Advertisement
ಹಬ್ಬ ಯಾವುದೇ ಇರಲಿ ಮೋಜು, ಮಸ್ತಿ, ಸಂಭ್ರಮಕ್ಕೆ ಕೊರತೆ ಇರಬಾರದು ಅನ್ನೋದು ಎಲ್ಲರ ಅಂಬೋಣ. ಅದೇ ರೀತಿ ಹೆಚ್ಚು ಶಾಸ್ತ್ರ, ಸಂಪ್ರದಾಯ, ಮಡಿ, ಮೈಲಿಗೆಯ ಸಂಕೋಲೆ ಇರಬಾರದು ಅನ್ನೋದು ಕೂಡ ಹಲವರ ಷರತ್ತು. ಅಂಥದೊಂದು ಹಬ್ಬ ನಮ್ಮಲ್ಲಿದೆಯಾ? ಇದೆ! ಅದೇ ಹೋಳಿ ಹಬ್ಬ. ಉತ್ತರದಿಂದ ದಕ್ಷಿಣಕ್ಕೆ ವ್ಯಾಪಕವಾಗಿ ಪಸರಿಸಿದ, ಎಲ್ಲರ ಮನಸೂರೆಗೊಳಿಸುವ ರಂಗುರಂಗಿನ ಓಕುಳಿ ಹಬ್ಬ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಜಗತ್ತಿನ ಏಕೈಕ ದೇಶ ನಮ್ಮದು. ಹಾಗೆಯೇ ಹಬ್ಬಗಳ ಆಚರಣೆಯಲ್ಲಿ ಕೂಡ ಉತ್ತರದಿಂದ ದಕ್ಷಿಣದವರೆಗೂ ಹೋಳಿ ಹಬ್ಬವನ್ನು ವಿಧವಿಧವಾಗಿ ಆಚರಿಸಲಾಗುತ್ತದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಹೋಳಿ ಹಬ್ಬದ ಆಚರಣೆಯ ಧಾಂ ಧೂಂ ತುಸು ಕಮ್ಮಿ. ಆದರೆ ಉತ್ತರ ಕರ್ನಾಟಕದಲ್ಲಿ ಮಾತ್ರ, ಹೋಳಿ ಹುಣ್ಣಿಮೆಯಿಂದ ರಂಗಪಂಚಮಿಯವರೆಗೆ ಐದು ದಿನಗಳ ಕಾಲ ಭರ್ಜರಿ ಸಂಭ್ರಮ, ಸಡಗರ, ಗೌಜಿ, ಗದ್ದಲ ತುಂಬಿದ ಭರಪೂರ ಆಚರಣೆ ನಡೆಯುತ್ತದೆ.
Related Articles
Advertisement
ಹೀಗೆ ಸಂಗ್ರಹಿಸಿದ ವಸ್ತುಗಳಿಂದ ಓಣಿಯ ಯಾವುದಾದರೂ ಒಂದು ವೃತ್ತದಲ್ಲಿ ಗುಡ್ಡೆ ಹಾಕಿ ಕಾಮಣ್ಣನ (ಮನ್ಮಥನ) ಪ್ರತಿಕೃತಿ ನಿರ್ಮಿಸಿ ಹೋಳಿಕಾ ದಹನಕ್ಕೆ ಅಣಿಗೊಳಿಸುತ್ತಾರೆ. ಕೆಲವು ಕಡೆ ಹುಣ್ಣಿಮೆಯ ದಿನ, ಇನ್ನು ಕೆಲವು ಕಡೆ ರಂಗ ಪಂಚಮಿಯ ದಿನ ಬೆಳ್ಳಂ ಬೆಳಗ್ಗೆಯೇ ಹಳೆ ಬಟ್ಟೆ ಧರಿಸಿ ಕೈಯಲ್ಲಿ ಬಣ್ಣ ಹಿಡಿದು ರಸ್ತೆಗಿಳಿಯುತ್ತಾರೆ. ಓಕುಳಿಗೆ ಒಣ ಬಣ್ಣದ ಪುಡಿ, ನೀರಿನಲ್ಲಿ ಕಲಿಸಿ ಎರಚುವ ಬಣ್ಣ, ವಾಟರ್ ಬಲೂನ್, ವಾಟರ್ ಗನ್ ಹೀಗೆ ಅವರವರ ಆಸಕ್ತಿಯಂತೆ ಉಪಯೋಗಿಸುತ್ತಾರೆ. ಕುಟುಂಬದವರು, ಗೆಳೆಯರು, ಸಹಪಾಠಿಗಳಿಗೆ ಬಣ್ಣ ಎರಚಿ ಸಂಭ್ರಮಿಸುತ್ತಾರೆ. ಅಕ್ಕಪಕ್ಕದ ಕಾಲೋನಿಗಳಿಗೂ ತೆರಳಿ ಅಲ್ಲಿರುವ ಪರಿಚಿತರಿಗೂ ಬಣ್ಣ ಎರಚಿ, ಹೋಳಿಯ ಶುಭಾಷಯ ವಿನಿಮಯ ಮಾಡಿಕೊಂಡು ಹರ್ಷಿಸುತ್ತಾರೆ. ಬಿರುಬೇಸಿಗೆಯ ಧಗೆಯನ್ನೂ ಲೆಕ್ಕಿಸದೆ ಎಲ್ಲರೂ ಬಣ್ಣದೋಕುಳಿಯ ಸಂಭ್ರಮದಲ್ಲಿ ಮುಳುಗೇಳುತ್ತಾರೆ.
