Advertisement

ಹೋಳಿ ಶಾಂತಿಯುತ ಆಚರಣೆಗೆ ಕರೆ

05:29 PM Mar 02, 2018 | |

ಯಾದಗಿರಿ: ಈಗಾಗಲೇ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದು, ಈ ವೇಳೆ ವಿದ್ಯಾರ್ಥಿಗಳ ಮೇಲೆ ಬಣ್ಣ ಎರೆಚುವುದು ಕಂಡು ಬಂದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ ತಿಳಿಸಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಹೋಳಿ ಹಬ್ಬ ಆಚರಣೆಯ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾ. 2ರಂದು ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಶಾಂತಿಯುತವಾಗಿ ಹೋಳಿ ಹಬ್ಬ ಆಚರಿಸಬೇಕು. ಅಲ್ಲದೆ ಅಂದು ಬೆಳಗ್ಗೆ 7:00 ಗಂಟೆಯಿಂದ ಬಣ್ಣದ ಆಟ ಪ್ರಾರಂಭಿಸಿ ಮಧ್ಯಾಹ್ನ 1:00 ಗಂಟೆವರೆಗೆ ಎಲ್ಲಾ ಕಡೆಗೂ ಬಣ್ಣ ಆಡುವುದು ಮುಗಿಸಬೇಕು.

ಡಿಜೆ ಧ್ವನಿವರ್ಧಕಗಳನ್ನು ಬಳಸುವುದು ಮತ್ತು ರಾಸಾಯನಿಕ ಯುಕ್ತ ಬಣ್ಣ ಆಡುವುದು ಸಂಪೂರ್ಣ ನಿಷೇಧಿಸಲಾಗಿದೆ. ಕೋಳಿ ಮೊಟ್ಟೆ ಬಳಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಳಗ್ಗೆ 6:00 ಗಂಟೆಯಿಂದ ಮಧ್ಯರಾತ್ರಿವರೆಗೂ ಮದ್ಯಮಾರಾಟ ನಿಷೇಧಿಸಲಾಗಿದೆ. ಸದರಿ ದಿನಾಂಕದಂದು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಹೋಳಿ ಹಬ್ಬದ ಆಚರಣೆ ಕುರಿತು ಆಟೋದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಹೋಳಿ ಹಬ್ಬ ಆಚರಣೆಯಲ್ಲಿ ಯಾವುದೇ ತೊಂದರೆ ಆಗದಂತೆ ಆಚರಿಸಲು ಸೂಕ್ತ ಪೊಲೀಸ್‌ ಬಂದೋಬಸ್ತ್ ವಹಿಸಬೇಕು ಎಂದು ಪೊಲೀಸ್‌ ಇಲಾಖೆ
ಅಧಿಕಾರಿಗಳಿಗೆ ಸೂಚಿಸಿದರು.

ಕಾಮದಹನವನ್ನು ಶಾಂತಿಯುತವಾಗಿ ಆಚರಿಸಬೇಕು. ಅಲ್ಲದೆ ಈ ವೇಳೆ ಯಾವುದೇ ಅಗ್ನಿ ಅವಘಡ ಸಂಭವಿಸದಂತೆ ಮುಂಜಾಗ್ರತೆಗಾಗಿ ಅಗ್ನಿಶಾಮಕ ದಳದವರನ್ನು ನೇಮಿಸಬೇಕು. ಅಪರಿಚಿತರಿಗೆ ಬಣ್ಣ ಹಚ್ಚುವಂತಿಲ್ಲ. ಇಕಟ್ಟಾದ ರಸ್ತೆಗಳಲ್ಲಿ ಬಂಡಿ ಸಂಚಾರಕ್ಕೆ ಅನುಕೂಲ ಆಗುವಂತೆ ಮಾಡಿಕೊಡಬೇಕು. ಈ ಬಗ್ಗೆ ಪೊಲೀಸರು ನಿಗಾವಹಿಸಬೇಕು ಎಂದು ಅವರು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ತಹಶೀಲ್ದಾರ ಚೆನ್ನಮಲ್ಲಪ್ಪ ಗಂಟಿ, ಸಿಪಿಐ ಮೌನೇಶ್ವರ, ಪಿಎಸ್‌ಐ ಮಹಾಂತೇಶ ಸಜ್ಜನ್‌, ಅಯ್ಯಣ್ಣ ಹುಂಡೇಕಾರ, ಸಿದ್ದಪ್ಪ ಹೊಟ್ಟಿ, ವಿಶ್ವನಾಥ ಸಿರವಾರ, ಬಾಬು ದೋಖಾ, ಟಿ.ಎನ್‌. ಭೀಮುನಾಯಕ, ವಿಜಯ ಪಾಟೀಲ, ಲಾಯಕ್‌ ಹುಸೇನ್‌ ಬಾದಲ್‌, ಅಬ್ದುಲ್‌ ಕರೀಂ ಇದ್ದರು.

