ಹೊಳಲ್ಕೆರೆ: ಗೌರಿಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕೆಂಬುದು ಎಲ್ಲರ ಆಶಯವಾಗಿದೆ. ಪ್ರತಿಯೊಬ್ಬರೂ ಕಾನೂನು ಪಾಲನೆ ಮೂಲಕ ಹಬ್ಬವನ್ನು ಆಚರಿಸಲು ಪೊಲೀಸ್ ಇಲಾಖೆ ಸಹಕಾರ ನೀಡಲಿದೆ ಎಂದು ಚಿತ್ರದುರ್ಗ ಡಿವೈಎಸ್ಪಿ ಸಂತೋಷ್‌ಕುಮಾರ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಗೌರಿ ಗಣೇಶ ಹಬ್ಬದ ಪೂರ್ವಭಾವಿ ಸಭೆಯ ಆಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಟ್ಟಣ ಹಾಗೂ ಹಳ್ಳಿಯ ವ್ಯಾಪ್ತಿಯಲ್ಲಿರುವ ಯಾವುದೇ ಸಂಘಟನೆಗಳು ‘ಬನಾಯೇಂಗೆ ಮಂದಿರ್’ ಹಾಡುಗಳನ್ನು ಹಾಕದಂತೆ ನಿರ್ಬಂಧಿಸಲಾಗಿದೆ. ಹಬ್ಬದಾಚರಣೆಯಿಂದ ಶಾಂತಿ, ಸೌಹಾರ್ದತೆ, ಪರಸ್ಪರ ವಿಶ್ವಾಸ, ಭಾವೈಕ್ಯತೆ ಸೃಷ್ಟಿಯಾಗಬೇಕು. ಹಬ್ಬಗಳನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ಎನ್ನುವ ಭಾವನೆಯಿಂದ ಆಚರಣೆ ಮಾಡದೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸಂಘಟನಾತ್ಮಕವಾಗಿ ಮಾಡಬೇಕೆಂದರು.
ಪಟ್ಟಣದ ಶ್ರೀ ಗಜಾನನ ಉತ್ಸವ ಸಮಿತಿ ಹಮ್ಮಿಕೊಳ್ಳುವ 11 ದಿನಗಳ ಗಣೇಶೋತ್ಸವಕ್ಕೆ ಪೊಲೀಸ್ ರಕ್ಷಣೆ ನೀಡಲಾಗುತ್ತದೆ. ಜತೆಗೆ ಹಿಂದೂ ಮಹಾಗಣಪತಿ ವಿಸರ್ಜನೆಗೂ ಕಾನೂನು ಬದ್ಧವಾಗಿರುವ ರಕ್ಷಣೆ ನೀಡಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರತಿಯೊಬ್ಬರೂ ಕಾನೂನುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡು ಸಮಾಜದಲ್ಲಿ ಆಶಾಂತಿ ಸೃಷ್ಟಿಸುವಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಲೂಕಿನಲ್ಲಿರುವ ಯಾವುದೇ ಹಳ್ಳಿಯಿಂದ ಪಟ್ಟಣದವರೆಗೆ ಎಲ್ಲಿಯೇ ಗಣಪತಿ ಪ್ರತಿಷ್ಠಾಪಿಸಿದ್ದರೂ ಬೆಸ್ಕಾಂ, ಪಟ್ಟಣ ಪಂಚಾಯತ್, ಗ್ರಾಮದ ವ್ಯಾಪ್ತಿರುವವರು ಗ್ರಾಪಂ ಅಧಿಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು. ನಿರ್ಲಕ್ಷ್ಯ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಶಾಂತಿಸಭೆಯಲ್ಲಿ ತಹಶೀಲ್ದಾರ್ ನಾಗರಾಜ್, ಸಿಪಿಐ ರವೀಶ್, ಪಿಎಸ್‌ಐ ಮೋಹನ್, ಬೆಸ್ಕಾಂ ಇಂಜಿನಿಯರ್ ತಿಪ್ಪೇಸ್ವಾಮಿ, ಪಟ್ಟಣ ಪಂಚಾಯತ್ ಆರೋಗ್ಯಾಧಿಕಾರಿ ಪರಮೇಶ್ವರಪ್ಪ, ಗಜಾನನ ಸಮಿತಿ ಕಾರ್ಯಧ್ಯಕ್ಷ ಕೆ.ಸಿ. ರಮೇಶ್, ಪಪಂ ಸದಸ್ಯರಾದ ಬಿ.ಎಸ್. ರುದ್ರಪ್ಪ. ಪಿ.ಎಚ್. ಮುರುಗೇಶ್, ವಿಜಯ್, ಆಶೋಕ್, ವಿಜಯಸಿಂಹ ಖಟ್ರೋತ್,
ಸೈಯ್ಯದ್ ಸಜೀಲ್, ಸೈಯ್ಯದ್ ಮನ್ಸೂರ್, ಮುಖಂಡರಾದ ಜಯಸಿಂಹ ಖಟ್ರೋತ್, ಬಸವರಾಜ್ ಯಾದವ್, ನ್ಯಾಯವಾದಿ ಎಸ್. ವೇದಮೂರ್ತಿ, ಪತ್ರಕರ್ತ ಎಸ್.ಬಿ. ಶಿವರುದ್ರಪ್ಪ, ಹಿಂದೂ ಮಹಾಸಭಾ ಗಣಪತಿ ಉತ್ಸವದ ಮುಖಂಡ ಗಿರೀಶ್, ಶೇಖರ್, ನಟರಾಜ್ ಆಚಾರ್, ಮಂಜುನಾಥ, ಕಾಟಲಿಂಗಪ್ಪ ಮತ್ತಿತರರು ಭಾಗವಹಿಸಿದ್ದರು.
ಗಣಪತಿ ವಿಸರ್ಜನೆಗೆ ಡಿಜೆ ಸೌಂಡ್ ಸಿಸ್ಟಂ ಹಾಕಲು ಅವಕಾಶ ಇಲ್ಲ. ಗ್ರಾಮೀಣ ಭಾಗದಲ್ಲಿರುವ ಗಣೇಶೋತ್ಸವ ಸಮಿತಿಗಳು ವಿಸರ್ಜನೆ ಕಾಲಕ್ಕೆ ಎರಡು ಸಣ್ಣ ಮೈಕ್ ಬಳಸಬಹುದು. ಗಣಪತಿ ಮೂರ್ತಿಗಳ ವಿಸರ್ಜನೆಯನ್ನು ಸಂಜೆ 6 ಗಂಟೆಯೊಳಗೆ ಪೂರ್ಣಗೊಳಿಸಬೇಕು.
•
ಸಂತೋಷ್‌ಕುಮಾರ್,
ಚಿತ್ರದುರ್ಗ ಡಿವೈಎಸ್ಪಿ