ಕೆಟ್ಟದ್ದನ್ನು ಸುಡುವುದು ಎಂದರ್ಥ…
ಸೌಹಾರ್ದತೆ, ಸಾಮರಸ್ಯಕ್ಕೆ ಮತ್ತೂಂದು ಹೆಸರೇ ಈ ಹೋಳಿ ಹಬ್ಬ ಎಂದರೆ ತಪ್ಪಾಗಲಾರದು. ಇದೊಂದೇ ಹಬ್ಬ ಎನಿಸುತ್ತದೆ ಜಾತಿ, ಮತ, ಧರ್ಮದ ಕಟ್ಟುಪಾಡುಗಳಿಲ್ಲದೆ ಪ್ರತಿಯೊಬ್ಬರೂ ಮನಸಾರೆ ಸ್ವಇಚ್ಛೆಯಿಂದ ಪರಸ್ಪರ ಬಣ್ಣ ಎರಚಿ ಉಲ್ಲಾಸ ಪಡುವುದು. ದಿನವಿಡೀ ಬಣ್ಣದೋಕುಳಿಯಾಡಿ ಇನ್ನೇನು ಸೂರ್ಯ ಮುಳುಗುವ ಸಮಯದಲ್ಲಿ ಈ ಮೊದಲೇ ನಿರ್ಮಿಸಿದ ಕಾಮಣ್ಣನ ಪ್ರತಿಕೃತಿಗೆ ಅಗ್ನಿ ಸ್ಪರ್ಶ ಮಾಡುವುದರ ಮೂಲಕ ಓಕುಳಿಯ ಆಚರಣೆಗೆ ವಿರಾಮ ನೀಡಲಾಗುತ್ತದೆ. ಕಾಮಣ್ಣನ ಪ್ರತಿಕೃತಿ ಸುಡುವ(ಕಾಮದಹನ) ಸಂದರ್ಭದಲ್ಲಿ ಜೋರಾಗಿ ಬಾಯಿ ಬಡಿದುಕೊಳ್ಳುತ್ತಾ, ವಿಚಿತ್ರ ಶಬ್ಧ ಮಾಡುತ್ತಾ ಕಾಮಣ್ಣನಿಗೆ ಅಂತಿಮ ನಮನ ಸಲ್ಲಿಸಿ, ವಿದಾಯ ಹೇಳುವ ರೂಢಿ ಇದೆ. ಕೆಲವು ಕಡೆಗಳಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಹೋಳಿಗೆ(ಒಬ್ಬಟ್ಟು) ನೈವೇದ್ಯ ಅರ್ಪಿಸಿ ಮಂಗಳಾರತಿ ಮಾಡಿ, ನಂತರ ಪ್ರತಿಕೃತಿಗೆ ಅಗ್ನಿ ಸ್ಪರ್ಶ ಮಾಡುವ ಪದ್ಧತಿ ಕೂಡ ಇದೆ. ಹೀಗೆ ಕುಳ್ಳು, ಕಟ್ಟಿಗೆ ಸುಡುವುದು ಎಂದರೆ ಅರಿಷಡ್ವರ್ಗಗಳನ್ನು ಸುಟ್ಟು ಪರಿಶುದ್ಧವಾಗುವುದು ಎಂಬುದು ಈ ಆಚರಣೆಯ ಹಿಂದಿನ ನಂಬಿಕೆ.
