ಹುಬ್ಬಳ್ಳಿ: ಮಹಾನಗರದಲ್ಲಿ ಹೋಳಿ ಹಬ್ಬವನ್ನು ಮಾ. 18ರಿಂದ 22ರವರೆಗೆ ಆಚರಿಸಲಾಗುತ್ತಿದ್ದು, ಧಾರವಾಡದಲ್ಲಿ 19ರಂದು ಹಾಗೂ ಹುಬ್ಬಳ್ಳಿಯಲ್ಲಿ 22ರಂದು ರಂಗ ಪಂಚಮಿ ನಡೆಯಲಿದೆ. ಈ ಸಂದರ್ಭದಲ್ಲಿ ಎಲ್ಲೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಲಾಭೂ ರಾಮ ಹೇಳಿದರು.
ಇಲ್ಲಿನ ಉಪನಗರ ಠಾಣೆ ಕಟ್ಟಡದ ಕ್ಯಾಂಪ್ ಆಫೀಸ್‌ನಲ್ಲಿ ಹೋಳಿ ಹಬ್ಬದ ನಿಮಿತ್ತ ಹು-ಧಾ ಪೊಲೀಸ್ ಕಮೀಷನರೇಟ್ ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಶಾಂತಿ ಸೌಹಾರ್ದತೆ ಸಭೆಯಲ್ಲಿ ಅವರು ಮಾತನಾಡಿದರು.
ಹೋಳಿ ಹಬ್ಬದ ಅಂಗವಾಗಿ ಮಹೇಶ ಟೆಂಗಿನಕಾಯಿ ಮಾ.20ರಂದು ಹುಬ್ಬಳ್ಳಿ ಜಗ್ಗಲಗಿ ಹಬ್ಬ ಆಯೋಜಿಸಿದ್ದು, ಇದು ಮೂರು ಸಾವಿರ ಮಠದಿಂದ ಆರಂಭವಾಗಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಮರಳಿ ಶ್ರೀಮಠಕ್ಕೆ ಆಗಮಿಸಲಿದೆ. ಎಲ್ಲರೂ ಒಗ್ಗೂಡಿಕೊಂಡು ಶಾಂತಿ-ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು. ರತಿ-ಕಾಮಣ್ಣ ಮೆರವಣಿಗೆ ವೇಳೆ ಡಿಜೆ ಹಾಗೂ ಸೌಂಡ್ ಸಿಸ್ಟಮ್ ಬಳಸುವಂತಿಲ್ಲ. ನಿಗದಿಪಡಿಸಿದ ಮಾರ್ಗದಲ್ಲೇ ಆದಷ್ಟು ಬೇಗ ಮೆರವಣಿಗೆ ಮುಗಿಸಬೇಕು. ಯಾರ ಮೇಲೂ ಒತ್ತಾಯ ಪೂರ್ವಕವಾಗಿ ಬಣ್ಣ ಹಚ್ಚುವುದು, ಎರಚುವುದು ಮಾಡಬಾರದು. ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು ಎಂದರು. ಪಾಲಿಕೆಯವರು ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು, ಪ್ರಮುಖ ಪ್ರದೇಶಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಲವರು, ಹಬ್ಬದ ವೇಳೆ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು. ಸರಿಯಾಗಿ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಹೇಳಿದರು. ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ, ಇಸ್ಲಾಂ ಧರ್ಮಗುರು ತಾಜುದ್ದೀನ ಖಾದ್ರಿ, ಕ್ರೈಸ್ತ ಧರ್ಮಗುರು, ಸಿಖ್ ಧರ್ಮಗುರು, ಅಂಜುಮನ್-ಏ-ಇಸ್ಲಾಂ ಸಂಸ್ಥೆ ಅಧ್ಯಕ್ಷ ಮೊಹಮ್ಮದ ಯುಸೂಫ ಸವಣೂರ, ಅಲ್ತಾಫ ಹಳ್ಳೂರ, ಬಿಜೆಪಿ ಮುಖಂಡ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರು, ಹಿಂದೂ -ಮುಸ್ಲಿಂ ಸಮಾಜದ ಮುಖಂಡರು ಮೊದಲಾದವರಿದ್ದರು.