Advertisement

ಕೆಂಡ ಹಿಡಿದು ಓಡಿದ ತುಮರಿಕೊಪ್ಪದ ಮಕ್ಕಳು!

10:13 AM Mar 10, 2020 | Suhan S |

ಕಲಘಟಗಿ: ತುಮರಿಕೊಪ್ಪದಲ್ಲಿ ಹೋಳಿ ಹುಣ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇಲ್ಲಿ ಕೇವಲ ಬಣ್ಣದಾಟಕ್ಕೆ ಹಬ್ಬ ಸೀಮಿತವಾಗಿಲ್ಲ. ಕಾಮದಹನವು ವಿಶಿಷ್ಟ ಆಚರಣೆ, ಸಂಪ್ರದಾಯಗಳಿಗೆ ಸಾಕ್ಷಿಯಾಗಿದ್ದು, ಸೋಮವಾರ ಅದ್ಧೂರಿಯಾಗಿ ಹಬ್ಬವನ್ನು ಆಚರಿಸಲಾಯಿತು.

Advertisement

ಹುಣ್ಣಿಮೆ ಹಿಂದಿನ ದಿನ ಗ್ರಾಮದ ಗೌಡಕಿ ಮನೆತನವಾದ ಸಂಗನಗೌಡ ತಿಪ್ಪನಗೌಡ ಪಾಟೀಲ ಎಂಬುವರು ಕಾಮಣ್ಣನ ಕುತ್ತಿಗೆ ಭಾಗದ ಪ್ರತಿಮೆ ಮಾಡಿಸಿ ಗ್ರಾಪಂ ಸನಿಹದಲ್ಲಿ ಪ್ರತಿಷ್ಠಾಪಿಸುತ್ತಾರೆ. ಇದಕ್ಕೆ ಸರಕಾರಿ ಕಾಮಣ್ಣ ಎಂದೇ ಕರೆಯುವುದು ವಾಡಿಕೆ. ಅಂದು ಸಂಜೆ 7 ಗಂಟೆ ಸುಮಾರಿಗೆ ಇವರ ಮನೆತನದಿಂದ ಕಾಮಣ್ಣನಿಗೆ ಸಕ್ಕರೆ ಮಾಲೆ, ಬಾಸಿಂಗ, ಹೋಳಿಗೆ-ಕಡುಬುಗಳ ನೈವೇದ್ಯವನ್ನು ಮೆರವಣಿಗೆ ಮುಖಾಂತರ ಕೊಂಡೊಯ್ದು ವಿಶೇಷ ಪೂಜೆ ಸಮರ್ಪಿಸಲಾಗುತ್ತದೆ. ನಂತರ ಗ್ರಾಮಸ್ಥರೆಲ್ಲರೂ ನೈವೇದ್ಯವನ್ನು ತೆಗೆದುಕೊಂಡು ಹೋಗಿ ಅರ್ಪಿಸುವ ಪದ್ಧತಿ ರೂಢಿಯಲ್ಲಿದೆ.

ಅನಾದಿ ಕಾಲದಿಂದಲೂ ಕಾಮದಹನಕ್ಕೆ ಗ್ರಾಮದಲ್ಲಿ ಕಟ್ಟಿಗೆ ಕುಳ್ಳುಗಳನ್ನು ಕಳವು ಮಾಡುವ ಪದ್ಧತಿ ರೂಢಿಯಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕ್ಷೀಣಿಸುತ್ತಾ ಬಂದಿದೆ. ಗ್ರಾಮದ ಹರಿಜನ ಸಮಾಜ ಬಾಂಧವರು ಹುಣ್ಣಿಮೆಯ ಹಿಂದಿನ ದಿನ ಮನೆ ಮನೆಗೆ ತೆರಳಿ ಕಟ್ಟಿಗೆ ಕುಳ್ಳನ್ನು ತಂದು ಕಾಮಣ್ಣನ ಅಗ್ನಿಸ್ಪರ್ಶಕ್ಕೆ ಸಜ್ಜುಗೊಳಿಸುತ್ತಾರೆ.

