Advertisement
ಬೆಂಗಳೂರು: ಹಿಂದಿನ ಕೆಲ ತಿಂಗಳ ಕಾಲ “ಗುಂಡಿ ಭಯ’ವಿಲ್ಲದೆ ರಾಜಧಾನಿ ರಸ್ತೆಗಳಲ್ಲಿ ನಿರಾತಂಕವಾಗಿ ಸಂಚರಿಸಿದ್ದ ನಾಗರಿಕರು ಈಗ ಮತ್ತೂಮ್ಮೆ ಜೀವ ಕೈಲಿಡಿದುಕೊಂಡು ವಾಹನ ಚಾಲನೆ ಮಾಡುವ ಸ್ಥಿತಿ. ಮುಂಗಾರು ಪೂರ್ವ ಮಳೆಗೆ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಸಾವಿರಾರು ಗುಂಡಿಗಳು ಸೃಷ್ಟಿಯಾಗಿದ್ದು, ಇವುಗಳ ಸಂಖ್ಯೆ ದಿನೇ ದಿನೆ ಹೆಚ್ಚಿತ್ತಿದೆ.
Related Articles
Advertisement
ಸಿಎಂ ಹೇಳಿದರೂ ಚುರುಕುಗೊಳ್ಳದ ಕಾಮಗಾರಿ: ಮಳೆಗಾಲದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ನಗರದಲ್ಲಿನ ತ್ಯಾಜ್ಯ, ರಸ್ತೆಗುಂಡಿ ಹಾಗೂ ಮಳೆ ಅನಾಹುತಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯ ಹೊರತಾಗಿಯೂ ಗುಂಡಿ ಮುಚ್ಚುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿಲ್ಲ.
ವೈಟ್‌ಟಾಪಿಂಗ್ ರಸ್ತೆಗಳು ಗುಂಡಿಮುಕ್ತ: ರಸ್ತೆಗುಂಡಿಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಗರದ 29 ರಸ್ತೆ ಮತ್ತು 6 ಜಂಕ್ಷನ್‌ಗಳು ಸೇರಿ ಒಟ್ಟು 93.47 ಕಿ.ಮೀ ಉದ್ದದ ರಸ್ತೆಗಳನ್ನು 972.69 ಕೊಟಿ ರು. ವೆಚ್ಚದಲ್ಲಿ ವೈಟ್‌ಟಾಪಿಂಗ್‌ಗೊಳಿಸಲು ಪಾಲಿಕೆ ಟೆಂಡರ್ ನೀಡಿದೆ. ಆ ಹಿನ್ನೆಲೆಯಲ್ಲಿ ನಗರದಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿರುವ ರಸ್ತೆಗಳು ಗುಂಡಿಮುಕ್ತವಾಗಿದ್ದು, ವಾಹನ ಸಂಚಾರಕ್ಕೆ ಅನುಕೂಲವಾಗಿದೆ. ಆದರೆ, ಮೊದಲ ಹಂತದ 36 ಕಿ.ಮೀ. ಕಾಮಗಾರಿಯ ಪೈಕಿ 10 ಕಿಲೋ ಮೀಟರ್‌ಗಳಷ್ಟು ಕಾಮಗಾರಿ ಮುಗಿದಿದ್ದು, ಕಾಮಗಾರಿ ಪೂರ್ಣಗೊಳ್ಳದ ರಸ್ತೆಗಳಲ್ಲಿ ಸಂಚರಿಸುವುದು ಕಷ್ಟಕರವಾಗಿದೆ.
