Advertisement

ಪ್ರಜಾಪ್ರಭುತ್ವ ಗೌರವಿಸದ ಶಾಸಕರ ತಿರಸ್ಕರಿಸಿ

01:21 PM Jul 19, 2019 | Naveen |

ಹೊಳಲ್ಕೆರೆ: ಸ್ವಾರ್ಥ ಸಾಧನೆ ಹಾಗೂ ಅಧಿಕಾರಕ್ಕಾಗಿ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿರುವ ಶಾಸಕರನ್ನು ಜನರು ತಿರಸ್ಕಾರ ಮಾಡಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಕರೆ ನೀಡಿದರು.

Advertisement

ಪಟ್ಟಣದ ಗಣಪತಿ ಕಲ್ಯಾಣಮಂಟಪದಲ್ಲಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ನಗರ ಘಟಕ ಹಾಗೂ ರೈತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬರಗಾಲವಿದ್ದು, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಇದರಿಂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮತ ಹಾಕಿದ ಜನರ ಋಣ ತೀರಿಸಲು ಹಾಗೂ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎನ್ನುವ ಉದ್ದೇಶದಿಂದ ರಾಜ್ಯದ ಯಾರಾದರೂ ಶಾಸಕರು ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅಧಿಕಾರಕ್ಕಾಗಿ ಮೂರೂ ಪಕ್ಷಗಳು ಕಸರತ್ತು ಮಾಡುತ್ತಿವೆ. ಈ ಪಕ್ಷಗಳು ದೇಶ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸಿವೆ. ರೈತ ಪರವಾದ ಒಂದೇ ಒಂದು ಯೋಜನೆಯನ್ನೂ ಜಾರಿಗೊಳಿಸಿಲ್ಲ. ಮತಕ್ಕಾಗಿ ಮೊಸಳೆ ಕಣ್ಣೀರು ಸುರಿಸಿ ರೈತರ ಮತ ಪಡೆದು ರೈತರಿಗೇ ವಿಷ ಹಾಕುತ್ತಿವೆ ಎಂದು ವಾಗ್ಧಾಳಿ ನಡೆಸಿದರು.

ಸಚಿವರು ಹಾಗೂ ಶಾಸಕರು ಅಭಿವೃದ್ಧಿ ಮಾಡುತ್ತಿದ್ದೇವೆಂದು ಭಾಷಣ ಮಾಡುತ್ತಾರೆ. ಆದರೆ ಅಭಿವೃದ್ಧಿ ಎಂದರೇನು ಎಂಬುದೇ ಗೊತ್ತಿಲ್ಲ. ಹಳೆ ಕಟ್ಟಡ ತೆಗೆದು ಹೊಸ ಕಟ್ಟಡ ಕಟ್ಟುವುದೇ ಅಭಿವೃದ್ಧಿಯೇ, ಕಾಮಗಾರಿಯಲ್ಲಿ ಹಣ ಹೊಡೆಯುವುದಷ್ಟೇ ಅವರ ಉದ್ದೇಶವೇ ಹೊರತು ಅದೇ ಅಭಿವೃದ್ಧಿಯಲ್ಲ. ರಾಜ್ಯದಲ್ಲಿರುವ ಎಲ್ಲಾ ರೈತರಿಗೂ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಎಲ್ಲಾ ಯುವಕರಿಗೂ ಉದ್ಯೋಗ, ಎಲ್ಲಾ ಮಕ್ಕಳಿಗೂ ಶಿಕ್ಷಣ, ಉತ್ತಮ ಆಹಾರ ನೀಡಬೇಕು. ಉತ್ತಮ ಆರೋಗ್ಯ ಸೇವೆ ದೊರೆಯಬೇಕು. ಎಲ್ಲೆಡೆ ಸ್ವಚ್ಛತೆ, ಶುದ್ಧ ಪರಿಸರ ನಿರ್ಮಾಣ ಮಾಡಬೇಕು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು. ಪ್ರತಿಯೊಂದು ಕುಟುಂಬ ಸಮೃದ್ಧಿಯಿಂದ ಬದುಕು ಕಟ್ಟಿಕೊಳ್ಳುವಂತೆ ಸೌಲಭ್ಯ ಒದಗಿಸುವುದೇ ಅಭಿವೃದ್ಧಿ ಎನ್ನುವ ಅರಿವು ಸರ್ಕಾರಕ್ಕಿಲ್ಲ ಎಂದು ಕುಟುಕಿದರು.