ಬಾಗಲಕೋಟೆ, ಕಲಬುರಗಿ, ಬೀದರ್ ಕಡೆಗಳಲ್ಲಿ ಮನೆಯಲ್ಲಿರುವ ಪುಟ್ಟ ಮಗುವಿಗೆ ಹೊಸ ಬಿಳಿ ಬಟ್ಟೆ ಧರಿಸಿ ಶೇಂಗಾ, ಬಾದಾಮಿ, ಗೋಡಂಬಿ, ಏಲಕ್ಕಿ, ಚಾಕೊಲೇಟ…, ಬಿಸ್ಕತ್ತುಗಳ ಹಾರ ಹಾಕಿ, ಆರತಿ ಮಾಡಿ ಗುಲಾಲ್(ಗುಲಾಬಿ ಬಣ್ಣ) ಹಚ್ಚುತ್ತಾರೆ. ಒಟ್ಟಾರೆ ಮಕ್ಕಳು, ಯುವಕರು, ವೃದ್ಧರು ಯಾರೊಬ್ಬರೂ ಈ ಹಬ್ಬದಿಂದ ಹೊರತಾಗಬಾರದು. ಪ್ರತಿಯೊಬ್ಬರೂ ಹಬ್ಬದ ಸವಿಯನ್ನು ಸವಿಯಬೇಕು, ಉಲ್ಲಾಸ ಪಡಬೇಕು ಎನ್ನುವುದು ಇದರ ಉದ್ದೇಶವಾಗಿದೆ. ಹೀಗೆ ಹೋಳಿ ಹಬ್ಬವು ಒಂದೊಂದು ಕಡೆಯಲ್ಲಿ ಒಂದೊಂದು ಬಗೆಯಾಗಿ ದೇಶಾದ್ಯಂತ ಜಾತಿ, ಮತ, ಧರ್ಮದ ಸಂಕೋಲೆ ಬೇಧಿಸಿ, ಮೇಲು ಕೀಳು ಎಂಬ ಭಾವವಿಲ್ಲದೆ ಪ್ರತಿಯೊಬ್ಬರೂ ಆಚರಿಸುವ ಹಬ್ಬವೆಂದು ಪ್ರಸಿದ್ಧಿ ಪಡೆದಿದೆ. ಹೋಳಿಯ ನೆಪದಲ್ಲಿ ಬಣ್ಣಗಳ ಬೆಡಗು ಎಲ್ಲರ ಮನವನ್ನೂ ತುಂಬಿಕೊಳ್ಳಲಿ. ತನು-ಮನದಲ್ಲಿರುವ ಕಪ್ಪು, ಕತ್ತಲೆ, ಕಲ್ಮಶಗಳು ತೊಲಗಲಿ. ಪ್ರತಿಯೊಬ್ಬರ ಬದುಕೂ ವರ್ಣಮಯವಾಗಿರಲಿ. ಸಂತಸ, ಸಡಗರ, ಸಂಭ್ರಮ ಉಕ್ಕಿ ಹರಿಯಲಿ.
ಪೌರಾಣಿಕ ಹಿನ್ನೆಲೆಯ ಮೂರು ಕಥೆಗಳು :
ಶಿವ- ಮನ್ಮಥ
ತಪೋಮಗ್ನನಾಗಿದ್ದ ಪರಶಿವನ ಮೇಲೆ ಮನ್ಮಥನು ಹೂಬಾಣಗಳನ್ನು ಬಿಟ್ಟು ಅವನ ಏಕಾಗ್ರತೆಯನ್ನು ಕೆಡಿಸುತ್ತಾನೆ. ಇದರಿಂದ ಕ್ರೋಧಗೊಂಡ ಪರಶಿವ, ತನ್ನ ಮೂರನೇ ಕಣ್ಣು ತೆರೆದು ಕಾಮನನ್ನು ದಹಿಸುತ್ತಾನೆ. ಹೋಳಿ ಹಬ್ಬದ ಕಾಮದಹನಕ್ಕೆ ಇರುವ ಪೌರಾಣಿಕ ಹಿನ್ನೆಲೆ ಇದು.
