Advertisement

ಜಲಮೂಲ ಅಭಿವೃದ್ಧಿಗೆ ಸಹಕರಿಸಿ

06:24 PM Sep 22, 2019 | Team Udayavani |

ಹೊಳಲ್ಕೆರೆ: ಪಟ್ಟಣದಲ್ಲಿರುವ ಜಲಮೂಲಗಳ ಅಭಿವೃದ್ಧಿ ಹಾಗೂ ಪಟ್ಟಣವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಲು ಪ್ರತಿಯೊಬ್ಬರೂ ಪಟ್ಟಣ ಪಂಚಾಯತ್‌ ಜೊತೆಗೆ ಕೈಜೋಡಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ಎ. ವಾಸಿಂ ಮನವಿ ಮಾಡಿದರು.

Advertisement

ಪಟ್ಟಣದ 1ಮತ್ತು 2ನೇ ವಾರ್ಡ್‌ಗಳಲ್ಲಿ ನಡೆದ ವಾರ್ಡ್‌ ಸಭೆ ಮತ್ತು ಜಲಶಕ್ತಿ ಆಭಿಯಾನದಲ್ಲಿ ಅವರು ಮಾತನಾಡಿದರು. ಚಿತ್ರದುರ್ಗ ಜಿಲ್ಲೆ ಮಳೆ ಇಲ್ಲದೆ ಬರಗಾಲದಿಂದ ತತ್ತರಿಸುತ್ತಿದೆ. ಜನರು ನೀರಿಲ್ಲದೆ ಕಂಗಾಲಾಗಿದ್ದಾರೆ. ಹಾಗಾಗಿ ಮಳೆನೀರು ಸಂಗ್ರಹ, ಇರುವ ನೀರಿನ ಸಂಕರಣೆ, ನೀರಿನ ಅಪವ್ಯಯ ಮಾಡುವುದನ್ನು ನಿಲ್ಲಿಸಬೇಕು. ಮನೆ ಮುಂದೆ ಗಿಡಗಳನ್ನು ಬೆಳೆಸಿ ಹಸಿರು ಪರಿಸರ ನಿರ್ಮಾಣ ಮಾಡಬೇಕೆಂದರು.

ಪಟ್ಟಣ ಪಂಚಾಯತ್‌ ಸದಸ್ಯ ಮಲ್ಲಿಕಾರ್ಜುನ್‌ ಮಾತನಾಡಿ, ನೀರು ಮನುಕುಲದ ಬದುಕಿಗೆ ಜೀವಜಲವಿದ್ದಂತೆ. ನೀರಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇಂದು ಜಲಮೂಲಗಳು
ಬತ್ತಿರುವುದರಿಂದ ಜಿಲ್ಲೆಯಲ್ಲಿ ಭೀಕರ ಬಲಗಾಲ ಕಾಣಿಸಿಕೊಂಡಿದೆ. ಜನರು ನೀರಿಗಾಗಿ ಹೋರಾಟ ನಡೆಸುವ ಸ್ಥಿತಿ ತಲುಪಿದ್ದಾರೆ. ಹಾಗಾಗಿ ನಮ್ಮ ಸುತ್ತಮುತ್ತ ಇರುವ ಜಲಮೂಲಗಳಾದ ಕೆರೆಗಳು,
ಹೊಂಡಗಳು, ಬಾವಿಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಅನಗತ್ಯವಾಗಿ ಹರಿಯುವ ನೀರನ್ನು ಭೂಮಿಯಲ್ಲಿ ಇಂಗಿಸಬೇಕೆಂದರು.

ಪಪಂ ಸದಸ್ಯೆ ಎಚ್‌.ಆರ್‌. ನಾಗರತ್ನ ವೇದಮೂರ್ತಿ ಮಾತನಾಡಿ, ವಿಶ್ವದಲ್ಲಿ ಕುಡಿಯಲು ಯೋಗ್ಯವಾಗಿರುವ ನೀರು ಕೇವಲ ಶೇ. 3ರಷ್ಟಿದೆ. ಅದಕ್ಕಾಗಿ ಪ್ರತಿ ಹನಿ ಜಲವನ್ನು ಸಂಗ್ರಹಿಸುವ ಕೆಲಸ ಮಾಡಬೇಕು. ಮಳೆ ಇಲ್ಲದೆ ಜನರು ಸಂಕಷ್ಟದಲ್ಲಿದ್ದಾರೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ನೀರಿನ ಹಾಹಾಕಾರ ಕಾಣಿಸಿಕೊಂಡಿದೆ. ಪ್ರಾಣಿ ಪಕ್ಷಿಗಳು, ಗಿಡ ಮರಗಳು, ಹಸಿರಿನ ಗಿರಿಗಳು, ಹಳ್ಳ ಕೊಳ್ಳಗಳು ನೀರಿಲ್ಲದೆ ನಶಿಸುತ್ತಿವೆ. ನೀರಿನ ಉಪಯೋಗದ ಕುರಿತು ಜನರು ಜಾಗೃತರಾಗಬೇಕು. ನೀರನ್ನು ಉಳಿಸುವ ಕೆಲಸ ಜತೆ ಸಂಗ್ರಹಿಸಿ ಭೂಮಿಯನ್ನು ತಂಪಾಗಿಸುವ ಕೆಲಸ ಮಾಡಬೇಕೆಂದರು.

ಪಟ್ಟಣ ಪಂಚಾಯತ್‌ ಸದಸ್ಯರಾದ ವಿಜಯ್‌, ಶ್ರೀ ವೀರಭದ್ರೇಶ್ವರ ಸಮಿತಿ ಅಧ್ಯಕ್ಷ ಎಸ್‌.ಬಿ. ಮಲ್ಲಪ್ಪ, ಕಂದಾಯ ಅಧಿಕಾರಿ ಕುಮಾರ್‌, ನೌಶಾದ್‌, ಆರೋಗ್ಯಾಧಿಕಾರಿ ಪರಮೇಶ್ವರಪ್ಪ, ನೀರು ಪೂರೈಕೆ ಅಧಿಕಾರಿ ಉನ್ನಿಕುಮಾರ್‌, ಸೇವಾಲಾಲ್‌ ಐಟಿಐ ಕಾಲೇಜು ಅಧ್ಯಕ್ಷ ಚಂದ್ರ ನಾಯ್ಕ, ಮಾಜಿ ಸದಸ್ಯ ಎಸ್‌.ಬಿ. ಶಿವರುದ್ರಪ್ಪ, ಶೇಖರ್‌, ರೈತ ಸಂಘದ ಕಾರ್ಯದರ್ಶಿ ಅಜಯ್‌ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಎಂ.ಎಂ. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಜಲಶಕ್ತಿ ಕುರಿತು ಜನ ಜಾಗೃತಿ ಕಿರು ನಾಟಕ ಪ್ರದರ್ಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next