Advertisement

ಕುಡಿಯುವ ನೀರಿಗೆ ತತ್ವಾರ

01:22 PM Apr 28, 2019 | Naveen |

ಹೊಳಲ್ಕೆರೆ: ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಮುಗಿಲು ಮುಟ್ಟಿದ್ದು, ಹಣ ಕೊಟ್ಟರು ಕುಡಿಯುವ ನೀರು ದೊರೆಯದಂತಾಗಿದೆ. ಪಟ್ಟಣದಲ್ಲಿರುವ ಪಟ್ಟಣ ಪಂಚಾಯತ್‌ನ ಜಲಮೂಲಗಳು ಬತ್ತಿ ಹೋಗಿದ್ದು, ನಾಗರಿಕರನ್ನು ಕಂಗೆಡಿಸಿದೆ.

Advertisement

ಕಳೆದ ನಾಲ್ಕೈದು ವರ್ಷಗಳಿಂದ ಕುಡಿಯುವ ನೀರಿಲ್ಲದೆ ಜನರು ತತ್ತರಿಸುತ್ತಿದ್ದಾರೆ. ಆದರೆ, ಕಳೆದ ಐದಾರು ತಿಂಗಳಿಂದ ಉಂಟಾಗಿರುವ ವಿಪರೀತ ನೀರಿನ ದಾಹ ತೀರಿಸಲು ಪಟ್ಟಣ ಪಂಚಾಯತ್‌ ಹರಸಹಾಸ ಮಾಡುತ್ತಿದೆ. ಸರಕಾರ ಸಮರ್ಪಕ ನೀರಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದರೂ ಶುದ್ಧ ನೀರು ಮಾತ್ರ ಮರೀಚಿಕೆಯಾಗಿದೆ.

ಬತ್ತಿದ ಅಂತರ್ಜಲ: ಪಟ್ಟಣದಲ್ಲಿ 16 ವಾರ್ಡ್‌ ಗಳಿವೆ. 16 ಸಾವಿರ ಜನಸಂಖ್ಯೆ ಇದೆ. ಪಟ್ಟಣದ ನಾಗರಿಕರಿಗೆ ನೀರು ಫೂರೈಸಲು 9 ಶುದ್ಧ ನೀರಿನ ಘಟಕ ಹಾಕಲಾಗಿದೆ. 30 ಕೊಳವೆಬಾವಿ ಕೊರೆಸಿದೆ. ಅದರಲ್ಲಿ 15 ಬೋರ್‌ಗಳಲ್ಲಿ ಅಂತರ್ಜಲ ಬತ್ತಿ ನೀರಿಲ್ಲದೆ ಬೀಕೋ ಎನ್ನುತ್ತಿವೆ.

ಅಸಮರ್ಪಕ ನಿರ್ವಹಣೆ: 15 ಕೊಳವೆಬಾವಿಗಳಲ್ಲಿ ಸಾಕಷ್ಟು ನೀರಿದ್ದರೂ ಪಟ್ಟಣ ಪಂಚಾಯತ್‌ ಅಸಮರ್ಪಕ ನಿರ್ವಹಣೆಯಿಂದಾಗಿ ನಿಗದಿತ ಸಮಯದಲ್ಲಿ ನಾಗರಿಕರಿಗೆ ಪೂರೈಸದೆ ಹಾಹಾಕಾರ ಸೃಷ್ಟಿಯಾಗಿದೆ. ಈಚೆಗೆ ಹೊಸದಾಗಿ 7 ಕೊಳವೆಬಾವಿ ಹಾಕಿಸಿದ್ದರೂ ಪೈಪ್‌ಲೈನ್‌ ಕಾಮಗಾರಿ ಪೂರ್ತಿಯಾಗದ ಹಿನ್ನಲೆಯಲ್ಲಿ ನೀರಿಲ್ಲದೆ ಜನರು ಪರದಾಡುವಂತಾಗಿದೆ.

ಅಲ್ಲಲ್ಲಿ ಒಡೆಯುತ್ತಿರುವ ಪೈಪ್‌ಲೈನ್‌: ಶಾಂತಿಸಾಗರದ ಶಾಶ್ವತ ನೀರಿನ ಯೋಜನೆ ಇದ್ದರೂ ಜನರಿಗೆ ಪ್ರಯೋಜವಾಗುತ್ತಿಲ್ಲ. ಪಟ್ಟಣ ಪಂಚಾಯತ್‌ ಅಸಮರ್ಪಕ ನಿರ್ವಹಣೆಯಿಂದಾಗಿ ಪದೆಪದೇ ಒಡೆದು ಹೋಗುತ್ತಿದೆ. ಇದರಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ.

Advertisement

ನೀರಗಳ್ಳರ ಹಾವಳಿ: ಶಾಂತಿಸಾಗರದಿಂದ ಹೊಳಲ್ಕೆರೆ ತನಕ ಹಾಕಿರುವ ಪೈಪ್‌ಗ್ಳನ್ನು ಅಲ್ಲಲ್ಲಿ ಹೊಡೆದು ನೀರು ಕದಿಯುವ ಕಳ್ಳರ ಹಾವಳಿ ಹೆಚ್ಚಾಗಿದೆ. ಅಲ್ಲದೆ ದುರಸ್ತಿಗೆ ಅನುದಾನ ಕೊರತೆ, ರೀಪೆರಿ ಮಾಡುವ ಕಾರ್ಮಿಕ ಕೊರತೆ ಪರಿಣಾಮ ವರ್ಷದುದ್ದಕ್ಕೂ ಒಂದಲ್ಲ ಒಂದು ಕಾರಣದಿಂದ ತಿಂಗಳೂ ತುಂಬಿದರೂ ಪಟ್ಟಣಕ್ಕೆ ನೀರು ಪೂರೈಕೆಯಾಗುತ್ತಿಲ್ಲ.

