Advertisement

ಭಾರತದಲ್ಲಿ ಜಾತೀಯತೆ ಜೇನುಗೂಡಿದ್ದಂತೆ

12:19 PM Aug 14, 2019 | Naveen |

ಹೊಳಲ್ಕೆರೆ: ಬಸವ ಸಮಾಜ ಎಂದರೆ ಶರಣ ಸಮಾಜ. ಅದು ಅಕ್ಕರೆ, ಅಂತಃಕರಣ ಹಾಗೂ ಅಪ್ಪಿಕೊಳ್ಳುವ ಸಮಾಜವಾಗಿತ್ತು ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಮುರುಘಾ ಮಠದ ಬಸವ ಕೇಂದ್ರ ಹಾಗೂ ಅವಿನಹಟ್ಟಿ ಗ್ರಾಮಸ್ಥರ ಸಹಯೋಗದಲ್ಲಿ ತಾಲೂಕಿನ ಆವಿನಹಟ್ಟಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆರ್ಶಿವಚನ ನೀಡಿದರು.

ನಮಗೆಲ್ಲ ಎರಡು ಜಾತಿಗಳು ಕಾಣುತ್ತವೆ. ಮುಟ್ಟಿಸಿಕೊಳ್ಳುವ ಜಾತಿ ಅಂದರೆ ಬುದ್ಧ, ಬಸವ, ಪೈಗಂಬರ್‌, ಕ್ರೈಸ್ತರ ಜಾತಿಗಳಾಗಿದ್ದರೆ ಮುಟ್ಟಿಸಿಕೊಳ್ಳದೇ ಇರುವುದು ಎಂದರೆ ಜನರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದಂತೆ ದೂರವಿರುವುದು. ಎಲ್ಲ ಸಮಾಜ ಸುಧಾರಕರು ಅಸ್ಪ್ರಶ್ಯತೆಯ ವಿರುದ್ಧ ಹೋರಾಡಿದರು. ಹಾಗಾಗಿ ಸಮಾಜದ ಕಲ್ಯಾಣಕ್ಕೆ ಶ್ರಮಿಸಿದ ಸರ್ವ ದಾರ್ಶನಿಕರ ಆಚಾರ-ವಿಚಾರಗಳನ್ನು ನೆನಪಿಸುವ ಕೆಲಸವನ್ನು ಮುರುಘಾ ಮಠ ಮಾಡುತ್ತಿದೆ ಎಂದರು.

ಮುರುಘಾ ಮಠ ಕೈಗೊಳ್ಳುತ್ತಿರುವ ಬಸವ ಚಿಂತನೆಯ ‘ಕಲ್ಯಾಣ ದರ್ಶನ’ ಕಾರ್ಯಕ್ರಮ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಮುರುಘಾ ಮಠ ಎಂದಿಗೂ ಎಲ್ಲ ಸಮುದಾಯದವರ ಬಳಿ ಹೋಗುತ್ತಿದೆ. ಸಮಾಜದಲ್ಲಿರುವ ಜಾತಿ ಕಂದಕವನ್ನು ನಿವಾರಣೆ ಮಾಡಲು ಬಸವಣ್ಣನವರ ಚಿಂತನೆಯನ್ನು ಬಿತ್ತರಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ಜಾತೀಯತೆ ಎನ್ನುವುದು ಜೇನುಗೂಡು ಇದ್ದಂತೆ. ಅದನ್ನು ಮುಟ್ಟುವುದು ಸುಲಭದ ಮಾತಲ್ಲ. ಆದರೆ ಅದರಲ್ಲಿ ಒಂದು ಸಮ ಸಮಾಜದ ಕಳಕಳಿ ಇದೆ. ಹಲವಾರು ಸಮಸ್ಯೆಗಳ ಮಧ್ಯೆಯೂ ಮುರುಘಾ ಮಠ ಜಾತ್ಯತೀತ ಸಮಾಜವನ್ನು ಕಟ್ಟುವ ಮೂಲಕ ಬಸವಣ್ಣನ ಚಿಂತನೆಯನ್ನು ಸಾಕಾರಗೊಳಿಸಲು ಯತ್ನಿಸುತ್ತಿದೆ ಎಂದು ತಿಳಿಸಿದರು.

