Advertisement
ಏರ್ ಆ್ಯಂಬುಲೆನ್ಸ್ ಹಾಗೂ ಗಣ್ಯರಿಗೆ ಅನುಕೂಲಕ್ಕಾಗಿ ಹೆಲಿಪ್ಯಾಡ್ ನಿರ್ಮಿಸಲು ಪಾಲಿಕೆಯಿಂದ ರೂಪಿಸಿರುವ ಯೋಜನೆಗೆ ಪಾಲಿಕೆ ಸದಸ್ಯರು ಹಾಗೂ ಹಲವು ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ಅದರ ನಡುವೆಯೂ ಎಂಟೂ ವಲಯಗಳಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಜಾಗ ಗುರುತಿಸಿರುವ ಬಿಬಿಎಂಪಿ, ಶೀಘ್ರದಲ್ಲಿಯೇ ಟೆಂಡರ್ ಆಹ್ವಾನಿಸಲು ಸಿದ್ಧತೆ ನಡೆಸಿದೆ.
Related Articles
Advertisement
ಜಾಗ ಹೊಡೆಯುವ ಸ್ಕೀಂ: ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಲಿ ಜಾಗಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಕೋಟ್ಯಂತರ ರೂಪಾಯಿ ಬೆಲೆಬಾಳುತ್ತದೆ. ಆ ಹಿನ್ನೆಲೆಯಲ್ಲಿ ಎಂಟು ವಲಯಗಳಲ್ಲಿ ಜಾಗವನ್ನು ಖಾಸಗಿಯವರಿಗೆ ಹೆಲಿಪ್ಯಾಡ್ ನಿರ್ಮಿಸಲು ಹಸ್ತಾಂತರಿಸುವ ಮೂಲಕ ಕೋಟ್ಯಂತರ ರೂ. ಬೆಲೆ ಬಾಳುವಂತಹ ಜಾಗ ಹೊಡೆಯಲು ಈ ಯೋಜನೆ ಜಾರಿಗೆ ಪಟ್ಟು ಹಿಡಿದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಗರದಲ್ಲಿನ ತ್ಯಾಜ್ಯ ವಿಲೇವಾರಿ, ತ್ಯಾಜ್ಯ ಸಂಸ್ಕರಣೆ ಘಟಕಗಳು ನಿರ್ವಹಣೆ, ರಾಜಕಾಲುವೆಗಳ ದುರಸ್ತಿ ಹಾಗೂ ರಸ್ತೆಗುಂಡಿ ಅನಾಹುತಗಳಂತಹ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳದ ಪಾಲಿಕೆಯ ಅಧಿಕಾರಿಗಳು, ಹೆಲಿಪ್ಯಾಡ್‌ನಂತಹ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಉತ್ಸಾಹ ತೋರುತ್ತಾರೆ ಎಂದು ಹಿರಿಯ ಪಾಲಿಕೆ ಸದಸ್ಯರು ಆರೋಪಿಸಿದ್ದಾರೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ಕೇಂದ್ರದ ನಾಗರೀಕ ವಿಮಾನಯಾನ ಸಂಸ್ಥೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ ಮೇಯರ್ ಸಂಪತ್‌ರಾಜ್ ಈಗಾಗಲೇ ನಾಗರೀಕ ವಿಮಾನಯಾನ ಡಿಜಿ ಅವರೊಂದಿಗೆ ಚರ್ಚೆ ನಡೆಸಿ, ಯೋಜನೆಯ ಉಪಯುಕ್ತತೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಪಾಲಿಕೆಯ ಎಂಟು ವಲಯಗಳಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಯೋಜನೆಗೆ ಅಧಿಕೃತವಾಗಿ ಆಯುಕ್ತರಿಂದ ಯಾವುದೇ ಆದೇಶವಾಗಿಲ್ಲ. ನೇರವಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸುಮೋಟೋ ಮೂಲಕ ಕೌನ್ಸಿಲ್‌ಗೆ ಮುಂದೆ ಮಂಡಿಸಿದ್ದು, ನಂತರದಲ್ಲಿ ಪಾಲಿಕೆಯ ಬಜೆಟ್‌ನಲ್ಲಿ ಯೋಜನೆಯನ್ನು ಸೇರಿಸಲಾಗಿದೆ. ಆದರೆ, ಹೆಲಿಪ್ಯಾಡ್‌ನ್ನು ಎಷ್ಟು ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತದೆ, ಎಷ್ಟು ವೆಚ್ಚ ಹಾಗೂ ನಿರ್ವಹಣೆಯಂತಹ ಯಾವುದೇ ವಿವರಗಳನ್ನು ಬಜೆಟ್‌ನಲ್ಲಿ ನೀಡಿಲ್ಲ.