ಪ್ರಹ್ಲಾದ ಮತ್ತು ಹೋಳಿಕಾ
ತನ್ನ ಮಗ ಪ್ರಹ್ಲಾದ ವಿಷ್ಣುವಿನ ಭಕ್ತನಾಗಿರುವುದನ್ನು ಸಹಿಸದ ಹಿರಣ್ಯಕಶಿಪು, ಮಗನನ್ನು ಕೊಲ್ಲಲು ನಿರ್ಧರಿಸುತ್ತಾನೆ. ಅದಕ್ಕೆ ತನ್ನ ಸೋದರಿ ಹೋಳಿಕಾಳ ನೆರವು ಪಡೆಯುತ್ತಾನೆ. ಬೆಂಕಿಯಲ್ಲಿ ಸುಡದಿರುವಂಥ ವಸ್ತ್ರವೊಂದು ವರದ ರೂಪದಲ್ಲಿ ಹೋಳಿಕಾಗೆ ಸಿಕ್ಕಿರುತ್ತದೆ. ಆಕೆ, ಆ ವಸ್ತ್ರ ಧರಿಸಿ, ಬಾಲಕ ಪ್ರಹ್ಲಾದನನ್ನು ಹೊತ್ತುಕೊಂಡು ಅಗ್ನಿಕುಂಡ ಪ್ರವೇಶಿಸುತ್ತಾಳೆ. ಭಗವಂತನ ಕೃಪೆಯಿಂದ ಪವಾಡ ನಡೆದು ಹೋಳಿಕಾಳ ವಸ್ತ್ರ ಹಾರಿಹೋಗುತ್ತದೆ. ಆಕೆಯ ದಹನವಾಗಿ, ಪ್ರಹ್ಲಾದ ಕೂದಲೂ ಕೊಂಕದಂತೆ ಉಳಿಯುತ್ತಾನೆ. ಇದರಿಂದ ಮತ್ತಷ್ಟು ಕ್ರೋಧಗೊಂಡ ಹಿರಣ್ಯಕಶಿಪುವನ್ನು ಸಂತೈಸಲು ಪ್ರಹ್ಲಾದನು, ಫಾಲ್ಗುಣ ಮಾಸದ ಪೌರ್ಣಮಿಯಯಂದು ಹೋಳಿಕಾ ದಹನ ಆಚರಿಸುವ ಮೂಲಕ ಹೋಳಿಕಾಳನ್ನು ಸ್ಮರಿಸುವುದಾಗಿ ಪರಮಾತ್ಮನಿಂದ ವರ ಪಡೆಯುತ್ತಾನೆ.
ರಾಧೆ- ಕೃಷ್ಣ
ಶ್ರೀಕೃಷ್ಣ ಮಗುವಾಗಿದ್ದಾಗ ರಾಕ್ಷಸಿ ಪೂತನಿಯ ಸ್ತನ್ಯಪಾನ ಮಾಡಿದ ಪರಿಣಾಮವಾಗಿ ಅವನ ತ್ವಚೆ ನೀಲವರ್ಣಕ್ಕೆ ಹೊರಳುತ್ತದೆ. ತನ್ನನ್ನು ಅಪಾರವಾಗಿ ಪ್ರೇಮಿಸುವ ರಾಧೆ, ಬಣ್ಣದಲ್ಲಿ ಮಾತ್ರ ತನ್ನನ್ನು ಹೋಲುತ್ತಿಲ್ಲ ಎಂದೆನಿಸಿದಾಗ ಕೃಷ್ಣ, ಫಲ್ಗುಣ ಮಾಸದ ಪೌರ್ಣಮಿಯಂದು ಆಕೆಗೆ ನೀಲಿ ಬಣ್ಣ ಹಚ್ಚಿ ಸಂತೃಪ್ತನಾಗುತ್ತಾನೆ. ಮುಂದೆ ಇದರ ನೆನಪಿಗಾಗಿ ಪ್ರತಿವರ್ಷ ಆ ದಿನ ಬಣ್ಣದೋಕುಳಿ ಆಡಿ ಸಂಭ್ರಮಿಸುವ ಪದ್ಧತಿ ಆರಂಭವಾಯಿತಂತೆ!
-ಮೇಘನಾ ಕಾನೇಟ್ಕರ್