Advertisement

ರೇವಣ್ಣ ಅಧಿಪತ್ಯ ಕೆಡವಲು ಕೈ ಕಹಳೆ

04:10 PM May 06, 2023 | Team Udayavani |

ಹಾಸನ: ಎಚ್‌.ಡಿ.ದೇವೇಗೌಡರ ರಾಜಕೀಯ ಜನ್ಮ ಭೂಮಿ ಹೊಳೆನರಸೀಪುರ ಕ್ಷೇತ್ರದಲ್ಲಿ 1957ರ ವಿಧಾನಸಭಾ ಚುನಾವಣೆ ನಂತರ ದೇವೇಗೌಡರ ಕುಟುಂಬದವರ ಹೊರತಾಗಿ ಗೆದ್ದಿರುವವರು ಇಬ್ಬರು ಮಾತ್ರ. ದೇವೇಗೌಡರ ಕುಟುಂಬದವರ ಗೆಲುವಿನ ದಾಖಲೆ ಮುರಿಯಲು ಕಾಂಗ್ರೆಸ್‌ ಹೋರಾಟ ಮಾಡುತ್ತಲೇ ಬಂದಿದೆ. ಆದರೆ ಯಶಸ್ಸು ಸಿಕ್ಕಿದ್ದು ಎರಡು ಬಾರಿ ಮಾತ್ರ.

Advertisement

1952ರಲ್ಲಿ ಎ.ಜಿ.ರಾಮಚಂದ್ರರಾವ್‌ ಕಾಂಗ್ರೆಸ್‌ ನಿಂದ, 1957ರಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿಯಿಂದ ಹೊಳೆ ನರಸೀಪುರ ಕ್ಷೇತ್ರದಲ್ಲಿ ವೈ.ವೀರಪ್ಪ ಗೆದ್ದದ್ದು ಬಿಟ್ಟರೆ 1962 ರಿಂದ 1985 ರವರೆಗೆ ಎಚ್‌.ಡಿ.ದೇವೇಗೌಡರು ಸತತ 6 ಬಾರಿ ವಿಜಯದ ದಾಖಲೆ ನಿರ್ಮಿಸಿದ್ದಾರೆ. ಆನಂತರ 1989ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ.ಪುಟ್ಟಸ್ವಾಮಿಗೌಡ, 1999ರಲ್ಲಿ ಕಾಂಗ್ರೆಸ್‌ನ ಎ.ದೊಡ್ಡೇಗೌಡ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ಬಿಟ್ಟರೆ ಎಚ್‌.ಡಿ.ರೇವಣ್ಣ ಸತತ 4 ಬಾರಿ ಗೆಲುವಿನ ದಾಖಲೆ ಸೇರಿ ಒಟ್ಟು 5 ಬಾರಿ ಗೆದ್ದು, 6ನೇ ಗೆಲುವಿನ ತವಕದಲ್ಲಿದ್ದಾರೆ. ಇದುವರೆಗೆ ನಡೆದ 15 ವಿಧಾನಸಭಾ ಚುನಾವಣೆಯಲ್ಲಿ 11ಬಾರಿ ಎಚ್‌.ಡಿ.ದೇವೇಗೌಡರು, ಎಚ್‌.ಡಿ.ರೇವಣ್ಣ ಅವರದೇ ವಿಜಯ.

ಶ್ರೇಯಸ್‌ ಪಟೇಲ್‌ ಪೈಪೋಟಿ: 80ರ ದಶಕದಿಂದಲೂ ಹೊಳೆನರಸೀಪುರ ಕ್ಷೇತ್ರದಲ್ಲಿ ದೇವೇಗೌಡರ ಕುಟುಂಬದ ಎದುರು ಜಿ.ಪುಟ್ಟಸ್ವಾಮಿ ಗೌಡರ ಕುಟುಂಬವೇ ರಾಜಕೀಯ ಎದುರಾಳಿ. ಪುಟ್ಟಸ್ವಾಮಿಗೌಡ ಅವರು ನಿಧನರಾಗಿ 18 ವರ್ಷ ಕಳೆದರೂ ಅವರ ಕುಟುಂ ಬ ದೇವೇಗೌಡರ ಕುಟುಂಬದೆದರು ಹೋರಾಟ ಮಾಡುತ್ತಲೇ ಬಂದಿದೆ. ಈಗಲೂ ಹೋರಾಟ ಮುಂದುವರಿದಿದೆ. 1989ರ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿ, 1994ರ ಚುನಾವಣೆಯಲ್ಲಿ ದೇವೇಗೌಡರ ಪುತ್ರ ಎಚ್‌.ಡಿ. ರೇವಣ್ಣ ಅವರಿಂದ ಸೋಲು ಅನುಭವಿಸಿದ್ದ ಕಾಂಗ್ರೆಸ್‌ನ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಜಿಪಂ ಮಾಜಿ ಸದಸ್ಯ ಎಂ.ಶ್ರೇಯಸ್‌ ಪಟೇಲ್‌ ಈ ಬಾರಿ ಚುನಾವಣೆಯಲ್ಲಿ ಎಚ್‌ .ಡಿ.ರೇವಣ್ಣ ಅವರೆದುರು ಕಾಂಗ್ರೆಸ್‌ನ ಎದುರಾಳಿ.

