Advertisement

ರಾಜಧಾನಿ ರೋಡಲ್ಲೆಲ್ಲಾ ಗುಂಡಿ

12:10 PM Jun 04, 2018 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಪ್ರಮುಖ ರಸ್ತೆಗಳು ಗುಂಡಿಮಯವಾಗಿದ್ದು, ವಾಹನ ಸವಾರರು ಆತಂಕದಿಂದ ವಾಹನ ಚಾಲನೆ ಮಾಡುವಂತಾಗಿದೆ.

Advertisement

ನಗರದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಈ ಹಿಂದೆ ಪಾಲಿಕೆ ಅಧಿಕಾರಿಗಳು ವೈಜ್ಞಾನಿಕವಾಗಿ ಗುಂಡಿಗಳನ್ನು ದುರಸ್ತಿಗೊಳಿಸದ ಪರಿಣಾಮ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ. 

ಕಳೆದ ವರ್ಷ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿದ್ದವು. ಗುಂಡಿಗಳ ಕಾರಣದಿಂದಲೇ ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಆ ನಂತರವೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚುತ್ತಿದ್ದು, ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. 

ಕಳಪೆ ಕಾಮಗಾರಿ, ಅವೈಜ್ಞಾನಿಕ ರಸ್ತೆ ನಿರ್ವಹಣೆ ಹಾಗೂ ವಿವಿಧ ಉದ್ದೇಶಗಳಿಗಾಗಿ ರಸ್ತೆ ಅಗೆದು ನಂತರದಲ್ಲಿ ದುರಸ್ತಿಗೊಳಿಸದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಭಾರಿ ಗಾತ್ರದ ಗುಂಡಿಗಳು ಸೃಷ್ಟಿಯಾಗಿವೆ. ಆರ್ಟಿರಿಯಲ್‌, ಸಬ್‌ ಆರ್ಟಿರಿಯಲ್‌ ಹಾಗೂ ವಾರ್ಡ್‌ ರಸ್ತೆಗಳ ಹೀಗೆ ಎಲ್ಲ ಕಡೆಗಳಲ್ಲಿ ಗುಂಡಿಗಳಿದ್ದು ಮಳೆ ನೀರು ಗುಂಡಿಗಳಲ್ಲಿ ತುಂಬುವುದರಿಂದ ವಾಹನ ಸವಾರರಿಗೆ ಗುಂಡಿ ಇರುವಿಕೆ ತಿಳಿಯದೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ. 

ಸಾವಿರಾರು ಗುಂಡಿ: ಮಳೆಗಾಲ ಆರಂಭವಾಗುವ ಮೊದಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳು ಸೃಷ್ಟಿಯಾಗಿದ್ದು, ಶೇ.50ಕ್ಕಿಂತ ಹೆಚ್ಚಿನ ಗುಂಡಿಗಳು ಮಾತ್ರ ದುರಸ್ತಿಯಾಗಿವೆ. 15 ದಿನಗಳ ಹಿಂದೆ ಪಾಲಿಕೆ ಅಧಿಕಾರಿಗಳು ಆಯುಕ್ತರಿಗೆ ವರದಿ ಸಲ್ಲಿಸಿದಾಗ ನಗರದಲ್ಲಿ 4 ಸಾವಿರ ಗುಂಡಿಗಳಿವೆ ಎಂದು ತಿಳಿಸಿದ್ದರು. ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಂಡಿಗಳ ಸಂಖ್ಯೆ ಹೆಚ್ಚುತ್ತಿದೆ. 

Advertisement

ಬಿಬಿಎಂಪಿ ವತಿಯಿಂದ ರಸ್ತೆ ನಿರ್ಮಾಣ ಗುತ್ತಿಗೆ ಪಡೆದವರು ಮೂರು ವರ್ಷಗಳು ನಿರ್ವಹಣೆ ನೋಡಿಕೊಳ್ಳಬೇಕು. ಆದರೆ, ಪಾಲಿಕೆಯ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ಸಮರ್ಪಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿಲ್ಲ. ಪರಿಣಾಮ ಜನರು ತೊಂದರೆ ಅನುಭವಿಸುವಂತಾಗಿದೆ. ಇದರೊಂದಿಗೆ ಹಲವು ಕಡೆಗಳಲ್ಲಿ ಕಳೆದ ಎರಡು ಮೂರು ತಿಂಗಳಲ್ಲಿ ಡಾಂಬರೀಕರಣ ಮಾಡಿರುವ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ.

ಈಡೇರದ ವೈಟ್‌ಟಾಪಿಂಗ್‌ ಉದ್ದೇಶ: ನಗರದಲ್ಲಿ ರಸ್ತೆಗಳ ಗುಂಡಿಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಂಡಿದೆ. ಅದರಂತೆ ನಗರದ ಪ್ರಮುಖ 29 ರಸ್ತೆ ಮತ್ತು 6 ಜಂಕ್ಷನ್‌ಗಳು ಸೇರಿ

ಒಟ್ಟು 93.47 ಕಿ.ಮೀ ಉದ್ದದ ರಸ್ತೆಗಳನ್ನು 972.69 ಕೊಟಿ ರು. ವೆಚ್ಚದಲ್ಲಿ ವೈಟ್‌ಟಾಪಿಂಗ್‌ಗೊಳಿಸಲು ಟೆಂಡರ್‌ ನೀಡಿದ್ದು, ಮೊದಲ ಹಂತದಲ್ಲಿ 36 ಕಿ.ಮೀ. ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ, ಈವರೆಗೆ ಕೇವಲ 10 ಕಿಲೋ ಮೀಟರ್‌ಗಳಷ್ಟು ಕಾಮಗಾರಿ ಮಾತ್ರ ಮುಗಿದಿದ್ದು, ವೈಟ್‌ಟಾಪಿಂಗ್‌ ಯೋಜನೆ ಉದ್ದೇಶವೇ ಈಡೇರದಂತಾಗಿದೆ. 

ಗುಂಡಿಗಳು ಎಲ್ಲೆಲ್ಲಿ: ಡಾ.ರಾಜ್‌ಕುಮಾರ್‌ ಮುಖ್ಯರಸ್ತೆ, ಬಿಎಚ್‌ಇಎಲ್‌, ನಾಯಂಡಹಳ್ಳಿ, ಗೂಡ್‌ಶೆಡ್‌ ರಸ್ತೆ, ಅವೆನ್ಯೂ ರಸ್ತೆ, ಎಸ್‌ಜೆಪಿ ರಸ್ತೆ, ಹಳೇ ತಾಲೂಕು ರಸ್ತೆ, ವಿಜಯ ನಗರ, ಕೆ.ಆರ್‌.ಮಾರುಕಟ್ಟೆ, ಬಾಣಸವಾಡಿ, ಬಿಎಚ್‌ಇಲ್‌ ರಸ್ತೆ, ಹಳೆ ಮದ್ರಾಸ್‌ ರಸ್ತೆ, ಎಂ.ಜಿ.ರಸ್ತೆ, ಟ್ರಿನಿಟಿ ವೃತ್ತ, ಹಲಸೂರು, ಇಂದಿರಾ ನಗರ ಸೇರಿದಂತೆ ಹಲವಾರು ಕಡೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿವೆ.

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next