Advertisement

ಶಿಕ್ಷಣ ಕ್ಷೇತ್ರ ಭ್ರಷ್ಟಾಚಾರ ನಿರ್ಮೂಲನೆಯೇ ಗುರಿ

04:45 PM Jan 31, 2020 | Team Udayavani |

ಹೊಳಲ್ಕೆರೆ: ಶಿಕ್ಷಣ ಇಲಾಖೆಯ ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತು ಹಾಕುವ ಮೂಲಕ ಭ್ರಷ್ಟಾಚಾರ ಮುಕ್ತ ಇಲಾಖೆಯನ್ನಾಗಿ ರೂಪಿಸಿ ಗುಣಾತ್ಮಕ ಶಿಕ್ಷಣ ದೊರಕಿಸಲು ಪ್ರಯತ್ನ ಮಾಡುವುದಾಗಿ ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

Advertisement

ಗುರುವಾರ ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಶಾಲಾ ಕಾಲೇಜುಗಳಲ್ಲಿರುವ ಸಮಸ್ಯೆಗಳನ್ನು ಪರಿಶೀಲಿಸಿ ಶಿಕ್ಷಕರ ಕುಂದುಕೊರತೆ ಆಲಿಸಿ ಅವರು ಮಾತನಾಡಿದರು. ಶಿಕ್ಷಣ ಸಚಿವ ಸುರೇಶ್‌ಕುಮಾರ್‌ರವರು ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಮೂಲಕ ಸಕಾಲದಲ್ಲಿ ಎಲ್ಲಾ ರೀತಿಯ ಶೈಕ್ಷಣಿಕ ಸೌಲಭ್ಯಗಳು ಮಕ್ಕಳಿಗೆ, ಶಿಕ್ಷಕರಿಗೆ ದೊರೆಯುವಂತೆ ಶ್ರಮಿಸುತ್ತಿದ್ದಾರೆ. ಇಲಾಖೆ ವ್ಯಾಪ್ತಿಯಲ್ಲಿ ವೇತನಕ್ಕಾಗಿ, ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲು ಸಣ್ಣಮಟ್ಟದ ಗುಮಾಸ್ತರಿಂದ ಅಧಿಕಾರಿ ವರ್ಗದವರೆಗೆ ನೆಡೆಯುತ್ತಿರುವ ಅಕ್ರಮ ಹಣ ವಸೂಲಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಭ್ರಷ್ಟಾಚಾರ ಮುಕ್ತ ಇಲಾಖೆಯನ್ನಾಗಿ ಮಾಡಲಾಗುವುದು ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅವುಗಳನ್ನು ಚರ್ಚೆ, ಸಂವಾದ, ಸಲಹೆ, ಚಿಂತನೆ ನಡೆಸುವ ಮೂಲಕ ಕಾನೂನುಬದ್ಧವಾಗಿ ಪರಿಹರಿಸಲು ನಮ್ಮ ಸರ್ಕಾರ ಶ್ರಮಿಸುತ್ತಿದೆ. ವರ್ಗವಣೆಯಲ್ಲಿ ಸರಳೀಕರಣ, ಪತಿ-ಪತ್ನಿ ವರ್ಗಾವಣೆ, ಆರೋಗ್ಯ ಸಮಸ್ಯೆಗಳ ವರ್ಗವಣೆಗಳಿಗೆ ವಿಶೇಷ ಕಾನೂನು ರೂಪಿಸಿ ಶಿಕ್ಷಣರಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ದ್ವಿಗುಣಗೊಳಿಸಲು ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದವರೆಗೆ ಕಂಪ್ಯೂಟರ್‌ ಶಿಕ್ಷಣವನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಉಪನ್ಯಾಸಕರಿಗೆ ಕಾಲ್ಪನಿಕ ಭಡ್ತಿ, ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ, ಗುಣಮಟ್ಟದ ಸಮವಸ್ತ್ರ, ಪಾಠೊಪಕರಣ ನೀಡುವ ಮೂಲಕ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಶಿಕ್ಷಣ ಪಡೆದುಕೊಳ್ಳುವಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸುವುದಾಗಿ ತಿಳಿಸಿದರು.

ಒಂದು ವರ್ಷದ ಅವಧಿಯಲ್ಲಿ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ 1000 ಶಾಲೆಗಳಿಗೂ ಶುದ್ಧ ನೀರಿನ ಘಟಕಗಳನ್ನು ಅಳವಡಿಸಲು ಸುಮಾರು 2.98 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ಒತ್ತು ನೀಡುವುದಾಗಿ ಹೇಳಿದರು. ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಬಿ. ಸಿದ್ದೇಶ್‌, ಪಟ್ಟಣ ಪಂಚಾಯತ್‌ ಸದಸ್ಯರಾದ ಕೆ.ಸಿ. ರಮೇಶ್‌, ಪಿ.ಆರ್‌. ಮಲ್ಲಿಕಾರ್ಜುನ್‌, ಡಿ.ಎಸ್‌. ವಿಜಯ್‌, ಅಶೋಕ್‌, ಎಚ್‌.ಆರ್‌. ನಾಗರತ್ನ ವೇದಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್‌, ತಾಪಂ ಇಒ ತಾರಾನಾಥ, ಸಮಾಜ ಕಲ್ಯಾಣಾಧಿ ಕಾರಿ ಒ. ಪರಮೇಶ್ವರ್‌, ಬಿಜೆಪಿ ಕಾರ್ಯದರ್ಶಿ ರೂಪಾ ಸುರೇಶ್‌, ಉಪನ್ಯಾಸಕ ರವಿಶಂಕರ್‌, ಜಯ ನಾಯ್ಕ, ಶಿವಮೂರ್ತಿ, ಜಯಣ್ಣ ಹಾಗೂ ವಿವಿಧ ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next