Advertisement
ಹೌದು. ಜಿಲ್ಲೆಯಲ್ಲಿ ಹೋಳಿಹುಣ್ಣಿಮೆ ಅಥವಾ ಹೋಳಿಹಬ್ಬವನ್ನು ವಿಭಿನ್ನ ಶೈಲಿಯಲ್ಲಿ ಆಚರಿಸುವ ಸಂಪ್ರದಾಯವಿತ್ತು. ಆದರೆ ಜಾಗತೀಕರಣದ ಹೊಡೆತಕ್ಕೆ ತನ್ನ ಸ್ವರೂಪವನ್ನೇ ಕಳೆದುಕೊಂಡು ಬರೀ ಬಣ್ಣ ಎರಚಾಟ, ಮದ್ಯದ ಅಮಲು ಮತ್ತು ಡಿ.ಜೆ. ಶಬ್ದಕ್ಕೆ ಮಾತ್ರ ತನ್ನ ಅಸ್ತಿತ್ವವನ್ನು ತಂದು ನಿಲ್ಲಿಸಿದೆ. ಹೋಳಿಹಬ್ಬವನ್ನು ಅಖಂಡ ಧಾರವಾಡ ಜಿಲ್ಲೆಯವಿವಿಧ ಭಾಗಗಳಲ್ಲಿ ವಿಭಿನ್ನ ಶೈಲಿಯಲ್ಲಿ ಆಚರಿಸಲಾಗುತ್ತದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ಪೂರ್ವ ಭಾಗದ ಬೆಳವಲದ ಸಂಸ್ಕೃತಿ ಮತ್ತು ಪಶ್ಚಿಮ ಭಾಗದ ಅರೆಮಲೆನಾಡು ಸಂಸ್ಕೃತಿಗೆ ತಕ್ಕಂತೆ ಹೋಳಿಹಬ್ಬ ಆಚರಿಸಲಾಗುತ್ತದೆ. ಬಯಲು ಸೀಮೆಯ ಜನ ಬರೀ ಕಾಮಣ್ಣನನ್ನು ಸುಟ್ಟು, ಸಾರಾಯಿ ಕುಡಿದು ಸಂಭ್ರಮಿಸುವುದೇ ಹೆಚ್ಚು. ಇಲ್ಲಿ ಹೋಳಿಪದಗಳಿಗೆ ಹೆಚ್ಚು ಅವಕಾಶವಿಲ್ಲ. ಇನ್ನು ಜಿಲ್ಲೆಯ ಅರೆಮಲೆನಾಡು ತಾಲೂಕುಗಳಲ್ಲಿ ಕಾಮಣ್ಣನ ಗಣಿ (ದೈತ್ಯ ಮರದ ದಿಮ್ಮೆ ಅಥವಾ ನಾಟಾ)ಯನ್ನು ಕಾಡಿನಿಂದ ಕಡೆದು ತಂದು ಊರಿನ ಅಗಸಿ ಬಾಗಿಲಿಗೆ ನಿಲ್ಲಿಸುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ.
Related Articles
Advertisement
ಈ ಕುರಿತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹತ್ತಕ್ಕೂ ಹೆಚ್ಚು ಜನರು ಪಿಎಚ್.ಡಿ ಪದವಿ ಪಡೆದಿದ್ದರೂ ಇನ್ನು ಹೋಳಿ ಸಾಹಿತ್ಯದ ಅಧ್ಯಯನ ಸಾಕಷ್ಟಿದೆ. ಅಂತಹ ಸಾಹಿತ್ಯ ಸೃಷ್ಟಿಗೆ ಕಾರಣವಾಗಿದ್ದೇ ಈ ಹೋಳಿಹಬ್ಬ. ಆದರೆ ಇಂದು ಬರೀ ಡಿ.ಜೆ. ಮತ್ತು ಬಣ್ಣ ಎರಚಾಟಕ್ಕೆ ಮಾತ್ರ ಸೀಮಿತವಾಗಿರುವ ಹೋಳಿಹಬ್ಬ ಇಂತಹ ಮಧುರ ಸಾಹಿತ್ಯ, ಹಾಡು, ಕುಣಿತ ಸಂಭ್ರಮವನ್ನು ಕಳೆದುಕೊಂಡಂತಾಗಿದೆ.
