Advertisement

8 ನಿಮಿಷದಲ್ಲಿ ಪುರಸಭೆ ಬಜೆಟ್‌ ಮಂಡನೆ!

02:38 PM Mar 15, 2022 | Team Udayavani |

ಹೊಳೆನರಸೀಪುರ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜಿ.ಕೆ.ಸುಧಾನಳಿನಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೇವಲ 8 ನಿಮಿಷಗಳಲ್ಲಿ 2022-23ನೇ ಸಾಲಿನ ಬಜೆಟ್‌ ಮಂಡಿಸಿದರು.

Advertisement

ಶಾಸಕ ಎಚ್‌.ಡಿ.ರೇವಣ್ಣ ಸಮ್ಮುಖದಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ ಪ್ರಾರಂಭ ಶಿಲ್ಕು 27.48 ಲಕ್ಷ ರೂ. ಎಂದು ತಿಳಿಸಿದ ಅಧ್ಯಕ್ಷೆ, 2022-23ರಲ್ಲಿ 57.62 ಕೋಟಿ ರೂ. ಆದಾಯವನ್ನು ವಿವಿಧ ಮೂಲಗಳಿಂದ ನಿರೀಕ್ಷಿಸಿ, ಒಟ್ಟು 57.89 ಕೋಟಿ ರೂ. ವೆಚ್ಚ ಮಾಡುವುದಾಗಿ ತಿಳಿಸಿ, 28.33 ಲಕ್ಷ ರೂ. ಆದಾಯ ಮತ್ತು ಉಳಿತಾಯ ನಿರೀಕ್ಷಿಸಿರುವುದಾಗಿ ಘೋಷಿಸಿದರು.

ತಮ್ಮ ಅಯವ್ಯಯ ಮಂಡನೆಯಲ್ಲಿ ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಳಚರಂಡಿ, ಕುಡಿಯುವ ನೀರು, ಚರಂಡಿ, ರಸ್ತೆ, ಚಿತಾಗಾರ ಅಭಿವೃದ್ಧಿ, ಪರಿಶಿಷ್ಟರಿಗೆ ಸೌಲಭ್ಯ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಪುರಸಭೆ ಕಚೇರಿಗೆ ಲಿಫ್ಟ್‌, ಪಟ್ಟಣದಲ್ಲಿನ ಕಡುಬಡವರಿಗೆ ಒಂದು ಸಾವಿರ ನಿವೇಶನ, ಪಟ್ಟಣದ 23 ವಾರ್ಡ್‌ಗಳ ಅಭಿವೃದ್ಧಿಗೆ 4.5 ಕೋಟಿ ರೂ. ರಸ್ತೆ ನಿರ್ಮಾಣ ಕಾಮಗಾರಿ, ವಾಣಿಜ್ಯ ಸಂಕೀರ್ಣದ ಮೊದಲ ಅಂತಸ್ತು ನಿರ್ಮಾಣಕ್ಕೆ 3 ಕೋಟಿ ರೂ., ನಗರದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ 10 ಕೋಟಿ ರೂ. ಹಣ ಮೀಸಲಿಡುವುದಾಗಿ ಅಧ್ಯಕ್ಷರು ತಿಳಿಸಿದರು.

ತಮ್ಮ ಅಯವ್ಯಯದ ಮಂಡನೆಗೆ ಮೊದಲು ಈ ಹಿಂದಿನ ಮಾಸಿಕ ಸಭೆಯಲ್ಲಿ ನಡೆದ ನಡಾವಳಿಗಳನ್ನು ಸಭೆಗೆ ಓದಿ ಮಾಹಿತಿ ನೀಡಿದರು. ಅಯವ್ಯಯ ಮಂಡನೆ ಆಗುತ್ತಿದ್ದಂತೆ ಶಾಸಕ ರೇವಣ್ಣ, ಸದಸ್ಯರು ಸಲಹೆ ನೀಡುವಂತೆ ಸೂಚಿಸಿದರು.