ಏರ್ ಆ್ಯಂಬುಲ್ಸೆನ್ ಸೇವೆ: ಹೆಲಿಪ್ಯಾಡ್ ನಿರ್ಮಾಣದ ನಂತರದಲ್ಲಿ ಏರ್ ಟ್ಯಾಕ್ಸಿ ಹಾಗೂ ಖಾಸಗಿ ಆ್ಯಂಬುಲೆನ್ಸ್ ಸೇವೆ ಆರಂಭಿಸಲು ಪಾಲಿಕೆ ಚಿಂತನೆ ನಡೆಸಿದ್ದು, ಈಗಾಗಲೇ ಕೆಲವೊಂದು ಖಾಸಗಿ ಸಂಸ್ಥೆಗಳು ಸೇವೆ ಒದಗಿಸಲು ಮುಂದೆ ಬಂದಿವೆ. ಇದರೊಂದಿಗೆ ಕೆಲ ಸಂಸ್ಥೆಗಳು ಈಗಾಗಲೇ ನಗರದಲ್ಲಿ ಏರ್ ಟ್ಯಾಕ್ಸಿ ಆರಂಭಿಸಲು ಸಿದ್ಧತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಏರ್ ಟ್ಯಾಕ್ಸಿ ಸೇವೆಗೂ ಅನುಕೂಲವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬಳಕೆಯಾಗದ ಹೆಲಿಪ್ಯಾಡ್‌ಗಳು: ನಗರದಲ್ಲಿ ನಿರ್ಮಾಣವಾಗುವ 20ಕ್ಕಿಂತ ಹೆಚ್ಚು ಮಹಡಿಗಳ ಎಲ್ಲ ಕಟ್ಟಡಗಳಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸುವುದು ಕಡ್ಡಾಯವಾಗಿದೆ. ಅದರಂತೆ ನಗರದಲ್ಲಿ ಈಗಾಗಲೇ ನೂರಾರು ಕಟ್ಟಡಗಳಲ್ಲಿ ಹೆಲಿಪ್ಯಾಡ್‌ಗಳು ನಿರ್ಮಾಣವಾಗಿವೆ. ಆದರೆ, ಈವರೆಗೆ ಹೆಚ್ಚಿನ ಕಟ್ಟಡಗಳಲ್ಲಿನ ಹೆಲಿಪ್ಯಾಡ್‌ಗಳು ಒಮ್ಮೆಯೂ ಬಳಕೆಯಾಗಿಲ್ಲ. ಹೀಗಿದ್ದರೂ, ಪ್ರತಿ ಹೆಲಿಪ್ಯಾಡ್‌ಗೆ 25 ರಿಂದ 30 ಲಕ್ಷ ರೂ. ವೆಚ್ಚದಂತೆ ಸುಮಾರು 3 ಕೋಟಿ ರೂ.ಗಳನ್ನು ಪೋಲು ಮಾಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದಾಗಿವೆ ಎಂಬ ಆರೋಪಗಳು ಕೇಳಿಬಂದಿವೆ.
ನಗರದಲ್ಲಿ ರಸ್ತೆ, ತ್ಯಾಜ್ಯ, ಬೀದಿ ದೀಪ, ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುವುದು ಪಾಲಿಕೆಯ ಕೆಲಸವಾಗಿದೆ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಸಾರ್ವಜನಿಕ ತೆರಿಗೆ ಹಣ ಪೋಲು ಮಾಡಲು ಮುಂದಾಗಿದ್ದು, ಪಾಲಿಕೆಯ ಕೋಟ್ಯಂತರ ರೂ. ಬೆಲೆ ಬಾಳುವ ಜಾಗಗಳನ್ನು ಹೆಲಿಪ್ಯಾಡ್ ಯೋಜನೆ ಹೆಸರಿನಡಿಯಲ್ಲಿ ಖಾಸಗಿಯವರಿಗೆ ನೀಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. -ಪದ್ಮನಾಭರೆಡ್ಡಿ, ಪಾಲಿಕೆಯ ಪ್ರತಿಪಕ್ಷ ನಾಯಕ * ವೆಂ.ಸುನೀಲ್‌ಕುಮಾರ್