ಈ ಹಿಂದೆ ರೇವಣ್ಣ ಅವರೆದುರು ಶ್ರೇಯಸ್‌ ಪಟೇಲ್‌ ಅವರ ತಾಯಿ ಅನುಪಮ ಮಹೇಶ್‌ ಅವರು 2008 ಮತ್ತು 2013ರ ಚುನಾವಣೆಯಲ್ಲಿ ಎರಡು ಬಾರಿ ರೇವಣ್ಣ ಅವರೆದುರು ಸ್ಪರ್ಧೆಗಿಳಿದು ಪರಾಭವಗೊಂಡಿದ್ದರು. ಈ ಬಾರಿ ಮಗ ಶ್ರೇಯಸ್‌ ಪಟೇಲ್‌ರನ್ನು ಎಚ್‌.ಡಿ. ರೇವಣ್ಣ ಎದುರು ಸ್ಪರ್ಧೆಗಿಳಿಸಿದ್ದಾರೆ.

ದಳ-ಕೈ ನಡುವೆ ಹಣಾಹಣಿ: ಹಾಸನ ಜಿಲ್ಲೆಯ ರಾಜಕೀಯ ದೈತ್ಯಶಕ್ತಿ ರೇವಣ್ಣ ಅವರೆದುರು ಯಾವ ಲೆಕ್ಕಾಚಾರದಲ್ಲೂ ಶ್ರೇಯಸ್‌ ಪಟೇಲ್‌ ಸಮರ್ಥ ಎದುರಾಳಿಯೇ ಅಲ್ಲ. ಆದರೆ ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭದ್ರ ನೆಲೆಯಿದೆ. ಹಾಗಾಗಿ ಪ್ರತಿ ಚುನಾವಣೆಯಲ್ಲೂ ರೇವಣ್ಣ ಅವರೆದುರು ಕಾಂಗ್ರೆಸ್‌ ಅಭ್ಯರ್ಥಿಗಳು ಪೈಪೋಟಿ ನೀಡುತ್ತಲೇ ಬಂದಿದ್ದಾರೆ. ಈ ಬಾರಿ ರೇವಣ್ಣ ಅವರಿಗೆ ಶ್ರೇಯಸ್‌ ಪಟೇಲ್‌ ಪೈಪೋಟಿ ನೀಡುತ್ತಿದ್ದಾರೆ. ತನ್ನ ಅಜ್ಜನ ನಾಮಬಲ ಹಾಗೂ ಕಾಂಗ್ರೆಸ್‌ನ ನೆಲೆಯೇ ಶ್ರೇಯಸ್‌ ಪಟೇಲ್‌ಗೆ ಬಲ.

Advertisement

6ನೇ ಗೆಲುವಿನ ಉತ್ಸಾಹದಲ್ಲಿ ರೇವಣ್ಣ: ಕ್ಷೇತ್ರದಲ್ಲಿ ಸತತ 4 ಬಾರಿ ಸೇರಿ ಈಗಾಗಲೇ 5 ಬಾರಿ ಗೆಲುವು ಸಾಧಿಸಿರುವ ಎಚ್‌.ಡಿ.ರೇವಣ್ಣ 6ನೇ ಗೆಲುವಿನ ತವ ಕದಲ್ಲಿದ್ದಾರೆ. ಕಳೆದ 24 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಹಾಗೂ ಕ್ಷೇತ್ರದಾದ್ಯಂತ ಇರುವ ಜೆಡಿಎಸ್‌ ಕಾರ್ಯಕರ್ತರ ಪಡೆ ರೇವಣ್ಣ ಅವರಿಗೆ ದೈತ್ಯಬಲ. ಜೊತೆಗೆ ಈಗ ಪತ್ನಿ ಭವಾನಿ ರೇವಣ್ಣ, ಪುತ್ರರಾದ ಪ್ರಜ್ವಲ್‌ ರೇ ವಣ್ಣ, ಡಾ.ಸೂರಜ್‌ ರೇವಣ್ಣ ಅವರೂ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವುದರಿಂದ ರೇವಣ್ಣ ನಿರಾಳರಾಗಿ 6ನೇ ವಿಜಯದ ನಿರೀಕ್ಷೆಯಲ್ಲಿದ್ದಾರೆ.

ಬಿಜೆಪಿ ಆಟಕ್ಕುಂಟು ಲೆಕ್ಕಕಿಲ್ಲ: ಈ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಇದುವರಗೆ ನಡೆದಿರುವ ಚುನಾವಣೆಯಲ್ಲಿ ಬಿಜೆಪಿ ಮತಗಳಿಗೆ 5 ಸಾವಿರ ದಾಟಿಲ್ಲ. ಈ ಬಾರಿ ವಕೀಲ ಜಿ.ದೇವರಾಜೇಗೌಡ ಅವರು ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದಾರೆ. ರೇವಣ್ಣ ಅವರ ಕಡು ವಿರೋಧಿಯಾಗಿ ಗುರ್ತಿಸಿಕೊಂಡಿರುವ ದೇವರಾಜೇಗೌಡ ಅವರು ಕೆಲವು ಗ್ರಾಮಗಳಲ್ಲಿ ಜೆಡಿಎಸ್‌ ಕಾರ್ಯಕರ್ತರ ಪ್ರತಿರೋಧದ ನಡುವೆಯೂ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next