Advertisement

ಹೋಳಿ ಹಬ್ಬ: ಬೆಲೆ ಕಳೆದುಕೊಂಡ ಸಕ್ಕರೆ ಸರ

03:35 PM Mar 13, 2017 | |

ವಾಡಿ: ಕಾಮದಹನ ಮತ್ತು ಬಣ್ಣದಾಟ ಇವು ಹೋಳಿ ಹಬ್ಬದಲ್ಲಿ ಕಂಡು  ಬರುವ ಪ್ರಮುಖ ಆಚರಣೆ. ಬಣ್ಣ ಎರಚಿ ಬೊಬ್ಬೆ ಹೊಡೆದು ದಣಿದವರ ಬಾಯಿಗೆ ಸಿಹಿ ಹಾಕಲೆಂದೇ ಸಿದ್ಧಗೊಳ್ಳುವ ಸಕ್ಕರೆ ಸರವೂ ಹೋಳಿ ಸಂಭ್ರಮದ ಭಾಗ ಎಂಬುದೇ ಇಂದಿನ ಬಹುತೇಕ ಪೀಳಿಗೆಗೆ ನೆನಪಿಲ್ಲದಂತಾಗಿದೆ. 

Advertisement

ಆಧುನಿಕ ಜಗತ್ತಿನ ಪರಿಣಾಮದಿಂದ ರಾಸಾಯಿನಿಕ ಮಿಶ್ರಣದ ತೈಲ ವರ್ಣ ಮಾರುಕಟ್ಟೆ ಆವರಿಸಿಕೊಂಡಿದ್ದು, ಯುವ ಜನರನ್ನು ಆಕರ್ಷಿಸಿದೆ. ಹೋಳಿ ಹಬ್ಬದ ಆಕರ್ಷಣೆಯಾಗಿದ್ದ ಪುಡಿ ಬಣ್ಣ ಬೇಡಿಕೆ ಕಳೆದುಕೊಂಡಿದೆ. ಮೊಟ್ಟೆ ಹೊಡೆದು, ಕಪ್ಪು ಮಸಿ ಬಳೆಯುವುದೇ ಪಡ್ಡೆ ಹುಡುಗರ ರಂಗಿನಾಟವಾಗಿರುವಾಗ, ಬಣ್ಣ ಬಣ್ಣದ ಸಕ್ಕರೆ ಸರಗಳು ಕಹಿಯಾಗಿ ಸಾಂಪ್ರದಾಯದಿಂದ ಹಿಂದೆ ಸರಿದುಕೊಂಡಿವೆ. 

ಹೋಳಿ ಹಬ್ಬದ ನಿಮಿತ್ತ ಸಂಬಂಧಿಕರು ತಮ್ಮ ಹತ್ತಿರದ ಕುಟುಂಬಸ್ಥರ ಮಕ್ಕಳ ಕೊರಳಿಗೆ ಈ ಸಕ್ಕರೆ ಸರ ಹಾಕಿ ಶುಭಾಶಯ ಕೋರುತ್ತಿದ್ದ  ಪ್ರಸಂಗಗಳು ಈಗ ವಿರಳ. ಮಾರುಕಟ್ಟೆ ಬೀದಿಗಳಲ್ಲಿ ಸಕ್ಕರೆ ಸರದ ವ್ಯಾಪಾರಿಗಳ ಸಾಲು ನೋಡುವುದು ಜಾತ್ರೆ ಅನುಭವ ನೀಡುತ್ತಿತ್ತು. ಕೊರಳಿಗೆ ಸರ ಹಾಕಿಕೊಂಡು ಸಕ್ಕರೆ ಗಂಟೆಯನ್ನು ಒಂದೊಂದಾಗಿ ಕಡಿದು ತಿನ್ನೋದರ ಮಜವೇ  ಬೇರೆಯಾಗಿರುತ್ತಿತ್ತು.

ಆದರೆ, ಈಗ ಅಂತಹ ಸಕ್ಕರೆ ಸರಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತಿಲ್ಲ. ಅಲ್ಲೊಬ್ಬ  ಇಲ್ಲೊಬ್ಬ ವ್ಯಾಪಾರಿ ಗಂಟೆ ಸರ ಮಾರಾಟಕ್ಕೆ ನಿಂತರೂ ಯಾರೂ  ಇತ್ತ ಹೊರಳಿ ನೋಡುವವರಿಲ್ಲ. ಬೇಡಿಕೆಯಿಲ್ಲದ್ದರಿಂದ ಸಕ್ಕರೆ ಸರಗಳು ಹೋಳಿ ಹಬ್ಬದಿಂದ ಸಂಪೂರ್ಣ ಮಾಯವಾಗುತ್ತಿರುವುದು ಬದಲಾದ ಸಂಪ್ರದಾಯ ಎತ್ತಿತೋರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next