ಹೊಳಲ್ಕೆರೆ : ವಿಶ್ವ ಹಿಂದೂ ಪರಿಷತ್ ಹಾಗೂ ಶಾಸಕ ಎಂ. ಚಂದ್ರಪ್ಪ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಆರನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ಪಟ್ಟಣದಲ್ಲಿ ಶನಿವಾರ ಅದ್ಧೂರಿ ಶೋಭಾಯಾತ್ರೆ ನಡೆಯಿತು.
ಪಟ್ಟಣದಾದ್ಯಂತ ಕೇಸರಿ ಧ್ವಜಗಳು, ಸ್ವಾತಂತ್ರ್ಯ ಹೋರಾಟಗಾರರು, ಛತ್ರಪತಿ ಶಿವಾಜಿ, ಭಗತ್ ಸಿಂಗ್, ಕಾರ್ಗಿಲ್ ಯುದ್ಧದಲ್ಲಿ ಅಮರರಾದ ವೀರ ಯೋಧರ ಭಾವಚಿತ್ರಗಳ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಗಣಪತಿ ವೃತ್ತ ಸೇರಿದಂತೆ ವಿವಿಧ ಸ್ಥಳಗಳನ್ನು ಕೇಸರಿ ಬಣ್ಣದ ಪತಾಕೆಗಳಿಂದ ಅಲಂಕರಿಸಲಾಗಿತ್ತು.
ಬೆಳಿಗ್ಗೆ 11 ಗಂಟೆಗೆ ವಿಶ್ವ ಹಿಂದೂ ಪರಿಷತ್ ಮಹಾಗಣಪತಿ ಶೋಭಾಯಾತ್ರೆ ಆರಂಭವಾಯಿತು. ಶಾಸಕ ಎಂ. ಚಂದ್ರಪ್ಪ ಕೇಸರಿ ಧ್ವಜ ಬೀಸಿದರು ಹಾಗೂ ವಿಶ್ವ ಹಿಂದೂ ಪರಿಷತ್ ಸಂಚಾಲಕ ಬಸವರಾಜಜೀ ಅವರು ಗಣಪತಿಗೆ ಕೇಸರಿ ಶಾಲು ಹೊದೆಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಹುಬ್ಬಳ್ಳಿಯಿಂದ ವಿಶೇಷವಾಗಿರುವ ಮೂರು ಡಿಜೆ ಸೌಂಡ್ ಸಿಸ್ಟಂಗಳನ್ನು ತರಿಸಲಾಗಿತ್ತು. ಅವುಗಳಿಂದ ಹೊರಹೊಮ್ಮುತ್ತಿದ್ದ ದೇವರ ಭಕ್ತಿಗೀತೆಗಳು, ಹನುಮಾನ ಚಾಲಿಸಾ, ಜೈ ಹನುಮಾನ್ ಭಕ್ತಿಗೀತೆಗಳು ಹಾಗೂ ಚಿತ್ರಗೀತೆಗಳಿಗೆ ಯುವಕ-ಯುವತಿಯರು ನೃತ್ಯ ಮಾಡುತ್ತಾ ಸಂಭ್ರಮಿಸಿದರು. ಕೆಲವರು ಮಕ್ಕಳಿಗೆ ಕೇಸರಿ ಪೇಟ ತೊಡಿಸಿ ದೇವರ ಗೀತೆಗಳಿಗೆ ನೃತ್ಯ ಮಾಡುವಂತೆ ಉತ್ತೇಜನ ನೀಡುತ್ತಿದ್ದರು. ರೈತ ಸಂಘ, ವಕೀಲರ ಸಂಘ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಜನರು ಶೋಭಾಯಾತ್ರೆ ಸಾಗುವ ಮಾರ್ಗದ ಇಕ್ಕೆಲಗಳ ಕಟ್ಟಡದ ಮೇಲೆ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿಸಿಕೊಂಡರು.
ಪಟ್ಟಣಕ್ಕೆ ಆಗಮಿಸಿದ್ದ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹಿಂದೂ ಮಹಾಗಣಪತಿಗೆ ಪೂಜೆ ಸಲ್ಲಿಸಿದರು. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮಾರುತಿ, ಆರ್‌ಎಸ್‌ಎಸ್ ಪ್ರಮುಖ್ ಮುನಿಯಪ್ಪ, ಬಿಜೆಪಿ ಯುವ ಮುಖಂಡ ರಘುಚಂದನ್, ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ್, ಪಟ್ಟಣ ಪಂಚಾಯತ್ ಸದಸ್ಯರಾದ ಅಶೋಕ್, ಕೆ.ಸಿ. ರಮೇಶ್, ಬಸವರಾಜ್ ಯಾದವ್, ವಿಜಯ್, ಮಲ್ಲಿಕಾರ್ಜುನ್, ಎಚ್.ಆರ್. ನಾಗರತ್ನ ವೇದಮೂರ್ತಿ, ಮುಖಂಡರಾದ ಡಿ.ಸಿ. ಮೋಹನ್, ಮರುಳಸಿದ್ದೇಶ, ಶೇಖರ್ ಮೊದಲಾದವರು ಪಾಲ್ಗೊಂಡಿದ್ದರು.