ರಾಜ್ಯದ ಪಾಲಿನ 3500 ಟಿಎಂಸಿ ಅಡಿ ನೀರು ಅನ್ಯರ ಪಾಲಾಗಿದೆ. ಆ ನೀರಿನ ಸದ್ಬಳಕೆಗೆ ನೀರಾವರಿ ಯೋಜನೆ ಕೈಗೊಳ್ಳಬೇಕು. ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು. ಆಗ ರಾಜ್ಯದಲ್ಲಿರುವ ಪ್ರತಿಯೊಬ್ಬ ರೈತನೂ ಉತ್ತಮವಾಗಿ ಬೆಳೆ ಬೆಳೆಯುತ್ತಾನೆ. ಬರಗಾಲ ಸಮಸ್ಯೆಯೂ ನಿವಾರಣೆಯಾಗಲಿದೆ ಎಂದು ಕೋಡಿಹಳ್ಳಿ ಪ್ರತಿಪಾದಿಸಿದರು.

Advertisement

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿ, ಕಳೆದ 20 ವರ್ಷಳಿಂದ ಭದ್ರಾ ಮೇಲ್ದಂಡೆ ಯೋಜನೆ ಸಲುವಾಗಿ ಹೋರಾಟ ನಡೆಸಲಾಗುತ್ತಿದೆ. ಆದರೆ ಯಾವುದೇ ಸರ್ಕಾರ ಕಾಮಗಾರಿಯನ್ನು ಪೂರ್ಣಗೂಳಿಸಿ ನೀರು ಹರಿಸುತ್ತಿಲ್ಲ. ಮತ ಪಡೆದುಕೊಳ್ಳಲು ಸುಳ್ಳು ಹೇಳಿಕೆ ನೀಡುತ್ತಿರುವ ಜನಪ್ರತಿನಿಧಿಗಳ ಮಾತು ನಂಬಿಕೊಂಡರೆ ನೀರು ಹರಿಯುವುದಿಲ್ಲ. ಆದ್ದರಿಂದ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು.

ಅಗ್ನಿಶಾಮಕ ದಳದ ನಿವೃತ್ತ ಅಧೀಕ್ಷಕ ಎನ್‌.ಆರ್‌. ಮಾರ್ಕಾಂಡೇಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ತಾಲೂಕು ಅಧ್ಯಕ್ಷ ಬಸವರಾಜಪ್ಪ, ಗೌರವಾಧ್ಯಕ್ಷ ಎಚ್.ಸಿ. ರಾಜು, ನಗರ ಘಟಕದ ಅಧ್ಯಕ್ಷ ಎಚ್.ಕೆ. ಲೋಕೇಶ್‌, ಗೌರವಾಧ್ಯಕ್ಷ ಬಸವನಕೊಟೆ ನಾಗರಾಜಪ್ಪ, ಉಪಾಧ್ಯಕ್ಷರಾದ ಶಿವಮೂರ್ತಿ, ವಿ. ಶಂಕ್ರಪ್ಪ, ಸಹ ಕಾರ್ಯದರ್ಶಿಗಳಾದ ಕುಮಾರ ಆಚಾರ್‌, ಮಲ್ಲಿಕಾರ್ಜುನ ನಾಡಿಗ್‌, ಕಾರ್ಯದರ್ಶಿ ಡಿ. ಮಲ್ಲಿಕಾರ್ಜುನ, ರಾಜಶೇಖರಪ್ಪ, ಸಂಪನ್ಮೂಲ ಸಮಿತಿ ಅಧ್ಯಕ್ಷೆ ಈ. ಗಂಗಮ್ಮ, ಖಜಾಂಚಿ ಸಿದ್ಧರಾಮಪ್ಪ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next