ಹೊಳೆನರಸೀಪುರ: ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ವಿಧಾನಸಭಾ ಚುನಾವಣೆಯಲ್ಲಿ ಕೂದಲೆಳೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುಂಡ ನಂತರ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಕಾಣತೊಡಗಿದೆ.
ಕಳೆದ 1994ರ ನಂತರ ಹೊಳೆನರಸೀಪುರ ಕ್ಷೇತ್ರದಲ್ಲಿ ಒಂದು ಬಾರಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದನ್ನು ಬಿಟ್ಟರೆ ಅಲ್ಲಿಂದ ಇಲ್ಲಿಯವರೆಗೆ ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ, ಮೊನ್ನೆ ಚುನಾವಣೆ ಯಲ್ಲಿ ಹಾಲಿ ಶಾಸಕ ಎಚ್.ಡಿ.ರೇವಣ್ಣ ಅವರು ಶಾಸಕರಾಗಿ ಸಚಿವರಾಗಿ ಕರ್ತವ್ಯ ನಿರ್ವಹಿಸಿ ಪಾರುಪತ್ಯ ಸಾಧಿಸಿದರು.
ವರ್ಗಾವಣೆ ಭಾಗ್ಯ: ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ ಪಟೇಲ್ ಅವರು ನೀಡಿ ಪ್ರಬಲ ಸ್ಪರ್ಧೆ ಯಿಂದ ಕ್ಷೇತ್ರದಲ್ಲಿ ಸುಮಾರು ಮೂವತ್ತು ವರ್ಷ ಆಡಳಿತ ನಡೆಸಿದ್ದ ಜೆಡಿಎಸ್‌ಗೆ ಭಾರೀ ಪೈಪೋಟಿ ನೀಡಿ ಸೋಲು ಕಂಡರು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಸೋಲುಂಡರೂ ಸಹ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರ ಮುಖವಾಣಿ ಯಂತೆ ಕೆಲಸ ಮಾಡುತ್ತಿದ್ದ ಅಧಿಕಾರಿಗಳಿಗೆ ಎತ್ತಂಗಡಿ ಭಾಗ್ಯ ಕರುಣಿಸಿದೆ. ವಿವಿಧ ಇಲಾಖೆಗಳ 20ಕ್ಕೂ ಹೆಚ್ಚು ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ನೈಜ ಫಲಾನುಭವಿಗಳು, ಎಲ್ಲ ವರ್ಗ ದವರಿಗೂ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಆಡಳಿತಕ್ಕೆ ಮೇಜರ್ ಸರ್ಜರಿ: ಹಾಲಿ ಶಾಸಕ ಎಚ್.ಡಿ.ರೇವಣ್ಣ ಅವರ ಆಟಾಟೋಪಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅವರು ಕಡಿವಾಣ ಹಾಕಲು ಮುಂದಾಗಿರುವುದು ಹೊಸ ಆಯಾಮದ ಆಡಳಿತಕ್ಕೆ ಹಿಡಿದ ಸಾಣೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಲೂಕು ಕಚೇರಿಯಲ್ಲಿ ಹತ್ತಾರು ವರ್ಷಗಳಿಂದ ಠಿಕಾಣಿ ಹೂಡಿ ಕರ್ತವ್ಯ ನಿರ್ವಹಿಸುತ್ತಿದ್ದ ಹಳೇಕೋಟೆ ಉಪ ತಹಶೀಲ್ದಾರ್ ಶಿವಕುಮಾರ್, ಹಳ್ಳಿಮೈಸೂರು ಉಪ ತಹಶೀಲ್ದಾರ್ ಸೋಮ ಶೇಖರ್, ಶಾಸಕ ರೇವಣ್ಣ ಅವರ ಗ್ರಾಮದವರಾದ ತಾಪಂ ಅಧಿಕಾರಿ ಗೋಪಾಲ್, ರೇವಣ್ಣ ಅವರ ಆಪ್ತರಲ್ಲಿ ಒಬ್ಬರಾದ ತಹಶೀಲ್ದಾರ್ ವಿಶ್ವನಾಥ್ ಅವರು ಸೇರಿದಂತೆ ಪ್ರಮುಖ ಆಯಾ ಕಟ್ಟಿನಲ್ಲಿರುವ ಹಲವಾರು ಅಧಿಕಾರಿಗಳ ವರ್ಗಾಗಣೆಗೆ ಮುಂದಾಗಿದೆ. ಇದೇ ರೀತಿ ನೀರಾವರಿ ಇಲಾಖೆ, ತಾಲೂಕು ಕಂದಾಯ ಇಲಾಖೆಯ ಗ್ರೇಡ್ 2 ತಹಶೀಲ್ದಾರ್ ರವಿ ಅವರು ಸೇರಿದಂತೆ ಬಹಳಷ್ಟು ಅಧಿಕಾರಿಗಳು ವರ್ಗಾವಣೆಗೊಂಡು ಆಯಾ ಸ್ಥಾನಕ್ಕೆ ಬೇರಡೆಯಿಂದ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.
ಜಡ್ಡು ಹಿಡಿದ ಆಡಳಿತಕ್ಕೆ ಬಿಸಿ ಮುಟ್ಟಿಸಿದ ಕೈ: ಕೆಲ ಅಧಿಕಾರಿಗಳು ಶಾಸಕ ಎಚ್.ಡಿ.ರೇವಣ್ಣ ಅವರ ಮುಖವಾಣಿಯಾಗಿ ಇತ್ತೀಚೆಗೆ ಬಂದಿದ್ದು, ಅವರುಗಳನ್ನು ಸರ್ಕಾರ ವರ್ಗಾವಣೆ ಮಾಡಲಿದೆ ಅಂತ ಅರಿತ ಕೆಲವರು ರಾಜ್ಯ ಕೆಎಟಿ ಬಾಗಿಲು ತಟ್ಟಿ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಪ್ರಸ್ತುತ ಪುರಸಭೆ, ನೀರಾವರಿ ಇಲಾಖೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಕೆಪಿಟಿಸಿಎಲ್, ಪಶು ಆಸ್ಪತ್ರೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಅಬಕಾರಿ ಇಲಾಖೆ , ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಇಲಾಖೆ, ಲೋಕೋ ಪಯೋಗಿ ಇಲಾಖೆ ಎಂಜಿನಿಯರ್ ಹೇಮಂತ್, ಅರಣ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರುಗಳು ಸೇರಿದಂತೆ ಮತ್ತಷ್ಟು ಇಲಾಖೆಗಳಲ್ಲಿ ಜೆಡಿಎಸ್ ಬೆಂಬಲಿತ ಅಧಿಕಾರಿಗಳೆ ತುಂಬಿದ್ದು ಅವರುಗಳನ್ನು ಬೇರೆಡೆಗೆ ವರ್ಗಾವಣೆಗೊಳಿಸಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಒತ್ತು ನೀಡುವ ಅಧಿಕಾರಿಗಳ ನೇಮಕ ಮಾಡಬೇಕೆಂದು ಒತ್ತಾಯಿಸಲಾಗಿದೆ. ಕಳೆದ ಮೂವತ್ತು ವರ್ಷ ಗಳಿಂದ ಜಡ್ಡುಗಟ್ಟಿದ್ದ ಆಡಳಿತಕ್ಕೆ ರಾಜ್ಯ ಸರ್ಕಾರ ಸಾಣೆ ಹಿಡಿಯಲು ಮುಂದಾಗಿರುವುದು ಕ್ಷೇತ್ರದಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ಮುನ್ನಡಿ ಎಂದು ಹೇಳಬಹುದಾಗಿದೆ.