ಹೊಳಲ್ಕೆರೆ: ಕಲ್ಯಾಣ ದರ್ಶನದ ಮಹತ್ತರವಾದ ಉದ್ದೇಶ ವಿಶ್ವ ದರ್ಶನ. ಯಾರು ಅಂತರಂಗ ಬಹಿರಂಗದಲ್ಲಿ ವಿಶ್ವ ಮಾನವ ಪ್ರಜ್ಞೆಯನ್ನು ಇಟ್ಟುಕೊಂಡಿರುತ್ತಾರೋ ಅವರ ಬದುಕಿನಲ್ಲಿ ವಿಶ್ವ ದರ್ಶನ ಭಾಗ್ಯವೂ ಇರುತ್ತದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಚಿತ್ರದುರ್ಗ ಮುರುಘಾ ಮಠದ ವತಿಯಿಂದ ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ರಂಗಮಂದಿರದಲ್ಲಿ ಶನಿವಾರ ನಡೆದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು. ಬದ್ಧತೆ ಮತ್ತು ಪ್ರಬುದ್ಧತೆಯನ್ನು ಜನರಲ್ಲಿ ಕಲ್ಯಾಣ ದರ್ಶನದ ಆಶಯ. ಕಲ್ಯಾಣ ದರ್ಶನ ಒಂದು ದಿನದ ಒಂದು ತಿಂಗಳ ಕಾರ್ಯಕ್ರಮವಲ್ಲ. ಇದು ನಿತ್ಯ ಕಲ್ಯಾಣವಾಗಿದೆ ಎಂದರು.
ಜಾತಿಗಳಿಗೆ ಮಿತಿಗಳಿದ್ದು, ಜಾತಿಯ ಮಿತಿಯನ್ನು ಮೀರಿದ ಶ್ರೇಷ್ಠರೆಂದರೆ ಬಸವಣ್ಣನವರು. ಅವರು ಜಾತಿಯಿಂದ ನೀತಿಯ ಕಡೆಗೆ ಬಂದರು. ವಿಶ್ವ ಪರಿಕಲ್ಪನೆಯ ಕಡೆ ಬಂದ ವಿಶಾಲ ಹೃದಯಿಯಾಗಿದ್ದರು. ಬಸವಾದಿ ಶರಣರ ಸೈದ್ಧಾಂತಿಕ ನಿಲುವು ತುಂಬ ಸ್ಪಷ್ಟ. ಆದರೆ ಇಂದಿನ ಜನಜೀವನದಲ್ಲಿ ಅಸ್ಪಷ್ಟತೆಗಳಿವೆ. ವಿಚಾರ ಮತ್ತು ಆಲೋಚನೆಗಳಲ್ಲಿ ಸ್ಪಷ್ಟತೆ ಇಲ್ಲ. ಆದರೆ ಬಸವಣ್ಣನವರಿಗೆ ಸಿಕ್ಕ 776 ಅಮರಗಣಂಗಳು ಬದ್ಧತೆ, ವಿಚಾರ ಸ್ಪಷ್ಟತೆಯಿಂದ ಇದ್ದಿದ್ದದರಿಂದ ಬಸವಣ್ಣನವರು ಕಲ್ಯಾಣ ಕಟ್ಟಲು ಸುಲಭವಾಯಿತು ಎಂದು ತಿಳಿಸಿದರು.
ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಭಾರತ ವಿಶ್ವದಲ್ಲೇ ವಿಶೇಷ ರಾಷ್ಟ್ರ. ವಿಶ್ವವೇ ಒಪ್ಪಿಕೊಳ್ಳುವ ದಾರ್ಶನಿಕರು, ದಾಸ ಶ್ರೇಷ್ಠರು, ಸಾಧಕರು ಇಲ್ಲಿ ಆಗಿಹೋಗಿದ್ದಾರೆ. ಅಂಥ ಬಸವಾದಿ ಪ್ರಮಥರ ವಿಚಾರಗಳನ್ನು ಮುರುಘಾ ಶರಣರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುತ್ತಿದ್ದಾರೆ. ಜಾತಿಯ ವಿಷಮತೆಯನ್ನು ನಾವು ಇಂದೂ ಕಾಣುತ್ತೇವೆ. ಮುರುಘಾ ಶರಣರು ಇದರ ವಿರುದ್ಧ ಸದಾ ಹೋರಾಟ ನಡೆಸಿಕೊಂಡು ಬಂದಿದ್ದಾರೆ ಎಂದು ಶ್ಲಾಘಿಸಿದರು. ಚಿಂತಕ ರಂಜಾನ್ ದರ್ಗಾ ಮಾತನಾಡಿ, ಇಡೀ ಜಗತ್ತು ಇಂದು ವಚನಗಳ ಕಡೆ ನೋಡುತ್ತಿದೆ. ಒಂದೊಂದು ವಚನವೂ ಜಗತ್ತನ್ನು ಎಚ್ಚರಿಸುತ್ತವೆ. ಶೋಷಣೆಗೆ ಒಳಗಾದವರು, ಬಡವರು, ಸಾಮಾನ್ಯರು ಶಾಂತಿಯನ್ನು ಬಯಸುತ್ತಾರೆ. ಎಲ್ಲ್ಲಿ ಪಾವಿತ್ರ್ಯತೆ, ವ್ಯಕ್ತಿ ಘನತೆ, ಸಮಾನತೆ ಇರುತ್ತದೆಯೋ ಅದು ಮುಕ್ತ ಕ್ಷೇತ್ರ ಹಾಗೂ ಶಿವಭಕ್ತರ ಕ್ಷೇತ್ರವಾಗಿರುತ್ತದೆ. ಈ ಕಲ್ಯಾಣ ದರ್ಶನ ನೀರಿನ ದರ್ಶನ, ಭೂಮಿಯ ದರ್ಶನ, ಆಹಾರ ದರ್ಶನ ಹೀಗೆ ಹಲವಾರು ಮುಖಗಳ ದರ್ಶನವನ್ನು ಮಾಡಿಸುವ ಕಾರ್ಯಕ್ರಮ. ಇದು ಜಗತ್ತಿನ ದರ್ಶನ, ಸರ್ವರ ದರ್ಶನವಾಗಿದೆ. ಕಲ್ಯಾಣದರ್ಶನ ಮಾನವ ಕುಲದ ದಿಗ್ದರ್ಶನ. ಕಲ್ಯಾಣದಲ್ಲಿ ಬಿಜ್ಜಳನ ಕಲ್ಯಾಣ ಮತ್ತು ಶರಣರ ಕಲ್ಯಾಣಗಳಿದ್ದವು. ಜನರನ್ನು ಹೊರತುಪಡಿಸಿದ ಕಲ್ಯಾಣ ಇಲ್ಲವೇ ಇಲ್ಲ. ಇದು ಜನಸಾಮಾನ್ಯರ, ಮಕ್ಕಳ, ಮಹಿಳೆಯರ ಕಲ್ಯಾಣ. ವಚನಗಳು ಇಡೀ ಜಗತ್ತಿಗೆ ಆಧಾರಸ್ತಂಭಗಳು ಎಂದು ತಿಳಿಸಿದರು.
ಕಲ್ಯಾಣ ದರ್ಶನ ಲಿಂಗಾಯತ ಸ್ವಾಮಿಗಳಿಂದ ಮತ್ತು ಮಠಗಳಿಂದ ಮಾತ್ರ ಸಾಧ್ಯ. ಮಾನವ ಸಮಾನತೆಯ ಪರವಾಗಿ ಮಾತನಾಡುವುದೇ ಕಲ್ಯಾಣ ದರ್ಶನ. ನಡೆ, ನುಡಿ, ಸಿದ್ಧಾಂತದಲ್ಲಿ, ಅರಿವು, ಆಚಾರದಲ್ಲಿ ಶರಣರು ಮಾದರಿಯಾಗಿದ್ದರು. ಮೊದಲು ಅಂತರಂಗದ ಶುದ್ಧಿಯಾಗಬೇಕು. ಬಳಿಕ ಬಹಿರಂಗದ ಶುದ್ಧಿ. ಮನುಷ್ಯ ಅಸ್ತಿತ್ವದಲ್ಲಿರುವುದು ಬೇರೆ, ಬದುಕುವುದು ಬೇರೆಯಾಗಿದೆ. ಬದುಕುವುದು ಎಂದರೆ ಶರಣರು ಇದ್ದಂತೆ. ಪ್ರೀತಿಯಿಂದ, ಸಮಾನತೆಯಿಂದ, ಶಾಂತಿಯಿಂದ ನೆಮ್ಮದಿಯಿಂದ ಬದುಕುವುದಾಗಿದೆ ಎಂದರು.
ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, 12ನೇ ಶತಮಾನದ ವಿಚಾರಪೂರ್ಣ ಸಂದೇಶಗಳು ಮರೆಯಾಗದೆ ಸಮಾಜಕ್ಕೆ ಸದಾ ಮಾರ್ಗದರ್ಶಿಯಾಗಿರಬೇಕೆಂಬ ಹಿನ್ನೆಲೆಯಲ್ಲಿ ಕಲ್ಯಾಣ ದರ್ಶನ ಕಾರ್ಯಕ್ರಮವನ್ನು ಮುರುಘಾ ಶರಣರು ಒಂದು ತಿಂಗಳ ಕಾಲ ಶ್ರಾವಣ ಮಾಸದಲ್ಲಿ ನಡೆಸಿದ್ದಾರೆ. ವಚನಗಳು ಒಂದು ವೇಳೆ ಆಂಗ್ಲಭಾಷೆಗೆ ತರ್ಜುಮೆ ಆಗಿದ್ದರೆ ಡಾ| ಅಂಬೇಡ್ಕರ್ ಸಹ ಬಸವಣ್ಣನವರ ಧರ್ಮದ ಅನುಯಾಯಿಯಾಗುತ್ತಿದ್ದರು ಎಂದು ತಿಳಿಸಿದರು.
ಮಾಜಿ ಶಾಸಕ ಎ.ವಿ. ಉಮಾಪತಿ ಮಾತನಾಡಿ, ಹಳ್ಳಿಗಳಲ್ಲಿರುವ ಮೌಡ್ಯತೆಯನ್ನು ಹೋಗಲಾಡಿಸುವಲ್ಲಿ, ಜನರಲ್ಲಿ ಶಾಂತಿ ಸೌಹಾರ್ದತೆ ಸಾಮರಸ್ಯತೆ ಭಾವೈಕ್ಯತೆ ಬೆಳೆಸುವಲ್ಲಿ ಮುರುಘಾ ಶರಣರು ಹಮ್ಮಿಕೊಂಡಿದ್ದ ಕಲ್ಯಾಣ ದರ್ಶನ ನೆರವಾಗಿದೆ. ಮುರುಘಾಮಠ ಹೀಗೆ ಅನೇಕ ಸಮಾಜಮುಖೀ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಮಾಜಿ ಶಾಸಕ ಪಿ. ರಮೇಶ್, ಜಿಪಂ ಮಾಜಿ ಅಧ್ಯಕ್ಷ ಎಲ್.ಬಿ. ರಾಜಶೇಖರ್, ಡಾ| ಎನ್.ಬಿ. ಸಜ್ಜನ್, ಪಪಂ ಸದಸ್ಯರಾದ ಕೆ.ಸಿ. ರಮೇಶ್, ಎಚ್.ಆರ್. ನಾಗರತ್ನ ವೇದಮೂರ್ತಿ ಪಿ.ಆರ್. ಮಲ್ಲಿಕಾರ್ಜುನ್, ಬಿ.ಎಸ್. ರುದ್ರಪ್ಪ, ವಿಜಯ, ಪೂರ್ಣಿಮಾ ಬಸವರಾಜ್, ಅಶೋಕ್, ಧ್ರುವಕುಮಾರ್, ಜಿಪಂ ಮಾಜಿ ಸದಸ್ಯ ಲೋಹಿತ್‌ಕುಮಾರ್, ತಾಪಂ ಮಾಜಿ ಸದಸ್ಯ ರಾಮಗಿರಿ ರಾಮಪ್ಪ, ಮಾರುತೇಶ್, ಎಸ್.ಬಿ. ಶಿವರುದ್ರಪ್ಪ ಇದ್ದರು. ನ್ಯಾಯವಾದಿ ಎಸ್. ವೇದಮೂರ್ತಿ ಸ್ವಾಗತಿಸಿದರು. ಪಪಂ ಸದಸ್ಯ ಮುರುಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಲಪ್ಪ ನಿರೂಪಿಸಿದರು. ಚಂದ್ರಶೇಖರ್ ವಂದಿಸಿದರು. ಇದಕ್ಕೂ ಮುನ್ನ ವಿಶೇಷ ಸಾರೋಟಿನಲ್ಲಿ ಡಾ| ಶಿವಮೂರ್ತಿ ಶರಣರು, ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ಶ್ರೀ ಬಸವ ಮಾಚಿದೇವ ಸ್ವಾಮೀಜಿಯವರನ್ನು ಮೆರವಣಿಗೆ ಮಾಡಲಾಯಿತು. ಸಮ್ಮಾಳ, ನಂದಿಕೋಲು ಜಾನಪದ ವಾದ್ಯಗಳು ಮೆರವಣಿಗೆಗೆ ಮೆರುಗು ನೀಡಿದವು.