ಸುಸ್ತಿದಾರರಿಗೆ ಪುನಃ ಮಳಿಗೆ: ನಾಮ ನಿರ್ದೇಶಿತ ಸದಸ್ಯರಾದ ನಾಗರಾಜು ಮತ್ತು ಕುಮಾರ್‌ ಮಾತನಾಡಿ, ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿರುವ ಕೆಲವು ಬಾಡಿಗೆದಾರರು ಪುರಸಭೆಗೆ ಲಕ್ಷಾಂತರ ರೂ. ಬಾಡಿಗೆ ನೀಡದೆ ಇದ್ದಾರೆ, ಆದರೆ ಪುರಸಭೆ ಮರು ಹರಾಜು ಪ್ರಕ್ರಿಯೆ ನಡೆಸಿ ಪುರಸಭೆಗೆ ಬಾಡಿಗೆ ನೀಡದವರ ಕುಟುಂಬಕ್ಕೆ ಮತ್ತೆ ಬಾಡಿಗೆ ನಿಗ ಪಡಿಸಿ ನೀಡಲಾಗಿದೆ. ಬಾಡಿಗೆದಾರರಿಂದ 30ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿದೆ. ಅದನ್ನು ವಸೂಲಿ ಮಾಡುವ ಬಗ್ಗೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

Advertisement

ಹಣ ಮುಟ್ಟುಗೋಲು: ಇದಕ್ಕೆ ಉತ್ತರಿಸಿದ ಮುಖ್ಯಾಧಿ ಕಾರಿ ಶಾಂತಲಾ ಮಾತನಾಡಿ, ಬಾಡಿಗೆ ನೀಡದವರು ನಮ್ಮಲ್ಲಿ ಇಟ್ಟಿದ್ದ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಮರುಹರಾಜು ಪ್ರಕ್ರಿಯೆ ನಡೆಸಲಾಗಿದೆ ಎಂದು ಸಮಜಾಯಿಸಿ ನೀಡಿದರು. ಮುಖ್ಯಾಧಿಕಾರಿಗಳ ಸಮಜಾಯಿಸಿ ಒಪ್ಪದ ನಾಮ ನಿರ್ದೇಶಿತ ಸದಸ್ಯರು ಮರು ಹರಾಜು ಎಂದ ಮೇಲೆ ಬಾಡಿಗೆಯಲ್ಲಿದ್ದವರನ್ನು ತೆರವುಗೊಳಿಸಿ ಮರು ಹರಾಜು ನಡೆಸಬೇಕೇ ಹೊರೆತು, ಪುನಃ ಅವರಿಗೆ ಅಂದರೆ ಅವರ ಕುಟುಂಬಕ್ಕೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಮತ್ತು ಬಾಡಿಗೆ ನೀಡದ ಅವರ ಮೇಲೆ ಯಾವ ಕ್ರಮಕೈಗೊಳ್ಳುವಿರಿ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಸಭೆಯಲ್ಲಿದ್ದ ಮುಖ್ಯಾಧಿಕಾರಿಗಳಾಗಲಿ, ಅಧ್ಯಕ್ಷರಾಗಲಿ ಯಾವುದೇ ಪ್ರತಿಕ್ರಿಯೆ ನೀಡದೆ ಸಭೆ ಮುಂದಿನ ಪ್ರಶ್ನೆಯತ್ತ ಸಾಗಿತು. ಪ್ರಸ್ತುತ ಪಟ್ಟಣದ ಪುರಸಭೆಗೆ ಸೇರಿದ 110 ಮಳಿಗೆಗಳು ಖಾಲಿ ಇದ್ದು, ಅವುಗಳನ್ನು ಸಾರ್ವಜನಿಕವಾಗಿ ಹರಾಜು ಪ್ರಕ್ರಿಯೆ ನಡೆಯುತ್ತಲೇ ಇದೆ. ಆದರೆ, ಯಾರೊಬ್ಬರು ಕೂಗಲು ಬರುತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ರೇವಣ್ಣ ಮಾಹಿತಿ ನೀಡಿದರು.

ಟ್ರೇಡ್‌ ಲೈಸೆನ್ಸ್‌ ಶುಲ್ಕ ದರ ಏರಿಕೆ: ಪಟ್ಟಣದ ಟ್ರೇಡ್‌ ಲೈಸೆನ್ಸ್‌ ಶುಲ್ಕ ಈ ಹಿಂದೆ ಕೇವಲ 350 ರೂ. ಇತ್ತು. ಏಕಾಏಕಿ 2,600 ರೂ.ಗೆ ಏರಿಸಿದ್ದನ್ನು ಸದಸ್ಯ ಕೆ.ಆರ್‌. ಸುಬ್ರಹ್ಮಣ್ಯ, ಕೆ.ಶ್ರೀಧರ್‌ ಪ್ರಶ್ನಿಸಿ ಈ ಏರಿಕೆಗೆ ಸರ್ಕಾರ ಯಾವುದೇ ಸೂಚನೆ ನೀಡಿಲ್ಲ. ಆದರೂ, ಏರಿಕೆ ಏಕೆ ಎಂಬ ಪ್ರಶ್ನೆಗೆ ಶಾಸಕರೇ ಉತ್ತರಿಸಿ, ಈ ಬಗ್ಗೆ ಜಿಲ್ಲೆಯ ಬೇರೆ ತಾಲೂಕಿನಲ್ಲಿ ನಿಗದಿ ಪಡಿಸಿರುವ ಮಾಹಿತಿ ಪಡೆದು ಅದಕ್ಕೆ ತಕ್ಕಂತೆ ಇಲ್ಲೂ ದರ ನಿಗದಿ ಪಡಿಸಿ ಎಂದು ಸೂಚನೆ ನೀಡಿದರು.