ಗುಂಡಿ ಸೃಷ್ಟಿಯಾಗುವುದು ಹೇಗೆ?: ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ರಸ್ತೆ ಅಗೆದು ದುರಸ್ತಿಪಡಿಸದ ಹಾಗೂ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಗುಂಡಿಗಳು ಸೃಷ್ಟಿಯಾಗುತ್ತವೆ. ಇನ್ನು ವಾರ್ಡ್ ರಸ್ತೆಗಳಲ್ಲಿ ಸಾರ್ವಜನಿಕರು ಕುಡಿಯುವ ನೀರು, ಒಳಚರಂಡಿ ಸಂಪರ್ಕಕ್ಕಾಗಿ ರಸ್ತೆ ಅಗೆದು ವೈಜ್ಞಾನಿಕವಾಗಿ ಮುಚ್ಚುವುದಿಲ್ಲ. ಇನ್ನು ಮಳೆನೀರು ರಸ್ತೆಗಳಲ್ಲಿ ಹೆಚ್ಚಿನ ಸಮಯ ನಿಲ್ಲುವುದರಿಂದ ಡಾಂಬರೀಕರಣ ಕಿತ್ತುಬರಲಿದ್ದು, ನಂತರದಲ್ಲಿ ಗುಂಡಿಗಳಾಗಿ ಪರಿವರ್ತನೆಯಾಗಲಿದೆ.
ಕಟ್ಟಡ ತ್ಯಾಜ್ಯ ಹಾಕಬೇಡಿ: ಕೆಲವು ಕಡೆಗಳಲ್ಲಿ ಸಾರ್ವಜನಿಕರು ಹಾಗೂ ಪಾಲಿಕೆಯ ಅಧಿಕಾರಿಗಳು ಅವೈಜ್ಞಾನಿಕವಾಗಿ ಗುಂಡಿಗಳನ್ನು ಮುಚ್ಚುತ್ತಿದ್ದು, ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಸಾರ್ವಜನಿಕರು ಗುಂಡಿ ಸಮಸ್ಯೆಗಳಿಗೆ ಬೇಸತ್ತು ಕಟ್ಟಡ ತ್ಯಾಜ್ಯವನ್ನು ಗುಂಡಿಗಳಿಗೆ ಸುರಿಯುತ್ತಿದ್ದು, ಇದರಿಂದ ಗುಂಡಿ ಸಮರ್ಪಕವಾಗಿ ಮುಚ್ಚಿಕೊಳ್ಳದೆ ವಾಹನಗಳ ಸಂಚಾರಕ್ಕೆ ತೊಂದರೆಯುಂಟು ಮಾಡಲಿದೆ. ಹೀಗಾಗಿ ಕಟ್ಟಡ ತ್ಯಾಜ್ಯದಿಂದ ಗುಂಡಿ ಮುಚ್ಚದಂತೆ ಪಾಲಿಕೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವೈಜ್ಞಾನಿಕವಾಗಿ ಮುಚ್ಚುತ್ತಿಲ್ಲ: ಪಾಲಿಕೆಯ ಅಧಿಕಾರಿಗಳು ರಸ್ತಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು, ರಸ್ತೆ ಗುಂಡಿ ಕಾಣಿಸಿಕೊಂಡಾಗ ಹಳೆಯ ಹಾಗೂ ಹೊಸ ಪದರ ಕೂಡಿಕೊಳ್ಳುವಂತೆ ಲೇಪನ ಮಾಡಬೇಕು. ನಂತರದಲ್ಲಿ ವೈಜ್ಞಾನಿಕವಾಗಿ ದುರಸ್ತಿಪಡಿಸಬೇಕು. ಆದರೆ, ಪಾಲಿಕೆಯ ಸಿಬ್ಬಂದಿ ಬಹುತೇಕ ಕಡೆಗಳಲ್ಲಿ ಅವೈಜ್ಞಾನಿಕವಾಗಿ ಗುಂಡಿ ದುರಸ್ತಿ ಪಡಿಸುತ್ತಿರುವುದರಿಂದ ಗುಂಡಿ ಸಮಸ್ಯೆ ಮುಂದುವರಿಯುತ್ತಿದೆ ಎಂಬುದು ಸಂಚಾರ ತಜ್ಞರ ಅಭಿಪ್ರಾಯ.