ಹಬ್ಬಗಳು ಸೌಹಾರ್ದತೆ ಸಂಕೇತ:
ಜನಗೌಡ ಸೈದಾಪುರ: ಪರಸ್ಪರ ಪ್ರೀತಿ ಸೌಹಾರ್ದತೆಯ ಸಂಕೇತವಾದ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಪಿಎಸ್‌ಐ ಎನ್‌. ಜನಗೌಡ ಹೇಳಿದರು. ಇಲ್ಲಿನ ಪೊಲೀಸ್‌ ಠಾಣೆ ಆವರಣದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಹೋಳಿ ಹಬ್ಬ ಆಚರಣೆ ಕುರಿತ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ವೈಶಿಷ್ಟ್ಯತೆ ಹೊಂದಿರುವ ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲ್ಲೂ ಬಣ್ಣದ ಹಬ್ಬ ಹೋಳಿಯನ್ನು ಆಚರಿಸಿಕೊಳ್ಳುತ್ತಾ ಬರಲಾಗಿದೆ. ಈ ಹಬ್ಬದಿಂದ ಪ್ರೀತಿ ವಿಶ್ವಾಸ ಮರುಕಳಿಸಬೇಕು. ಹೊರತು ದ್ವೇಷವಲ್ಲ ಎಂದು ತಿಳಿಸಿದರು. ನೈಸರ್ಗಿಕವಾದ ಬಣ್ಣಗಳಿಂದ ಹೋಳಿ ಆಚರಣೆ ಮಾಡಬೇಕು. ಇತರೆ ಜನಾಂಗಕ್ಕೆ ನೋವಾಗದಂತೆ ನಡೆದುಕೊಳ್ಳಬೇಕು. ಬಲವಂತವಾಗಿ ಬಣ್ಣ ಎರಚಬಾರದು.

ರಾಸಾಯನಿಕ ಬಣ್ಣಗಳ ಬಳಕೆ ಬಗ್ಗೆ ಜಾಗೃತಿ ವಹಿಸಬೇಕು ಮತ್ತು ನಿಗದಿತ ಸಮಯಕ್ಕೆ ಹೆಚ್ಚುಕಾಲ ಬಣ್ಣದಾಟ ಆಡಬಾರದು ಎಂದು ಸೂಚಿಸಿದರು. ಹೋಳಿ ಆಚರಣೆ ವೇಳೆ ಗಲಭೆಗಳು ಸಂಭವಿಸಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಪೊಲೀಸ್‌ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ಪಿಎಸ್‌ಐ ಎನ್‌. ಜನಗೌಡ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಪಿಎಸ್‌ಐ ಬಸವರಾಜ ಎಎಸ್‌ಐ ಸಾಯಬಣ್ಣ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಪೊಲೀಸ್‌ ಇಲಾಖೆ ಶಿವಾನಂದ ಮಸರಕಲ್‌ ನಿರೂಪಿಸಿ, ವಂದಿಸಿದರು.

