Advertisement

ಬೆರಳುಗಳಲ್ಲಿ ಪೆನ್ನು ಹಿಡಿದು ಮನಸ್ಸನ್ನು ಬರೆಯಿರಿ

08:36 PM Jun 10, 2021 | Team Udayavani |

ಕೈಬೆರಳುಗಳಲ್ಲಿ ಪೆನ್ನು, ಪೆನ್ಸಿಲ್‌ ಹಿಡಿದು ಕಾಗದದ ಹಾಳೆಯ ಮೇಲೆ ಬರೆಯುವುದು ಮನಸ್ಸಿನ ತೂಬು ತೆರೆದು ಹಗುರವಾಗಲು ಇನ್ನೊಂದು ಉತ್ತಮ ಮಾರ್ಗ.

Advertisement

ನಿಜ, ಇವತ್ತು ಫೋನ್‌ನಲ್ಲಿ ಮಾತನಾಡಬಹುದು, ಇಮೈಲ್‌ ಮಾಡಬಹುದು, ಎಸ್ಸೆಮ್ಮೆಸ್‌ ಕಳುಹಿಸಬಹುದು, ವ್ಯಾಟ್ಸ್‌ಆ್ಯಪ್‌ನಲ್ಲಿ ಗೀಚಬಹುದು. ಆದರೆ ಹಳೆಯ ವಿಧಾನವಾದ ಕೈಬರಹದಲ್ಲಿ ಬರೆಯುವುದು ಯೋಚನೆಗಳನ್ನು ಹೆಚ್ಚು ವ್ಯವಸ್ಥಿತವಾಗಿ ಕಟ್ಟಲು, ಒಳ್ಳೆಯದನ್ನು ಆಲೋಚಿಸಲು, ಯೋಚಿಸುವ ವಿಧಾನವನ್ನು ಬಲಪಡಿಸಲು ನೆರವಾಗುತ್ತದೆ. ಅಲ್ಲದೆ ಇದನ್ನೊಂದು ಹವ್ಯಾಸವಾಗಿ ರೂಢಿಸಿಕೊಂಡರೆ ಇದು ಮನಸ್ಸಿನ ಭಾವನೆಗಳನ್ನು ಚೌಕಟ್ಟು ಬದ್ಧವಾಗಿ ಬರೆಯುವ ವಿಧಾನವನ್ನು ಕಲಿಸುತ್ತದೆ. ಅದರಿಂದ ಕ್ರಮೇಣ ನಮ್ಮ ಆಲೋಚನಾ ಗತಿಯೂ ಬೇಕಾಬಿಟ್ಟಿಯಾಗಿ ಇರದೆ ಒಂದು ವ್ಯವಸ್ಥಿತ ಲಹರಿಯನ್ನು ಅನುಸರಿಸಲಾರಂಭಿಸುತ್ತದೆ.

ನಿಮಗಿದು ಓಬೀರಾಯನ ಕಾಲದ್ದಾಗಿ ಕಾಣಬಹುದು. ಆದರೆ ಗೆಳೆಯನಿಗೋ, ಗೆಳತಿಗೋ, ಸಂಬಂಧಿಕರಿಗೋ ಒಂದು ಪತ್ರವನ್ನು ಬರೆಯಿರಿ. ಇದರಲ್ಲಿ ನಿಮಗೆ ಅನಿಸಿದ್ದು, ನಿಮ್ಮ ಭವಿಷ್ಯದ ಯೋಚನೆಗಳು ಇತ್ಯಾದಿಗಳನ್ನು ಬರೆಯಿರಿ. ಇದರಿಂದ ಮನಸ್ಸು ಹಗುರವೂ ಆಗುತ್ತದೆ.