ವಿಶೇಷ ಆಚರಣೆ: ಹುಣ್ಣಿಮೆ ದಿನ ಕಾಮಣ್ಣನನ್ನು ಕೂರಿಸಿರುವ ಸ್ಥಳದಿಂದ ಸುಮಾರು 1500 ಮೀಟರ್‌ ಅಂತರದಿಂದ ಓಟದ ಸ್ಪರ್ಧೆ ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಗ್ರಾಮದ ಯುವಕರೆಲ್ಲರೂ ಒಂದೆಡೆ ಸೇರಿ ನಿಂತಿರುವಾಗ ಹರಿಜನಬಾಂಧವರು ಕುಳ್ಳನ್ನು ಸುಟ್ಟ ಬೆಂಕಿ ಕೆಂಡವನ್ನು ಅವರ ಮೇಲೆ ತೂರುತ್ತಾರೆ. ಆಗ ಈ ಬೆಂಕಿಯನ್ನು ಹಸಿರೆಲೆಗಳ ಸಹಾಯದಿಂದ ಕೈಯಲ್ಲಿ ಹಿಡಿದು ಓಡಿಕೊಂಡು ಪ್ರತಿಷ್ಠಾಪಿಸಿರುವ ಕಾಮಣ್ಣನಲ್ಲಿಗೆ ಬಂದು ಯಾರು ಮೊದಲು ಅಗ್ನಿ ಸ್ಪರ್ಷ ಮಾಡುವರೋ ಆ ಯುವಕನನ್ನು ಗ್ರಾಮದವರೆಲ್ಲರೂ ಮೆರವಣಿಗೆ ಮುಖಾಂತರ ಗೌರವವನ್ನು ಸಮರ್ಪಿಸಿ ಕಾಮಣ್ಣನ ತಲೆ ಮೇಲೆ ಇಟ್ಟಿರುವ ಒಂದು ಡಜನ್‌ ಬಾಳೆ ಹಣ್ಣನ್ನು ಅವನಿಗೆ ನೀಡುತ್ತಾರೆ. ಇದು ತಲೆತಲಾಂತರದಿಂದ ತುಮರಿಕೊಪ್ಪ ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿದೆ.

ಗ್ರಾಮದ ಚನ್ನಯ್ಯ ಬಸಯ್ಯ ಸಂಗೆದೇವರಕೊಪ್ಪ ಎಂಬ ಯುವಕ ಈ ವರ್ಷದ ಗೌರವಕ್ಕೆ ಪಾತ್ರನಾಗಿದ್ದಾನೆ. ಓಟದ ಸ್ಪರ್ಧೆ ನಂತರ ಕಾಮದಹನ ಜರುಗಿ ಬಣ್ಣದೋಕುಳಿ ಜರುಗುತ್ತದೆ. ಆದರೆ ಪ್ರಸ್ತುತ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಬಣ್ಣದೋಕುಳಿ ನಿಷೇಧಿಸಲಾಗಿತ್ತು.

Advertisement

ಯುವಕರನ್ನು ಸಶಕ್ತರಾಗುವಂತೆ ಹುರಿದುಂಬಿಸುವುದರ ಜೊತೆಗೆ ಪ್ರೋತ್ಸಾಹ ನೀಡಲು ಹೋಳಿ ಹುಣ್ಣಿಮೆ ಹಬ್ಬದಾಚರಣೆ ಸಾಕ್ಷಿಯಾಗಿದೆ. ನಮ್ಮ ಅಜ್ಜ ಮುತ್ತಜ್ಜನವರ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ತಾಲೂಕಿನಾದ್ಯಂತ ತಮ್ಮ ಗ್ರಾಮದ ಹೋಳಿ ಹುಣ್ಣಿಮೆ ಹಬ್ಬದಾಚರಣೆ ಹೆಸರುವಾಸಿಯಾಗಿದೆ. – ರುದ್ರಯ್ಯ ಗೊಡಿಮನಿ, ತುಮರಿಕೊಪ್ಪ ಗ್ರಾಮಸ್ಥ

­

 

ಪ್ರಭಾಕರ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next