ಪೊಲೀಸ್‌ ಠಾಣೆಯಲ್ಲಿ ಶಾಂತಿ ಸಭೆ
ಸುರಪುರ: ನಗರದಲ್ಲಿ ಶುಕ್ರವಾರ ಹೋಳಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಸರ್ಕಲ್‌ ಇನಸ್ಪೆಕ್ಟರ್‌ ಟಿ.ಆರ್‌. ರಾಘವೇಂದ್ರ ಸೂಚನೆ ನೀಡಿದರು. ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಹೋಳಿ ಹಬ್ಬದ ನಿಮಿತ್ತ ಗುರುವಾರ ಜರುಗಿದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸುರಪುರ ಭಾವೈಕ್ಯತೆಯ ನೆಲೆ ಬೀಡು. ಎಲ್ಲಾ ಜಾತಿ, ಜನಾಂಗಗಳು ಇಲ್ಲಿ ಪರಸ್ಪರ ಸೌಹಾರ್ದತೆಯಿಂದ ಬಾಳ್ವೆ ನಡೆಸುತ್ತಿರುವುದು ಪ್ರಶಂಸನೀಯ ಎಂದರು.

ಶುಕ್ರವಾರ ಬೆಳಗ್ಗೆ 7:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆವರೆಗೆ ಮಾತ್ರ ಬಣ್ಣದಾಟ ಆಡಬೇಕು. ಒತ್ತಾಯ ಪೂರ್ವಕವಾಗಿ ಬಣ್ಣ ಎರೆಚುವುದು, ಹಣ ವಸೂಲಿ ಮಾಡುವುದು ಸರಿಯಲ್ಲ. ಕಾರಣ ಪರಸ್ಪರ  ಹಪೂರ್ವಕವಾಗಿ ಬಣ್ಣದಾಟ ಆಡಬೇಕು. ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಬಣ್ಣವನ್ನು ಬಳಸಬೇಡಿ, ಒಟ್ಟಾರೆ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಶಾಂತಿಯಿಂದ ಹಬ್ಬದ
ಆಚರಣೆ ಮಾಡಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಜಡಿಮರಳ, ನಗರಸಭೆ ಮಾಜಿ ಅಧ್ಯಕ್ಷ ಶೇಖ್‌ ಮಹಿಬೂಬ್‌ ಒಂಟಿ, ಸದಸ್ಯ ಭೀಮಾಶಂಕರ ಬಿಲ್ಲವ್‌ ಮಾತನಾಡಿ, ನಗರದಲ್ಲಿ ಸೌರ್ಹಾದಯುತವಾಗಿ ಹಬ್ಬ ಆಚರಣೆ ಮಾಡುತ್ತಾರೆ. ಇಲ್ಲಿ ಇದುವರೆಗೂ ಯಾವುದೇ ಕೋಮುಭಾವನೆ ಘಟನೆ ನಡೆದಿಲ್ಲ. ಹಿಂದು ಮುಸ್ಲಿಂ ಪರಸ್ಪರ ಭಾತೃತ್ವದಿಂದ ಬಾಳುತ್ತಾರೆ. ಈ ಬಗ್ಗೆ ಅನುಮಾನ ಬೇಡ ಆದರೂ ಮುಂಜಾಗೃತೆಯಾಗಿ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್‌ ನಿಯೋಜನೆ ಮಾಡುವಂತೆ ಸಲಹೆ ನೀಡಿದರು. ಮಲ್ಲು ಬಿಲ್ಲವ್‌, ರಾಮಣ್ಣ ಶೆಳ್ಳಗಿ, ದಾನಪ್ಪ ಕಡೇಮನಿ ಲಕ್ಷ್ಮೀಪುರ, ತಿಪ್ಪಣ್ಣ ಶೆಳ್ಳಗಿ, ಶೇಖಪ್ಪ ಸಾಹು ಲಕ್ಷ್ಮೀಪುರ, ನಾಸೀರ್‌ ಹುಸೇನ್‌ ಕುಂಡಾಲೆ, ಮಹೇಶ ಯಾದಗಿರಿ, ಮಲ್ಲಪ್ಪ ವಗ್ಗಾ ದಿವಳಗುಡ್ಡ, ಮಹೇಂದ್ರಕುಮಾರ ಬಿಲ್ಲವ್‌, ಚಂದ್ರಶೇಖರ ಕಟ್ಟಿಮನಿ, ಮೌನೇಶ ಶೆಳ್ಳಗಿ, ಶ್ರೀವಲ್ಲಭ ಕಡಬೂರ್‌, ಚನ್ನಬಸಪ್ಪ ಚೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next