ಗಂಗಾವತಿ: ಬಣ್ಣ ಬಣ್ಣದ ಹೋಳಿ ಹಬ್ಬ ವಿವಿಧ ಭಾಷೆ, ಜಾತಿ, ಸಂಸ್ಕೃತಿಯ ಜನರ ನಡುವೆ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ. ಗಂಗಾವತಿಯ ಕುರುಹೀನನ ಶೆಟ್ಟಿ ಸಮಾಜದಿಂದ ಗಂಗಾವತಿಯಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷ ಪ್ರತಿಷ್ಠಾಪಿಸುವ ರತಿ ಮನ್ಮಥರ (ಕಾಮ) ಹೋಳಿ ಹಬ್ಬಕ್ಕೆ 50 ವರ್ಷ ತುಂಬಿದ್ದು ಸುವರ್ಣಮಹೋತ್ಸವ ಆಚರಣೆ ಮಾಡಲಾಗುತ್ತಿದೆ.
ಗಂಗಾವತಿಯಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ರತಿಮನ್ಮಥರನ್ನು ಒಂದು ವಾರಗಳ ಕಾಮ ಪ್ರತಿಷ್ಠಾಪಿಸಿ ಕಾಮದಹನದ ನಂತರ ಅದರ ಬೆಂಕಿಯನ್ನು ನಗರದ ಪ್ರತಿಯೊಂದು ಮನೆಗೆ ತೆಗೆದುಕೊಂಡು ಹೋಗಿ ಅಡುಗೆ ಒಲೆಗೆ ಹಾಕಿದರೆ ನಿತ್ಯವೂ ಅನ್ನಕ್ಕೆ ಬರವಿಲ್ಲ ಎನ್ನುವ ನಂಬಿಕೆ ಜನತೆಯದ್ದಾಗಿದೆ. ಈ ಮೊದಲು ನಗರದ ರಾಂಪುರ ಓಣಿ., ದೇವಾಂಗ ಓಣಿ ಕಾಮ, ನೇಕಾರ ಓಣಿ ಕಾಮ (ಹಣಿಗೇರ ಮಸೀದಿ ಬೈಲು), ಗೌಳಿ ಮಹಾದೇವಪ್ಪ ಮನೆ ಹತ್ತಿರ ಬೆರಣಿ, ಜುಲೈನಗರದಲ್ಲಿ ರತಿ ಮನ್ಮಥರ(ಕಾಮ) ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ವಿಶೇಷವಾಗಿ ಕಳೆದ 50 ವರ್ಷಗಳಿಂದ ಕುರುಹೀನ ಶೆಟ್ಟಿ ಸಮಾಜದವರು ರತಿ ಮನ್ಮಥ (ಕಾಮ) ಪ್ರತಿಷ್ಠಾಪನೆಯನ್ನು ನೀಲಕಂಠೇಶ್ವರ ದೇವಾಲಯದ ಮುಂಭಾಗದಲ್ಲಿ ಮಾಡುತ್ತಿದ್ದು ಸುಮರ್ಣಮಹೋತ್ಸವ ನಿಮಿತ್ತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಹೋಳಿ ಹಬ್ಬ ಭಾರತೀಯರನ್ನು ಒಂದೆಡೆ ಸೇರಿಸುವ ಹಬ್ಬವಾಗಿದ್ದು ಗಂಗಾವತಿಯಲ್ಲಿ ಇತರೆ ಸಮಾಜಗಳಂತೆ ಕುರುಹೀನಶೆಟ್ಟಿ ಸಮಾಜದಿಂದ 50 ವರ್ಷಗಳಿಂದ ಪ್ರತಿ ವರ್ಷ ರತಮನ್ಮಥ(ಕಾಮ)ರನ್ನು ಪ್ರತಿಷ್ಠಾಪಿಸಿ ಹೋಳಿ ಹುಣ್ಣಿಮೆಯಂದು ದಹನ ಮಾಡಲಾಗುತ್ತದೆ. ಪ್ರತಿದಿನವೂ ಪೌರಣಿಕ ಸಂದರ್ಭಗಳನ್ನು ಸೃಷ್ಠಿಸಿ ಬೊಂಬೆಗಳನ್ನು ಕೂಡಿಸುವುದು ಆಕರ್ಷಣೀಯವಾಗಿದೆ. ಈ ವರ್ಷ ಸುವರ್ಣಮಹೋತ್ಸವದ ಸಂದರ್ಭದಲ್ಲಿ ಹಲವು ನೆನಪಿಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಬ್ಬಗಳು ಭಾರತೀಯತೆಯನ್ನು ತೋರಿಸುವ ವೇದಿಕೆಗಳಾಗಿದ್ದು ಮುಂದಿನ ಯುವಕರಿಗೆ ಇವುಗಳ ಪರಿಚಯವಾಗಬೇಕಿದೆ.
–ನಾಗಪ್ಪ ಸಕ್ರಪ್ಪ ಅಲ್ಟಿ ಕಾರ್ಯದರ್ಶಿ ರತಿಮನ್ಮಥ (ಕಾಮ) ಯುವಕ ಸಂಸ್ಥೆ
-ವಿಶೇಷ ವರದಿ: ಕೆ.ನಿಂಗಜ್ಜ