Advertisement
ಮಾ. 17ರಿಂದ ಮಾ. 21ರವರೆಗೆ ಹೋಳಿ ಹುಣ್ಣಿಮೆ ಆಚರಣೆಯನ್ನು ಕುಡುಬಿ ಜನಾಂಗದವರು ಶ್ರದ್ಧಾ ಭಕ್ತಿ ಪೂರ್ವಕವಾಗಿ ಉಡುಪಿ ಜಿಲ್ಲೆಯಾದ್ಯಂತ ಆಚರಿಸುತ್ತಾರೆ. ಅದಕ್ಕೂ ಮೊದಲು ಮಾಘ ಮಾಸದ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ 15 ದಿನಗಳ ಕಾಲ ಗೋವಾದಿಂದ ಉತ್ಸವ ಮೂರ್ತಿಯೊಂದಿಗೆ 5 ಮಂದಿಯ ತಂಡ ಉಡುಪಿಗೆ ಆಗಮಿಸುತ್ತದೆ.
ಸಿಂಗರಿಸಿದ ಮಲ್ಲಿಕಾರ್ಜುನ ಮತ್ತು ಅಮ್ಮನವರ ಮೂರ್ತಿಯನ್ನು ಉತ್ಸವ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ತಾಳ, ಡಮರು ನಿನಾದದೊಂದಿಗೆ ಕಾಲ್ನಡಿಗೆಯಲ್ಲಿ ಇಲ್ಲಿರುವ ಬಹುತೇಕ ಕುಡುಬಿ ಜನರ ಮನೆಗಳಿಗೆ ಬರುತ್ತಾರೆ. ಅಲ್ಲಿ ಪೂಜೆ ನಡೆದು, ಅಕ್ಕಿ, ಕಾಯಿ, ದವಸ ಧಾನ್ಯಗಳನ್ನು ಪಡೆದು, ಪ್ರಸಾದ ನೀಡಿ ಹರಸುತ್ತಾರೆ. ಮಧ್ಯಾಹ್ನ ಹಾಗೂ ಸಂಜೆ ವಿಶೇಷ ಪೂಜೆ ಇರುತ್ತದೆ. ಆ ವೇಳೆ ದೇವರು ಯಾರ ಮನೆಯಲ್ಲಿ ಇರುತ್ತಾರೋ ಆ ಮನೆಯ ಯಜಮಾನನೇ ದೇವರಿಗೆ ಪೂಜೆ ನೆರವೇರಿಸುತ್ತಾರೆ. ಪ್ರತಿ ಕುಡುಬಿ ಕುಟುಂಬಸ್ಥರು ಕೂಡ ದೇವರನ್ನು ಸಾಂಪ್ರದಾಯಿಕ ಪದ್ಧªತಿಯಂತೆ ಆಮಂತ್ರಿಸಬೇಕು. ಇನ್ನೊಂದು ಮನೆಗೆ ತೆರಳುವಾಗ ಆ ಮನೆಯವರೆಗೆ ತೆರಳಿ ಬೀಳ್ಕೊಡುವ ಕ್ರಮವಿದೆ. ಈಗ ಹುಣ್ಣಿಮೆಗೆ ಆಗಮಿಸಿರುವ ಇವರು ಮುಂದಿನ ಅಮಾವಾಸ್ಯೆಗೆ ಮುನ್ನ ಮೂಲ ನೆಲೆ ಗೋವಾವನ್ನು ಸೇರಿಕೊಳ್ಳುತ್ತಾರೆ ಎನ್ನುವ ಪ್ರತೀತಿಯಿದೆ.
Related Articles
16ನೇ ಶತಮಾನದಲ್ಲಿ ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆಯಿದ್ದು, ಅವರ ಮತಾಂತರ, ದೌರ್ಜನ್ಯಕ್ಕೆ ಹೆದರಿ, ಧರ್ಮ ರಕ್ಷಣೆಯ ಸಲುವಾಗಿ ಅಲ್ಲಿದ್ದ ಕುಡುಬಿ ಜನರು ಕರಾವಳಿಯ ಉಡುಪಿ ಜಿಲ್ಲೆಗೆ ವಲಸೆ ಬರುತ್ತಾರೆ. ಇಲ್ಲಿರುವ ಕುಡುಬಿ ಜನರನ್ನು ಕಾಣಲು ವರ್ಷಕ್ಕೊಮ್ಮೆ ಗೋವಾದಿಂದ ದೇವರೇ ಇಲ್ಲಿಗೆ ಬಂದು ಭಕ್ತರ ಮೊರೆಯನ್ನು ಆಲಿಸುತ್ತಾರೆ ಎನ್ನುವ ಮಾತಿದೆ. ಉಡುಪಿ ಜಿಲ್ಲೆಯ ಕೊಕ್ಕರ್ಣೆ, ಬೆಳ್ವೆ, ಅಲಾºಡಿ, ಗೋಳಿಯಂಗಡಿ, ಶೇಡಿಮನೆ, ಬೇಳಂಜೆ ನಾಲ್ಕೂರು, ನಂಚಾರು ಸೇರಿದಂತೆ ಹಲವೆಡೆ ಒಟ್ಟು 3,600 ಕ್ಕೂ ಅಧಿಕ ಮಂದಿ ಕುಡುಬಿ ಜನರಿದ್ದಾರೆ.
Advertisement
ವಿಶೇಷ ಮಹತ್ವ ಈ ಆಚರಣೆ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆ ನಮ್ಮಲ್ಲಿ ವಿಶೇಷ ಮಹತ್ವವಿದೆ. 15 ದಿನಗಳ ಕಾಲ ಇಲ್ಲಿರುವ ದೇವರು ದಿನಕ್ಕೆ ಸುಮಾರು 15 ರಿಂದ 20 ಮನೆಗಳಿಗೆ ತೆರಳಿ ಭಕ್ತರ ಸೇವೆಯನ್ನು ಸ್ವೀಕರಿಸುತ್ತಾರೆ. ಧರ್ಮ ರಕ್ಷಣೆಯ ಸಲುವಾಗಿ ಈ ಆಚರಣೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ.
– ನಾರಾಯಣ ನಾಯ್ಕ, ಗೋಳಿಯಂಗಡಿ