2 ಘಟಕ ಕಾರ್ಯನಿರ್ವಹಣೆ: 9 ಶುದ್ಧ ನೀರಿನ ಘಟಕದಲ್ಲಿ ಕೇವಲ 2 ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಬಾಕಿ 7 ಘಟಕಗಳು ಹಾಕಿ ಒಂದೇ ವರ್ಷದಲ್ಲಿ ದುರಸ್ತಿಗೆ ಬಂದಿದ್ದು, ಲಕ್ಷಾಂತರ ರೂ. ಅನುದಾನ ಶುದ್ಧ ನೀರಿನ ಘಟಕದ ದುರಸ್ತಿಗೆ ವ್ಯಯಿಸುತ್ತಿದ್ದಾರೆ. ಆದರೆ, ನೀರು ಪೂರೈಸುವಲ್ಲಿ ಮಾತ್ರ ಶೂನ್ಯ ಸಾಧನೆ.

ಕುಡಿವ ನೀರಿಗಾಗಿ ಅಲೆದಾಟ: ಪಟ್ಟಣ ನಿವಾಸಿಗಳು ಶುದ್ಧ ನೀರಿಗಾಗಿ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. 16 ಸಾವಿರ ಜನರಿಗೆ ಇರುವ 2 ಶುದ್ಧ ನೀರಿನ ಘಟಕದಲ್ಲಿರುವ 2 ಸಾವಿರ ಲೀ.ನಲ್ಲಿ 20 ಲೀ. ನೀರು ತುಂಬಿಸಿಕೊಳ್ಳಲು ನಾಗರಿಕರು ದಿನದ 24 ಗಂಟೆ ಕಾಲ ಶುದ್ಧ ನೀರಿನ ಘಟಕಕ್ಕೆ ಅಲೆದಾಡಬೇಕಾಗಿದೆ. ರಾತ್ರಿ ಹಗಲು ಎನ್ನದೆ ನೀರಿಗಾಗಿ ಪರದಾಡುತ್ತಿದ್ದಾರೆ. ಉಳ್ಳವರು ಅಕ್ಕಪಕ್ಕದ ಗ್ರಾಮಗಳಿಂದ ಟ್ಯಾಕ್ಟರ್‌ ಮೂಲಕ ನೀರು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಪಟ್ಟಣದಲ್ಲಿ ತಲೆದೋರಿರುವ ನೀರಿನ ಹಾಹಾಕಾರದ ಪರಿಹಾರಕ್ಕೆ ಶಾಸಕರು ಸೇರಿದಂತೆ ಯರೊಬ್ಬ ಜನಪ್ರತಿನಿಧಿಗಳು ಮುಂದಾಗಿಲ್ಲ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ ಎನ್ನುವ ನಾಗರಿಕರು ಪ್ರತಿಭಟಿಸಿರಲಿಲ್ಲ. ನೀರಿಲ್ಲದಿದ್ದರೂ ಅಧಿಕಾರಿಗಳನ್ನು ಕೇಳದಂತಂಹ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಲ್ಲಿರುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ತಕ್ಷಣ ಮುಂದಾಗಬೇಕು. ನೀರು ಪೂರೈಸಿ ಸಮಸ್ಯೆಗೆ ಮುಕ್ತಿ ನೀಡಲು ಜಿಲ್ಲಾಧಿಕಾರಿ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ನಾಗಕರಿಕರು ಒತ್ತಾಯಿಸಿದ್ದಾರೆ.

ಬದಲಿ ವ್ಯವಸ್ಥೆಗೆ ಚಿಂತನೆ
ಬೋರ್‌ಗಳಲ್ಲಿ ನೀರಿಲ್ಲದ ಪರಿಣಾಮ ಶುದ್ಧ ನೀರಿನ ಘಟಕ ಸಂಪೂರ್ಣ ನಿಂತಿವೆ. ಬದಲಿ ವ್ಯವಸ್ಥೆ ಕೈಗೊಳ್ಳಲು ಚಿಂತನೆ ನಡೆಸಿದೆ. ಖಾಸಗಿ ಕೊಳವೆಬಾವಿ ವಶಕ್ಕೆ ಪಡೆದು ಸಾರ್ವಜನಿಕರಿಗೆ ನೀರು ನೀಡುವ ಕ್ರಮ ಕೈಗೊಳ್ಳಲಾಗುತ್ತೆದೆ.
•ಕೆ. ನಾಗರಾಜ್‌, ತಹಶೀಲ್ದಾರ್‌ ಹೊಳಲ್ಕೆರೆ.

ಶೀಘ್ರ ಪಟ್ಟಣಕ್ಕೆ ನೀರು
ಶಾಂತಿ ಸಾಗರದ ನೀರಿನ ಪೈಪ್‌ಲೈನ್‌ ದುರಸ್ತಿಯಾಗುತ್ತಿದೆ. ಇನ್ನೊಂದು ದಿನಗಳಲ್ಲಿ ನೀರು ಪಟ್ಟಣಕ್ಕೆ ಹರಿಯಲಿದೆ. ನೀರಿನ ಅಗತ್ಯತೆ ನೋಡಿಕೊಂಡು ಹತ್ತು ಹದಿನೈದು ದಿನಗಳಿಗೊಮ್ಮೆ 16 ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡುತ್ತೇವೆ.
ವೆಂಕಟೇಶ್‌, ಪಪಂ ಮುಖ್ಯಾಧಿಕಾರಿ.

ಎಸ್‌. ವೇದಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next