 ಶಾಸಕರು ಭಾಗಿ: ಪುರಸಭೆ ಇತಿಹಾಸದಲ್ಲಿಯೇ ಆಯವ್ಯಯ ಶಾಸಕರ ಸಮ್ಮುಖದಲ್ಲಿ ನಡೆದಿರಲಿಲ್ಲ. ಈ ಬಾರಿ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಸಭೆ ಕೇವಲ ಒಂದು ಗಂಟೆಯಲ್ಲಿ ಮುಕ್ತಾಯವಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ತ್ರಿಲೋಚನ, ಮುಖ್ಯಾಧಿಕಾರಿ ವಿ.ಡಿ.ಶಾಂತಲಾ ಉಪಸ್ಥಿತರಿದ್ದರು.

ನಾಮ ನಿರ್ದೇಶನದ ಬಗ್ಗೆ ಗೊಂದಲ : ಹೊಳೆನರಸೀಪುರ ಪುರಸಭೆಯ ಬಜೆಟ್‌ನ ಸಭೆಯಲ್ಲಿ ನಾಮನಿರ್ದೇಶನ ಸದಸ್ಯ ಪ್ರಸನ್ನ ಮಾತನಾಡಿ, ತಮ್ಮನ್ನು ಸರ್ಕಾರ ಸೆ.7ರಂದು ನಾಮನಿರ್ದೇಶನ ಮಾಡಿದೆ. ಆದರೆ, ನಮ್ಮನ್ನು ಯಾವ ಸಭೆಗೂ ಆಹ್ವಾನಿಸಿಲ್ಲ, ನಮ್ಮ ನಾಮನಿರ್ದೇಶನ ಸದಸ್ಯರು ಎಂದು ಪರಿಗಣಿಸಿಲ್ಲ. ಇದು ಸರಿಯಲ್ಲ ಎಂದು ತಮ್ಮ ಮಾತು ಮಂಡಿಸುತ್ತಿದ್ದಂತೆ, ಶಾಸಕ ರೇವಣ್ಣ ಮಧ್ಯ ಪ್ರವೇಶಿಸಿ, ಸರ್ಕಾರ ಸೆಪ್ಟೆಂಬರ್‌ನಲ್ಲಿ ಅದೇಶ ಮಾಡಿದ್ರೂ ನಮಗೆ ಬಂದ ಆದೇಶದ ಮೇಲೆ ಸದಸ್ಯರೆಂದು ಪರಿಗಣಿಸಲಾಗಿದೆ ಎಂದು ಸಮಜಾಯಿಸಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಾಮ ನಿರ್ದೇಶಿತ ಸದಸ್ಯ ಪ್ರಸನ್ನ, ತಮ್ಮ ಮಾತು ನಿಜ. ಆದರೆ, ನಮ್ಮನ್ನು ಡಿ.21 ರಂದು ಸದಸ್ಯರೆಂದು ಪರಿಗಣಿಸಿ ದಾಖಲು ಮಾಡಿಕೊಂಡಿದ್ದೀರಿ. ಆದರಂತೆ ಡಿ.10ರಂದು ನಡೆದ ವಿಧಾನ ಪರಿಷತ್‌ ಚುನಾವಣೆ ವೇಳೆ, ನಮಗೆ ಪುರಸಭೆಯಿಂದ ಮಾಹಿತಿ ನೀಡಿ ಡಿ.10ರಂದು ಮತದಾನಕ್ಕೆ ಸೂಚನೆ ನೀಡಿದ್ದಾದರೂ ಏಕೆ ಎಂಬ ಪ್ರಶ್ನೆಯನ್ನು ಸಭೆ ಮುಂದಿರಿಸಿದರು.ಇದಕ್ಕೆ ಉತ್ತರ ನೀಡುವಲ್ಲಿ ಮುಖ್ಯಾ ಧಿಕಾರಿಗಳು ತಡಬಡಾಯಿಸುತ್ತಿದ್ದಂತೆ ಸ್ವತಃ ರೇವಣ್ಣ ಅವರೇ ಮಧ್ಯ ಪ್ರವೇಶಿಸಿ ಸಮಜಾಯಿಸಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next