ಲಕ್ನೋ : ಹೋಳಿ ಹಬ್ಬವನ್ನು ಎಲ್ಲರೂ ಗೌರವಿಸಬೇಕು, ಏಕೆಂದರೆ ಅದು ವರ್ಷಕ್ಕೊಮ್ಮೆ ಬರುತ್ತದೆ; ನಮಾಜನ್ನು ವರ್ಷದಲ್ಲಿ ಹಲವು ಬಾರಿ ಕೈಗೊಳ್ಳಲಾಗುತ್ತದೆ’ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವಾದ ಸೃಷ್ಟಿಸಿದ್ದಾರೆ.
ಹೋಳಿ ಹಬ್ಬದ ಪ್ರಯುಕ್ತ ನಮಾಜ್ ಸಮಯವನ್ನು ಬದಲಾಯಿಸಲಾಗಿರುವುದನ್ನು ಪ್ರಶಂಸಿಸಿರುವ ಆದಿತ್ಯನಾಥ್, ಈ ವಿವಾದಾತ್ಮಕ ಹೇಳಿಕೆಯನ್ನು ಫೂಲ್‌ಪುರ ಅಸೆಂಬ್ಲಿ ಉಪ ಚುನಾವಣೆ ಸಂಬಂಧವಾಗಿ ನಡೆದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ನೀಡಿದರು. ಫೂಲ್‌ಪುರ ಉಪಚುನಾವಣೆ ಇದೇ ಮಾರ್ಚ್11ರಂದು ನಡೆಯಲಿದೆ.
ಹೋಳಿ ಪ್ರಯುಕ್ತ ಇಮಾಮ್ ಎ ಈದ್ಗಾ ಮೌಲಾನಾ ಖಲೀದ್ ರಶೀದ್ ಫಿರಂಗಿ ಮಾಹ್ಲಿ ಅವರು ವಿವಿಧ ಮಸೀದಿಗಳ ಇಮಾಮರಿಗೆ, ವಿಶೇಷವಾಗಿ ಕೋಮು ಸೂಕ್ಷ್ಮ ಮಸೀದಿಗಳ ಇಮಾಮಗೆ, ಶುಕ್ರವಾರದ ಪ್ರಾರ್ಥನೆಯನ್ನು ಅರ್ಧಗಂಟೆಯಿಂದ ಒಂದು ಗಂಟೆಯ ವರೆಗೆ ಮುಂದಕ್ಕೆ ಹಾಕುವಂತೆ ಕೋರಿ ಕೋಮು ಸೌಹಾರ್ದ ಕಾಪಿಡುವ ಸಂದೇಶವನ್ನು ನೀಡಿದ್ದರು.
ಹಿಂದೆಲ್ಲ ಹೋಳಿಯ ಸಂದರ್ಭದಲ್ಲಿ ನಮಾಜ್ ಸಮಯದಲ್ಲಿ ಮಸೀದಿಗೆ ಹೋಗುತ್ತಿದ್ದವರ ಮೇಲೆ ಬಣ್ಣ ಎರಚುತ್ತಿದ್ದರು. ಇದರಿಂದ ಕೋಮು ಸಂಘರ್ಷ ನ್ಪೋಟಿಸುತ್ತಿತ್ತು. ಈಗ ಅದನ್ನು ತಪ್ಪಿಸಲು ಮಿಶ್ರ ಜನಸಂಖ್ಯೆ ಇರುವ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿನ ಮಸೀದಿಗಳಲ್ಲಿ ನಮಾಜ್ ಸಮಯವನ್ನು ಬದಲಾಯಿಸಲಾಗುತ್ತಿದೆ.
ಆಸೀಫ್ ಮಸೀದಿಯಲ್ಲಿ ನಮಾಜ್ ಸಮಯ ಬದಲಾಯಿಸುವಂತೆ ಶಿಯಾ ಮತ ಪಂಡಿತ ಮೌಲಾನಾ ಕಲ್‌ಬೇ ಜವ್ವಾದ್ ಅವರು ಸೂಚಿಸಿದ್ದರು.