ಕೇಂದ್ರ ಭಾಗದಲ್ಲಿ ಹೆಚ್ಚು ಗುಂಡಿ: ಇತ್ತೀಚೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರದಲ್ಲಿ 5,590 ಗುಂಡಿಗಳು ಇರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆ ಪೈಕಿ 1,598 ಗುಂಡಿಗಳನ್ನು ದುರಸ್ತಿಪಡಿಸಿದ್ದು, ಉಳಿದ 3,992 ಗುಂಡಿಗಳನ್ನು ಶೀಘ್ರ ದುರಸ್ತಿಪಡಿಸುವುದಾಗಿ ವರದಿ ನೀಡಿದ್ದಾರೆ. ವರದಿಯಂತೆ ಕೇಂದ್ರ ಭಾಗದ ಪೂರ್ವ, ದಕ್ಷಿಣ ಹಾಗೂ ಪಶ್ಚಿಮ ವಲಯಗಳಲ್ಲಿಯೇ 2500ಕ್ಕೂ ಹೆಚ್ಚಿನ ಗುಂಡಿಗಳಿರುವುದು ಕಂಡುಬಂದಿದ್ದು, ಕಳೆದ ಹತ್ತು ದಿನಗಳಲ್ಲಿ ಪೂರ್ವ ವಲಯದಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಗುಂಡಿಗಳು ಸೃಷ್ಟಿಯಾಗಿವೆ.
ಕಾರ್ಯಾಚರಣೆಗೆಯೇ ಆರಂಭವಾಗಿಲ್ಲ: ಬೊಮ್ಮನಹಳ್ಳಿ, ಯಲಹಂಕ ಹಾಗೂ ರಾಜರಾಜೇಶ್ವರಿನಗರ ವಲಯಗಳಲ್ಲಿ ನೂರಾರು ಗುಂಡಿಗಳು ಸೃಷ್ಟಿಯಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಪಾಲಿಕೆಯ ಅಧಿಕಾರಿಗಳು ಮಾತ್ರ ಗುಂಡಿಗಳಿಗೂ ತಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದು, ಈವರೆಗೆ ಒಂದೇ ಒಂದು ಗುಂಡಿ ದುರಸ್ತಿ ಕಾರ್ಯಕ್ಕೆ ಮುಂದಾಗದಿರುವುದು ತಿಳಿದುಬಂದಿದೆ.
10 ಇಂಚಿಗಿಂತ ಕಡಿಮೆ ಆಳದ ಗುಂಡಿ ದುರಸ್ತಿ ಹೇಗೆ?-ಮೊದಲಿಗೆ ಗುಂಡಿ ಸ್ವತ್ಛಗೊಳಿಸಿ ಜಲ್ಲಿ ಮಿಶ್ರಣ ಹಾಕಬೇಕು
-ಗುಂಡಿಯನ್ನು ಚೌಕ ಇಲ್ಲವೇ ಆಯಾತಾಕಾರದಲ್ಲಿ ದುರಸ್ತಿಪಡಿಸಬೇಕು
-12 ಎಂ.ಎಂ. ಗಾತ್ರದ ಬಿಟುಮಿನಸ್ ಕಾಂಕ್ರಿಟ್ ಹಾಕಬೇಕು
-ರೋಲರ್‌ನಿಂದ ಏಳೆಂಟು ಬಾರಿ ರೋಲ್ ಮಾಡಬೇಕು
-ಮಿಶ್ರಣ ಕೂಡಿಕೊಳ್ಳಲು ಕಾಲಾವಕಾಶ ನೀಡಬೇಕು.
-ಗುಂಡಿ ದುರಸ್ತಿಯಾದ ಕಡೆ ನೀರು ನಿಲ್ಲದಂತೆ ಕ್ರಮವಹಿಸಬೇಕು 10 ಇಂಚಿಗಿಂತ ಹೆಚ್ಚು ಆಳದ ಗುಂಡಿ ದುರಸ್ತಿ ಹೇಗೆ?