ನಗರ ಮಾದರಿ ಹಳ್ಳಿಗೆ: ಕಳೆದ ಒಂದು ದಶಕದಲ್ಲಿ ಹೋಳಿಹಬ್ಬವನ್ನು ನಗರದಲ್ಲಿ ಆಚರಿಸುವ ಅಂದರೆ ಧಾರವಾಡ-ಹುಬ್ಬಳ್ಳಿಯ ಬಣ್ಣ ಎರಚಾಟ ಮತ್ತು ಡಿ.ಜೆ. ಕುಣಿತದ ಮಾದರಿಯೇ ಜಿಲ್ಲೆಯ ಇತರೆ ಹಳ್ಳಿಗಳಿಗೂ ಆವರಿಸಿ ಬಿಟ್ಟಿದೆ. ಗಣೇಶ ಹಬ್ಬ ಯಾವ ರೀತಿಯಾಗಿ ಅವಳಿ ನಗರದಿಂದ ಹಳ್ಳಿಗಳಿಗೂ ಕಾಲಿಟ್ಟಿತೋ ಅದೇ ಮಾದರಿಯಲ್ಲಿ ಇಲ್ಲಿನ ಹೋಳಿಹಬ್ಬದ ಆಚರಣೆಗಳು ಹಳ್ಳಿಯಲ್ಲಿನ ಜಾನಪದೀಯ ಆಚರಣೆಗಳ ಮೇಲೆ ಸವಾರಿ ಮಾಡಿವೆ. ಇದೀಗ ಹಳ್ಳಿಗಳಲ್ಲೂ ಯುವಕರುಡಿ.ಜೆ. ಕುಣಿತ, ಬಣ್ಣ ಎರಚಾಟ ಮತ್ತು ಸಾರಾಯಿಗೆ ದಾಸರಾಗಿ ಇಡೀ ದಿನ ಕುಡಿಯುತ್ತ ಕುಣಿಯುತ್ತ ಕಾಲಹರಣ ಮಾಡುತ್ತಿದ್ದಾರೆ.
ಕುಳ್ಳು ಕದಿಯುವ ತುಂಟಾಟ ಮಾಯ : ಕಾಮಣ್ಣನ ಹಬ್ಬ ಬರೀ ಸಂಭ್ರಮದ ಹಬ್ಬವಷ್ಟೇ ಅಲ್ಲ, ಹಳ್ಳಿಯ ಹುಡುಗರಿಗೆ ವಿಪರೀತ ತುಂಟಾಟಕ್ಕೆ ಒಂದು ಸದಾವಕಾಶವಾಗಿತ್ತು. ಕಾಮ ದಹನಕ್ಕೆಂದು ಚಕ್ಕಡಿಗಟ್ಟಲೇ ಕುಳ್ಳು (ಭೆರಣಿ) ಮತ್ತು ಕಟ್ಟಿಗೆ ಬೇಕು. ಇದನ್ನೇ ನೆಪ ಮಾಡಿಕೊಂಡ ತುಂಟು ಹುಡುಗರು ಮನೆಗಾಗಿ ಸಿದ್ಧಗೊಳಿಸಿದ ಕುಳ್ಳಿನ ರಾಶಿಯನ್ನೇ ರಾತ್ರಿ ಹೊತ್ತು ಕದ್ದು ತಂದು ಕಾಮಣ್ಣನ ಸುಡುವ ಸ್ಥಳಕ್ಕೆ ಹಾಕುತ್ತಿದ್ದರು. ಹಿತ್ತಲು ಬೇಲಿ ಸಡಿಲವಿದ್ದರಂತೂ ಮುಗಿಯಿತು. ಆ ಮನೆಯನ್ನು ಲೂಟಿ ಮಾಡುವುದೇ ಒಂದೇ ಬಾಕಿ ಇರುತ್ತಿತ್ತು. ಅಂತಹ ವಾತಾವರಣ ಈಗ ಉಳಿದಿಲ್ಲ. ಈಗೇನಿದ್ದರೂ ಕಾಮಣ್ಣ ಒಣಗಿದ ಟೆಂಗಿನಗರಿಯಲ್ಲಿ ಸುಟ್ಟು ಹೋಗುತ್ತಿದ್ದಾನೆ ಅಷ್ಟೇ.
ಹೋಳಿ ಪದಗಳು ಉಳಿಯಬೇಕಾದರೆ ಮತ್ತೆ ಮೂಲಸ್ವರೂಪದಲ್ಲಿಯೇ ಹೋಳಿಹಬ್ಬ ಆಚರಿಸುಂತಾಗಬೇಕು. ಸರ್ಕಾರದಿಂದ ಹೋಳಿ ವಿಶಿಷ್ಟ ಹಬ್ಬ ಆಚರಣೆಗೆ ಉತ್ತಮ ಪ್ರೋತ್ಸಾಹ ಸಿಕ್ಕಬೇಕು. ವಿಶ್ವವಿದ್ಯಾಲಯಗಳು, ಸ್ವಯಂ ಸೇವಾ ಸಂಘಟನೆಗಳು ಮತ್ತು ಹಳ್ಳಿಗರು ಒಟ್ಟಾಗಿ ಹೋಳಿ ಸಾಹಿತ್ಯ ಉಳಿಸಲು ಅದನ್ನು ಮುಂದಿನ ಪೀಳಿಗೆಗೆ ಕಳಿಸಲು ಶ್ರಮಿಸಬೇಕಿದೆ. -ಡಾ|ನಾಗರಾಜ ಎಸ್., ಜಾನಪದ ತಜ್ಞ
-ಬಸವರಾಜ ಹೊಂಗಲ್