ಹೊಳಲ್ಕೆರೆ: ಜನರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಉದ್ದೇಶದಿಂದ ಡಾ| ಶಿವಮೂರ್ತಿ ಮುರುಘಾ ಶರಣರು ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮವಾಗಿ ಹಮ್ಮಿಕೊಂಡಿರುವ ‘ಕಲ್ಯಾಣ ದರ್ಶನ’ ಕಾರ್ಯಕ್ರಮವನ್ನು ರಾಮಗಿರಿಯಲ್ಲಿ ಆ. 9 ರಂದು ನಡೆಸಲು ಉದ್ದೇಶಿಸಲಾಗಿದೆ. ಗ್ರಾಮದ ಪ್ರತಿಯೊಬ್ಬರೂ ಜಾತ್ಯತೀತ ಹಾಗೂ ಪಕ್ಷಾತೀತ ಮನೋಭಾವದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀ ಕರಿಸಿದ್ದೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಸಮಿತಿ ಮುಖ್ಯಸ್ಥ ರಾಮಗಿರಿ ರಾಮಣ್ಣ ಹೇಳಿದರು.
ತಾಲೂಕಿನ ರಾಮಗಿರಿ ಗ್ರಾಮದ ವಿರಕ್ತ ಮಠದಲ್ಲಿ ನಡೆದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಜನರಲ್ಲಿ ಅಡಗಿರುವ ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಿ ಜಾಗೃತಿ, ಚಿಂತನೆ, ಸಂವಾದ ಕಾರ್ಯಕ್ರಮಗಳನ್ನು ನಡೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುರುಘಾ ಶರಣರು ಬಸವಣ್ಣನವರ ಚಿಂತನೆಗಳನ್ನು ನಮ್ಮಲ್ಲಿ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅವರ ಆಶೋತ್ತರದಂತೆ ನಾವೆಲ್ಲರೂ ಜಾತಿ-ಪಕ್ಷ ಭೇದ ಮರೆತು ಜಾತ್ಯತೀತ ಮನೋಭಾವದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋಣ. ಕಾರ್ಯಕ್ರಮದ ಸಿದ್ಧತೆಗೆ ಯುವ ಸಂಘಟನೆಗಳು, ಸ್ತ್ರೀಶಕ್ತಿ ಸಂಘಗಳು ಸಹಕರಿಸಬೇಕು. ಗ್ರಾಮದ ಸ್ವಚ್ಛತೆ, ಕುಡಿಯುವ ನೀರು, ತಳಿರು ತೋರಣದ ಜವಾಬ್ದಾರಿಯನ್ನು ಗ್ರಾಪಂಗೆ ವಹಿಸಲಾಗಿದೆ ಎಂದರು.
ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಭಂಡಾರಿ ಜಯಣ್ಣ ಮಾತನಾಡಿ, ಆ. 9 ರಂದು ಬೆಳಗ್ಗೆ ಎಸ್‌ಜೆಎಂ ಶಾಲಾ ಆವರಣದಲ್ಲಿ ಡಾ| ಎಚ್.ಪಿ. ನಿಜಗುಣಸ್ವಾಮಿ ಅವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ. ತಾಲೂಕಿನ ಜನರು ಶಿಬಿರದ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿರಕ್ತ ಮಠದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವಪ್ರಕಾಶ್ ಮಾತನಾಡಿ, ಡಾ| ಮುರುಘ ಶರಣರ ನೇತೃತ್ವದಲ್ಲಿ ‘ಕಲ್ಯಾಣ ದರ್ಶನ’ ಕಾರ್ಯಕ್ರಮವನ್ನು ಆ. 9 ರಂದು ಸಂಜೆ 6 ಗಂಟೆಗೆ ವಿರಕ್ತ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಆ ಸಂದರ್ಭದಲ್ಲಿ ಮಳೆ ನೀರಿನ ಕೊಯ್ಲು ಬಗ್ಗೆ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮಬವನ್ನೂ ನಡೆಸಲಾಗುವುದು. ಸಂವಾದದಲ್ಲಿ ಗ್ರಾಮದಿಂದಷ್ಟೇ ಅಲ್ಲ, ಬೇರೆ ಬೇರೆ ಗ್ರಾಮಗಳಿಂದಲೂ ರೈತರು, ಸಾರ್ವಜನಿಕರು, ಸಂಘಟನೆಗಳ ಪದಾಧಿಕಾರಿಗಳು ಆಗಮಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹಡಪದ ಅಪ್ಪಣ್ಣ ಸಂಘದ ಜಿಲ್ಲಾ ಖಜಾಂಚಿ ಭಂಡಾರಿ ಉಮೇಶಣ್ಣ, ನಿವೃತ್ತ ಶಿಕ್ಷಕ ಪರಮೇಶ್ವರಪ್ಪ, ವಿರಕ್ತ ಮಠದ ಸಮಿತಿಯ ಕಾರ್ಯದರ್ಶಿ ಮೂಲೆಮನೆ ಶಿವಣ್ಣ, ಭಂಡಾರಿ ಶಿವು, ಗ್ರಾಪಂ ಕಾರ್ಯದರ್ಶಿ ಎಂ.ಆರ್. ಸ್ವಾಮಿ, ಗ್ರಾಮದ ಮುಖಂಡರಾದ ತೋಂಟಾರಾಧ್ಯ, ಓಂಕಾರಪ್ಪ, ರಾಜಾ ನಾಯ್ಕ, ಕುಂಬಾರ್ ಸಿದ್ದಪ್ಪ, ವಿಶ್ವನಾಥ್, ವರ್ತಕ ಭಂಡಾರಿ ಸುರೇಶ್, ಮೂಲೆಮನೆ ಜಯಣ್ಣ, ರಾಜಪ್ಪ, ತಿಪ್ಪೇಸ್ವಾಮಿ, ಸಂತೋಷ್, ಈರಪ್ಪ, ಬಸವನಗೌಡ್ರು ಮತ್ತಿತರರು ಇದ್ದರು.