ದಿನವೂ ರಾತ್ರಿ ಡೈರಿ ಬರೆಯಬಹುದು. ಆಯಾ ದಿನದ ಖರ್ಚು ವೆಚ್ಚ ಲೆಕ್ಕಾಚಾರ ಇಲ್ಲಿ ಉದ್ದೇಶವಲ್ಲ. ಆಯಾ ದಿನ ಏನೇನು ಘಟಿಸಿತು, ಏನೆಲ್ಲ ಅನಿಸಿತು – ಇತ್ಯಾದಿ ಎಲ್ಲವನ್ನೂ ನಿರೂಪಣೆ ಮಾಡಿ. ಇದು ಪ್ರತೀ ದಿನ ರಾತ್ರಿ ಮಲಗುವ ಮುಂಚಿನ ಪರಿಪಾಠವಾಗಲಿ. ಇದರಿಂದ ಎರಡು ಲಾಭ – ಒಂದು, ಈಗ ಮನಸ್ಸು ಮುಕ್ತವಾಗುತ್ತದೆ. ಇನ್ನೊಂದು ಹಲವು ವರ್ಷಗಳು ಕಳೆದ ಬಳಿಕ ನಾವು ನಡೆದು ಬಂದ ದಾರಿಯನ್ನು ಅವಲೋಕಿಸಲು ಸಾಧ್ಯವಾಗುತ್ತದೆ.

ಕೈಬರಹದ ಪತ್ರ, ಡೈರಿ ಬರೆಯುವುದಕ್ಕೆ ತಗಲುವ ಸಮಯ, ಶ್ರಮ, ಆಲೋಚಿಸಲು ನಾವು ಹೂಡುವ ಪ್ರಯತ್ನ – ಇವೆಲ್ಲವೂ ಒಂದು ಎಸ್ಸೆಮ್ಮೆಸ್‌, ವ್ಯಾಟ್ಸ್‌ಆ್ಯಪ್‌ ಮೆಸೇಜ್‌, ಫೇಸ್‌ಬುಕ್‌ ಬರಹಕ್ಕಿಂತ ಗಮನಾರ್ಹವಾದದ್ದು, ಸಕಾರಾತ್ಮಕ ಶಕ್ತಿಯನ್ನು ಕೊಡುವಂಥದ್ದು.

Advertisement

ನಮ್ಮ ಪತ್ರಕ್ಕೆ ಉತ್ತರವಾಗಿ ಆ ಕಡೆಯಿಂದ ಬರುವ ಪತ್ರ ತುಂಬಾ ಉಲ್ಲಾಸವನ್ನೂ ಸಾಂತ್ವನವನ್ನೂ ಒದಗಿಸಬಲ್ಲುದು.

ಅಡುಗೆ ಮತ್ತಿತರ ದೈನಂದಿನ ಚಟುವಟಿಕೆಗಳಲ್ಲಿ ಎಲ್ಲರೂ ಪಾಲ್ಗೊಳ್ಳುವುದರಿಂದ ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ, ಆತ್ಮೀಯತೆ ಹೆಚ್ಚುತ್ತದೆ. ಬುದ್ಧಿಶಕ್ತಿ ಹೆಚ್ಚಿಸುವ ಚೆನ್ನೆಮಣೆ, ಚೆಸ್‌ನಂತಹ ಆಟ ಆಡಬಹುದು. ಹಿಂದೆ ಸಂವಹನಕ್ಕೆ ಸೇತುವೆಯಾಗಿದ್ದ ಪತ್ರ ಬರೆಯುವ ರೂಢಿಯನ್ನು ಮತ್ತೆ ಆರಂಭಿಸಬಹುದು. ಆತ್ಮೀಯ ಸ್ನೇಹಿತರು, ದೂರದಲ್ಲಿರುವ ಸಂಬಂಧಿಕರಿಗೆ ಪತ್ರ ಬರೆಯಬಹುದು. ಇದು ನಿಮ್ಮಲ್ಲಿ ಈ ಸಮಯದಲ್ಲಿ ಇನ್ನಷ್ಟು ಚೈತನ್ಯವನ್ನು ಉಂಟುಮಾಡಬಲ್ಲುದು.ಅಂಜಲಿ ಬಿನೋಯ್‌, ಮನಃಶಾಸ್ತ್ರಜ್ಞರು, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next