Advertisement

10ಕ್ಕಿಂತ ಹೆಚ್ಚು ಹಳೇ ನೋಟು ಇಟ್ಟುಕೊಂಡರೆ 10 ಸಾವಿರ ರೂ. ದಂಡ

03:45 AM Mar 02, 2017 | Team Udayavani |

ನವದೆಹಲಿ: ಇನ್ನು ನೀವು ಅಮಾನ್ಯಗೊಂಡಿರುವ 500 ಮತ್ತು 1,000 ಮುಖಬೆಲೆಯ 10ಕ್ಕಿಂತ ಹೆಚ್ಚು ನೋಟುಗಳನ್ನು ಇಟ್ಟುಕೊಂಡರೆ, ಕನಿಷ್ಠ 10 ಸಾವಿರ ರೂ. ದಂಡ ತೆರಬೇಕಾಗುತ್ತದೆ.

Advertisement

ಕಳೆದ ತಿಂಗಳು ಸಂಸತ್‌ನಲ್ಲಿ ಅಂಗೀಕಾರಗೊಂಡಿದ್ದ ದಿ ಸ್ಪೆಸಿಫೈಡ್‌ ಬ್ಯಾಂಕ್‌ ನೋಟ್ಸ್‌ ಆ್ಯಕ್ಟ್, 2017ಗೆ ಸಂಬಂಧಿಸಿದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಬುಧವಾರ ಹೊರಡಿಸಿದೆ. ಅದರಂತೆ, ಒಬ್ಬ ವ್ಯಕ್ತಿಯು 10ಕ್ಕಿಂತ ಹೆಚ್ಚು ಅಮಾನ್ಯಗೊಂಡ ನೋಟುಗಳನ್ನು ಇಟ್ಟುಕೊಂಡರೆ, 10 ಸಾವಿರ ರೂ. ಅಥವಾ ಅವನಲ್ಲಿರುವ ನಗದಿನ 5 ಪಟ್ಟು ದಂಡವನ್ನು ಪಾವತಿಸಬೇಕು. ಅಧ್ಯಯನದ ಉದ್ದೇಶಕ್ಕಾಗಿ ನೋಟುಗಳನ್ನು ಬಳಸುವವರು 25ಕ್ಕಿಂತ ಹೆಚ್ಚು ಇಟ್ಟುಕೊಳ್ಳುವಂತಿಲ್ಲ.

ಇನ್ನು ಅಪನಗದೀಕರಣದ ಅವಧಿಯಲ್ಲಿ ವಿದೇಶಗಳಲ್ಲಿ ಇದ್ದ ಭಾರತೀಯರಿಗೆ ಹಳೇ ನೋಟುಗಳ ಠೇವಣಿಗೆ ಮಾ.31ರವರೆಗೆ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ, ಇವರು ಸುಳ್ಳು ಮಾಹಿತಿ ನೀಡಿ ಠೇವಣಿ ಇಡಲು ಮುಂದಾಗಿದ್ದು ಗೊತ್ತಾದರೆ, ಅಂಥವರಿಗೆ 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಫೆ.27ರಂದು ಈ ಕಾನೂನಿಗೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅಂಕಿತ ಹಾಕಿದ್ದರು.

ನೆಟ್‌ ಬ್ಯಾಂಕಿಂಗ್‌ಗೆ 31ರ ಗಡುವು
ಡಿಜಿಟಲ್‌ ಪಾವತಿ ಮತ್ತು ಆನ್‌ಲೈನ್‌ ವಹಿವಾಟಿಗೆ ಅನುಕೂಲವಾಗುವಂತೆ ಎಲ್ಲ ಬ್ಯಾಂಕ್‌ ಖಾತೆಗಳಿಗೆ ನೆಟ್‌ಬ್ಯಾಂಕಿಂಗ್‌ ಸೌಲಭ್ಯವನ್ನು ಮಾ.31ರೊಳಗೆ ಕಲ್ಪಿಸುವಂತೆ ದೇಶಾದ್ಯಂತದ ಬ್ಯಾಂಕುಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಜತೆಗೆ, ಎಲ್ಲ ಖಾತೆಗಳಿಗೂ ಆಧಾರ್‌ ಲಿಂಕ್‌ ಮಾಡುವಂತೆ ತಿಳಿಸಿದೆ. ಡಿಜಿಟಲ್‌ ವಹಿವಾಟು ಸುಲಭವಾಗಲು ಹಾಗೂ ಹೊಸ ಹೊಸ ಗ್ರಾಹಕರು ಡಿಜಿಟಲ್‌ ಪಾವತಿಯತ್ತ ಮುಖಮಾಡಲು ಇದು ಸಹಾಯಕವಾಗಲಿದೆ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next