕೀಯ ಸಮಾರಂಭಗಳಿಗೆ ಕೋವಿಡ್ ನಿಯಮ ಅನ್ವಯವಾಗುವುದಿಲ್ಲವೇ?. ಹಿಂದು ಹಬ್ಬಗಳಿಂದ ಮಾತ್ರ ಕೊರೊನಾ ಹರಡುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಹೋಳಿಗೆ ನಿಷೇಧ ಹೇರಿದ್ದರಿಂದ ಬಣ್ಣದ ವ್ಯಾಪಾರಸ್ಥರಿಗೆ ಎಷ್ಟು ಹಾನಿಯಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಖಾರವಾಗಿ ಹೇಳಿದರು.
ಪುರಸಭೆ ನಾಮನಿರ್ದೇಶಿತ ಸದಸ್ಯ ರಾಜಶೇಖರ ಹೊಳಿ ಮಾತನಾಡಿ, ಮಹಾರಾಷ್ಟ್ರ ಗಡಿಯಿಂದ ದೂರದಲ್ಲಿರುವ ಮುದ್ದೇಬಿಹಾಳದಲ್ಲಿ ಹೋಳಿ ಆಚರಣೆಗೆ ಅವಕಾಶ ಕಲ್ಪಿಸಿಕೊಡಬೇಕು. ನಿಯಮಗಳ ಅನುಸಾರವೇ ಹೋಳಿ ಆಚರಿಸುತ್ತೇವೆ ಎಂದರು.
ಈ ವೇಳೆ ಹಣಮಂತ ನಲವಡೆ, ಸಂತೋಷಕುಮಾರ ಬಾದರಬಂಡಿ, ಪುನಿತ್ ಹಿಪ್ಪರಗಿ, ಮಹಾಂತೇಶ ಕಾಶಿನಕುಂಟಿ, ರವೀಂದ್ರ ಬಿರಾದಾರ, ಸಂಗಪ್ಪ ಮೇಲಿನಮನಿ, ಹಣಮಂತ ಕಲ್ಯಾಣಿ, ವೀರೇಶ ಕೆಲ್ಲೂರ, ವೀರೇಶ ಢವಳಗಿ, ರಾಜು ಬಳ್ಳೊಳ್ಳಿ, ಸಂತೋಷ ನಾಯೊRàಡಿ, ಸಂಗಯ್ಯ ಸಾರಂಗಮಠ, ಪ್ರಕಾಶ ಕೆಂಧೂಳಿ ಇತರರಿದ್ದರು