Advertisement
ಉಪ ಚುನಾವಣೆಯ ಗೆಲುವಿನಿಂದಾಗಿ ಸಿದ್ದರಾಮಯ್ಯ ಅವರಿಗೆ ಕೊಂಚ ಶಕ್ತಿ ಬಂದಿದ್ದು, ತಾನು ಹೇಳಿದವರೇ ಪಕ್ಷದ ಅಧ್ಯಕ್ಷರಾಗಬೇಕು ಎಂದು ಪಟ್ಟು ಹಿಡಿಯಲು ಅವಕಾಶ ಸೃಷ್ಟಿಯಾ ದಂತಾಗಿದೆ. ಆದರೆ, ಎರಡೂ ಉಪ ಚುನಾವಣೆಯ ಗೆಲುವಿನಲ್ಲಿ ತಮ್ಮ ಪಾತ್ರವೂ ಮುಖ್ಯವಾಗಿತ್ತು ಎನ್ನುವುದನ್ನು ಬಿಂಬಿಸಿಕೊಳ್ಳುವ ಪ್ರಯತ್ನವನ್ನೂ ಸಾಕಷ್ಟು ನಾಯಕರು ಮಾಡುತ್ತಿದ್ದಾರೆ. ವಿಶೇಷ ವೆಂದರೆ ಇವರೆಲ್ಲರೂ ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟವರೇ.
Related Articles
Advertisement
ಡಿಸಿಎಂ ಹುದ್ದೆಗೆ ಪಟ್ಟು: ಇನ್ನು ಪರಮೇಶ್ವರ್ ಅವರು ಮಂತ್ರಿಸ್ಥಾನ ಹೋದರೂ ಚಿಂತೆಯಿಲ್ಲ. ಇದೊಂದು ಚುನಾವಣೆ ತನ್ನ ನೇತೃತ್ವದಲ್ಲಿಯೇ ನಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಶ್ರೀನಿವಾಸ ಪ್ರಸಾದ್ ಪಕ್ಷ ತೊರೆದಿರುವುದರಿಂದ ಈ ಸಂದರ್ಭದಲ್ಲಿ ದಲಿತ ನಾಯಕನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಅದು ಸಮುದಾಯಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂಬ ವಾದವನ್ನು ಹೈಕಮಾಂಡ್ ಮುಂದೆ ಮಂಡಿಸಲು ತಯಾರಾಗಿದ್ದಾರೆ.
ಈಗಾಗಲೇ ಅಧ್ಯಕ್ಷರಾಗಿ ಆರು ವರ್ಷಗಳು ಕಳೆದಿರುವುದರಿಂದ ಹೈ ಕಮಾಂಡ್ ಕುರ್ಚಿ ಬಿಡಲು ಸೂಚನೆ ನೀಡಿದರೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಮುಂದಿಡಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಡಿಸಿಎಂ ಬೇಡಿಕೆಯ ಲೆಕ್ಕಾಚಾರಕ್ಕೆ ಖರ್ಗೆ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಡಿ.ಕೆ. ಶಿವಕುಮಾರ್ ತಂತ್ರ: ಪರಮೇಶ್ವರ್ ಅವರಿಗೆ ಪರ್ಯಾಯ ವಾಗಿ ತಮ್ಮದೇ ಆದ ಲೆಕ್ಕಾಚಾರ ಮತ್ತು ಪ್ರಯತ್ನ ನಡೆಸಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷ ಗಾದಿಗೇರಲು ಯಾವ ತ್ಯಾಗಕ್ಕೂ ಸಿದ್ದ ಎನ್ನುವ ಸಂದೇಶ ರವಾನಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಪಕ್ಷ ತೊರೆದಿದ್ದು, ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಸಮುದಾಯಕ್ಕೆ ನಾಯಕರಿಲ್ಲ ಎಂಬ ಕೊರಗಿದೆ. ಅದನ್ನು ಸರಿದೂಗಿಸಲು ಅಧ್ಯಕ್ಷ ಸ್ಥಾನ ತನಗೇ ನೀಡಬೇಕೆಂಬ ಲೆಕ್ಕಾಚಾರ ಹಾಕಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಪೈಪೋಟಿ ನೀಡಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯ ತಮಗಿದೆ ಎಂಬುವುದನ್ನು ಹೈ ಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.
ಆದರೆ, ಇವರ ಪ್ರಯತ್ನಕ್ಕೆ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರ ಬೆಂಬಲ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಡಿ.ಕೆ. ಶಿವಕುಮರ್ ಕೈ ಪಕ್ಷದ ಸಾರಥ್ಯ ನೀಡಿದರೆ, ಯಾರ ಕೈಗೂ ಸಿಗದಷ್ಟು ಎತ್ತರಕ್ಕೆ ಬೆಳೆಯುತ್ತಾರೆ. ಅವರನ್ನು ನಿಯಂತ್ರಿಸುವುದು ಕಷ್ಟು ಎಂದು ಪಕ್ಷದ ಹಿರಿಯ ನಾಯಕರೇ ಹೈಕಮಾಂಡ್ ಕಿವಿಯೂದುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಹೊರತಾಗಿಯೂ ಡಿ.ಕೆ. ಶಿವಕುಮಾರ್ ಹೈ ಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವ ಬಳಸಿದ್ದಾರೆ.