‘ಮೌಡ್ಯಮುಕ್ತ ಸಮಾಜ’ ವಿಷಯದ ಕುರಿತು ಸಾಹಿತಿ ನಿರಂಜನ ದೇವರಮನೆ ಉಪನ್ಯಾಸ ನೀಡಿ, 12ನೇ ಶತಮಾನ ಮಹತ್ವಪೂರ್ಣವಾದುದು. ಸಮಾಜದ ಎಲ್ಲ ಜನರನ್ನು ಒಗ್ಗೂಡಿಸುವುದು ಬಸವಾದಿ ಶರಣರ ಕೆಲಸವಾಗಿತ್ತು. ಅಂದು ಕಾಯಕವೇ ಶ್ರೇಷ್ಠವಾಗಿತ್ತು. ಕಾಯಕದಲ್ಲಿ ದೇವರನ್ನು ಕಾಣಬೇಕು. ಕ್ರಿಯಾ ಶುದ್ಧಿ, ಭಾವ ಶುದ್ಧಿ ನಮ್ಮದಾಗಬೇಕು. ಕೆಲವು ಧಾರ್ಮಿಕರು ಮೌಡ್ಯ, ಕಂದಾಚಾರಗಳನ್ನು ನಮ್ಮಂತಹ ಜ್ಞಾನವಿಲ್ಲದವರ ಮೇಲೆ ಹೇರಿದರು. ಆದರೆ ವಚನಕಾರರು ಇದನ್ನು ಕಿತ್ತೂಗೆದರು. ಕಂದಾಚಾರಗಳಿಂದ ಮುಕ್ತರಾಗಲು ಚಲನಶೀಲರಾಗಬೇಕು. ಸೂತಕಗಳನ್ನು ಬಿಟ್ಟು ಬಿಡಬೇಕು. ಅರಿವನ್ನು ಪಡೆಯಬೇಕು ಎಂದು ಕರೆ ನೀಡಿದರು.

Advertisement

ಮಾಜಿ ಶಾಸಕ ಉಮಾಪತಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಬಹಳಷ್ಟು ಜನ ಯಾದವ ಸಮುದಾಯಕ್ಕೆ ಸೇರಿದವರು. ನಮ್ಮಲ್ಲಿ ಮೂಢನಂಬಿಕೆ ಜಾಸ್ತಿ ಇದೆ. ಮುರುಘಾ ಶರಣರು ಬರುವುದರಿಂದ ನಮ್ಮ ಊರು ಆವಿನಹಟ್ಟಿ, ಅರಿವಿನ ಹಟ್ಟಿಯಾಗಬೇಕು. ಊರಿನಲ್ಲಿ ಹಸು ಮತ್ತು ಎತ್ತುಗಳನ್ನು ಸಾಕುತ್ತಿದ್ದರು. ನಮ್ಮೂರಿನ ಎತ್ತುಗಳು ದೆಹಲಿಗೆ ಹೋದಾಗ ಮಹಾರಾಜರು ಬಹುಮಾನ ಕೊಟ್ಟ ಪರಂಪರೆ ಇದೆ. ಸಾಕಷ್ಟು ಮೌಡ್ಯ ಇದ್ದ ನಮ್ಮ ಊರಿನಲ್ಲಿ ಇಂದು ಬಹಳಷ್ಟು ಜನ ವಿದ್ಯಾವಂತರಾಗಿದ್ದಾರೆ. ಆದರೂ ಮೌಡ್ಯವಿದೆ. ನಮ್ಮ ಊರಿಗೂ ಮುರುಘಾ ಮಠಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಶ್ರೀ ಕೇತೇಶ್ವರ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶ್ರೀ ತಿಳುವಳ್ಳಿ ಸ್ವಾಮಿಗಳು, ಮುಖಂಡರಾದ ತಿರುಮಲೇಶ್‌, ನಾಗರಾಜಪ್ಪ, ಬಿ.ಪಿ. ಓಂಕಾರಪ್ಪ ಮತ್ತಿತರರು ಭಾಗವಹಿಸಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ರಾಮಚಂದ್ರಪ್ಪ ಸ್ವಾಗತಿಸಿದರು. ಶ್ರೀನಿವಾಸ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next