-ಮೊದಲು ಗುಂಡಿ ಸ್ವತ್ಛಗೊಳಿಸಿ ವೆಟ್‌ಮಿಕ್ಸ್ ಹಾಕಬೇಕು
-ನಂತರ ಪ್ರೈಮರ್ ಕೋಟ್ ಮಾಡಬೇಕು
-ಆನಂತರ 24 ಗಂಟೆ ಹಾಗೇ ಬಿಡಬೇಕು
-ಬಳಿಕ 20 ಎಂ.ಎಂ. ಜಲ್ಲಿಯ “ಡೆನ್ಸ್ ಬಿಟುಮಿನ್ ಮಿಕ್ಸ್’ ಹಾಕಬೇಕು
-ಜತೆಗೆ ಮಿಶ್ರಣ ಕೂಡಿಕೊಳ್ಳಲು ಕಾಲಾವಕಾಶ ನೀಡಬೇಕು
-ಉಷ್ಣಾಂಶ ಕಡಿಮೆಯಾಗುವವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ರಸ್ತೆಗುಂಡಿ ದುರಸ್ತಿ ವೇಳೆ ಅಧಿಕಾರಿಗಳು ಗಮನಿಸಬೇಕಾದ ಅಂಶಗಳು
-ಡಾಂಬರು ಮಿಶ್ರಣ ನಿಗದಿತ ಉಷ್ಣಾಂಶದಲ್ಲಿ ಬಳಸಿದರಷ್ಟೇ ಪರಿಣಾಮಕಾರಿ
-ಲೇಯಿಂಗ್ ಟೆಂಪರೇಚರ್, ರೋಲರ್ ಟೆಂಪರೇಚರ್ ಕಾಯ್ದುಕೊಳ್ಳಬೇಕು
-ಮಿಶ್ರಣ ಹಾಕುವ ಪ್ರಕ್ರಿಯೆ ವಿಳಂಬವಾದರೆ, ತಾಳಿಕೆ ಗುಣವೂ ಕಡಿಮೆಯಾಗುತ್ತದೆ
-ಗುಂಡಿ ದುರಸ್ತಿಯಾದ ತಕ್ಷಣ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು
-ದುರಸ್ತಿಯಾದ ಕೆಲ ದಿನಗಳವರೆಗೆ ಭಾರಿ ವಾಹನಗಳು ಸಂಚರಿಸದಂತೆ ನೋಡಿಕೊಂಡರೆ ಉತ್ತಮ ರಸ್ತೆಗುಂಡಿ ಕರಿ ನೆರಳು: ನಗರದಲ್ಲಿ ಕಳೆದ ವರ್ಷ ಸುರಿದ ಮಳೆಯಿಂದಾಗಿ ಸೃಷ್ಟಿಯಾದ ರಸ್ತೆಗುಂಡಿಗಳು ಮೂವರು ಅಮಾಯಕ ಜೀವಗಳನ್ನು ಬಲಿ ಪಡೆದಿದ್ದವು. ಮೈಸೂರು ರಸ್ತೆಯ ಮೇಲ್ಸೇತುವೆಯ ಮೂಲಕ ಮನೆಗೆ ಬೈಕ್‌ನಲ್ಲಿ ತೆರಳುವ ವೇಳೆ ಗುಂಡಿ ತಪ್ಪಿಸಲು ಹೋಗಿ ಅಂಥೋಣಿ ಜೋಸೆಫ್ (55) ಹಾಗೂ ಪತ್ನಿ ಸಹಾಯ್ ಮೇರಿ (52) ಎಂಬುವರು ಮೃತಪಟ್ಟಿದ್ದರು. ಅದೃಷ್ಟವಶಾತ್ 5 ವರ್ಷದ ಮೊಮ್ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಳು. ಅದೇ ರೀತಿ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಎದುರಾದ ಗುಂಡಿ ತಪ್ಪಿಸಲು ಬ್ರೇಕ್ ಹಾಕಿದಾಗ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಾಧಾ (34) ಎಂಬುವವರು ಮೃತಪಟ್ಟಿದ್ದರು. ರಸ್ತೆಗುಂಡಿ ವಿವರ (ಜೂ.8ವರೆಗಿನ ಮಾಹಿತಿ)
ವಲಯ ಗುಂಡಿಗಳು ಮುಚ್ಚಬೇಕಿರುವ ಗುಂಡಿಗಳು
-ಪಶ್ಚಿಮ 20 10
-ಮಹದೇವಪುರ 653 503
-ದಾಸರಹಳ್ಳಿ 60 30
-ಬೊಮ್ಮನಹಳ್ಳಿ 406 406
-ಯಲಹಂಕ 386 386
-ಪೂರ್ವ 812 712
-ದಕ್ಷಿಣ 1145 852
-ರಾಜರಾಜೇಶ್ವರಿನಗರ 15 15 * ವೆಂ.ಸುನೀಲ್ ಕುಮಾರ್