ಬಾಗಲಕೋಟೆ: ನಗರದ ಕಾಲೇಜು ರಸ್ತೆಯಲ್ಲಿ ಬುಧವಾರ ನಡೆದ ಬಣ್ಣದಾಟ ಜಲಯುದ್ಧದಂತೆ ಕಂಡು ಬಂತು. ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಬಣ್ಣ ತುಂಬಿಕೊಂಡು ಬಂದ ಸಾವಿರಾರು ಜನರು ಪರಸ್ಪರ ಬಣ್ಣ ಎರಚುವ ಮೂಲಕ ರಂಗದೋಕುಳಿಗೆ ಕಳೆ ತಂದರು. ಈ ಸಂದರ್ಭ ಬಣ್ಣದ ಮಳೆ ಸುರಿಯಿತೇನೋ ಎಂಬಂತೆ ಭಾಸವಾಯಿತು.
ಯುವಕರ ಕೇಕೆ, ಶಿಳ್ಳೆ ಹಾಕುತ್ತ ಹಲಗೆ ಬಾರಿಸುತ್ತ ಹೊಯ್ಕೊಳ್ಳುವ ಸಂಭ್ರಮ ಇಮ್ಮಡಿಗೊಂಡಿತ್ತು. ಬಣ್ಣದೋಕುಳಿಯ ಎರಡನೇ ದಿನದ ಸರದಿ ಜೈನಪೇಟೆ, ಕೌಲಪೇಟೆ, ಹಳೇಪೇಟೆ, ವೆಂಕಟಪೇಟೆ ನಾಗರಿಕರದ್ದಾಗಿತ್ತು. ಕೌಲಪೇಟೆಯಿಂದ ಚಕ್ಕಡಿ-ಹತ್ತಾರು ಟ್ರ್ಯಾಕ್ಟರ್‌ಗಳಿದ್ದ ಒಂದು ತಂಡ, ಇನ್ನೊಂದು ಕಡೆಯಿಂದ ವೆಂಕಟಪೇಟೆಯಿಂದ ಅಷ್ಟೇ ಪ್ರಮಾಣದ ಚಕ್ಕಡಿ-ಟ್ರ್ಯಾಕ್ಟರ್ ಹೊಂದಿದ್ದ ಮತ್ತೂಂದು ತಂಡ ಬಸವೇಶ್ವರ ಕಾಲೇಜು ರಸ್ತೆಯಲ್ಲಿ ಮುಖಾಮುಖೀಯಾಗಿ ಬಣ್ಣದ ಕಾಳಗ ಶುರು ಮಾಡಿದವು. ಈ ಸಂದರ್ಭದಲ್ಲಿ ಇಡೀ ಪ್ರದೇಶ ರಂಗೇರಿತ್ತು. ಇದರ ಮಧ್ಯೆಯೇ ಕುಣಿದು ಕುಪ್ಪಳಿಸುವ ಯುವಕರ ತಂಡಗಳು ಸಾಲು ಸಾಲು ನಿಂತಿರುವ ಬಣ್ಣದ ಬ್ಯಾರಲ್‌ಗಳಿಗೆ ಪ್ರಮುಖ ಗುರಿಯಾದವು. ರಸ್ತೆಯುದ್ಧಕ್ಕೂ ಬಣ್ಣದ ಸುರಿಮಳೆ ಸುರಿಯಿತು.
ಬೆಳಗ್ಗೆಯಿಂದಲೇ ನಗರದ ವಿವಿಧ ಬಡಾವಣೆ, ಗಲ್ಲಿಗಳಲ್ಲಿ ಹಲಗೆ ಸದ್ದು ಕೇಳಿ ಬಂತು. ಅಲ್ಲಲ್ಲಿ ಬೈಕ್‌ಗಳಲ್ಲಿ ಬಂದ ಯುವಕರು ಬಣ್ಣ ಎರಚುತ್ತಿರುವ ದೃಶ್ಯ ಕಂಡು ಬಂತು. ಮಧ್ಯಾಹ್ನದ ನಂತರ ವೆಂಕಟಪೇಟೆ ಯುವಕರು, ಹಳಪೇಟೆ, ಜೈನಪೇಟೆ ಯುವಕರು ಟೇಕಿನಮಠ ಮುಖಾಂತರ ಕಾಲೇಜು ರಸ್ತೆಯಲ್ಲಿ ಎದುರಾದಾಗ ಓಕುಳಿಯಾಡಿದರು.
ರಸ್ತೆ ಇಕ್ಕೆಲಗಳಲ್ಲಿ ಬಕೇಟ್, ಬ್ಯಾರಲ್‌ಗಳಲ್ಲಿ ತುಂಬಿಟ್ಟಿದ್ದ ಬಣ್ಣವನ್ನು ಮಕ್ಕಳು ಪಿಚಕಾರಿಯಲ್ಲಿ ತುಂಬಿಕೊಂಡು ಹೋಗುವವರಿಗೆ ಎರಚುತ್ತಿರುವ ದೃಶ್ಯ ಕಂಡು ಬಂತು. ಕೆಲ ಮಕ್ಕಳು ಮಕ್ಕಳು ಬಣ್ಣದ ನೀರಲ್ಲಿ ಮಿಂದೆದ್ದರು. ಮಹಿಳೆಯರು ಸಹ ಹೋಳಿಯಲ್ಲಿ ಸಂಭ್ರಮದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.
ಕಾಲೇಜು ರಸ್ತೆಯ ಇಕ್ಕೆಲಗಳಲ್ಲಿ ಓಕುಳಿ ನೋಡಲೆಂದೇ ಬಂದ ಸಹಸ್ರಾರು ಸಂಖ್ಯೆಯ ಮಹಿಳೆಯರು ಬಣ್ಣ ಎರಚುವವರನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು.